'ಸಂವಿಧಾನದ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ': ಅಜಯ್ ದೇವಗನ್ ಬೆಂಬಲಕ್ಕೆ ನಿಂತ ಕಂಗನಾ ರಣಾವತ್

Update: 2022-04-30 11:49 GMT

ಮುಂಬೈ:  ಭಾರತದ ಸಂವಿಧಾನವು ಹಿಂದಿಗೆ 'ರಾಷ್ಟ್ರೀಯ ಭಾಷೆ' ಸ್ಥಾನಮಾನವನ್ನು ನೀಡಿದೆ. ಹಿಂದಿ ಭಾರತದ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಜಿ ಹೇಳಿದರೆ ಅದು ತಪ್ಪೇನಲ್ಲ ಎಂದು ಬಾಲಿವುಡ್  ನಟಿ ಕಂಗನಾ ರಣಾವತ್  ಸಮರ್ಥಿಸಿಕೊಂಡಿದ್ದಾರೆ.

 “ನೀವು ದೇಶದಾದ್ಯಂತ ಪ್ರಯಾಣಿಸಿದಾಗ ಅಥವಾ ಜರ್ಮನಿ, ಸ್ಪೇನ್  ಅಥವಾ ಫ್ರೆಂಚ್ ದೇಶಗಳಿಗೆ ಹೋದಾಗ ಅವರು ತಮ್ಮ ಭಾಷೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ. ವಸಾಹತುಶಾಹಿ ಇತಿಹಾಸವು ಎಷ್ಟೇ ಕರಾಳವಾಗಿರಲಿ, ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್, ಇಂಗ್ಲಿಷ್ ಆ ಕೊಂಡಿಯಾಗಿ ಮಾರ್ಪಟ್ಟಿದೆ. ಇಂದು ದೇಶದೊಳಗೆ, ನಾವು ಸಂವಹನ ಮಾಡಲು ಇಂಗ್ಲಿಷ್ ಬಳಸುತ್ತಿದ್ದೇವೆ. ಅದು ಸಂಪರ್ಕ ಭಾಷೆ ಆಗಬೇಕೇ ಅಥವಾ ಹಿಂದಿ ಅಥವಾ ಸಂಸ್ಕೃತ ಅಥವಾ ತಮಿಳು ಸಂಪರ್ಕ ಕೊಂಡಿ ಆಗಬೇಕೇ? ನಾವು ಆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಆದ್ದರಿಂದ, ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಕಂಗನಾ ಹೇಳಿದರು.

"ಈಗಿನಂತೆ ಸಂವಿಧಾನದ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ. ಹಾಗಾಗಿ ಹಿಂದಿ ಭಾರತದ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಜಿ ಹೇಳಿದರೆ ಅದು ತಪ್ಪಲ್ಲ. ಆದರೆ ಸಂಸ್ಕೃತ ನಮ್ಮ ರಾಷ್ಟ್ರ ಭಾಷೆಯಾಗಬೇಕು ಎಂದು ನಾನು ಹೇಳುತ್ತೇನೆ. ಹಿಂದಿ, ಜರ್ಮನಿ, ಇಂಗ್ಲಿಷ್, ಫ್ರೆಂಚ್ ಮುಂತಾದ ಭಾಷೆಗಳು ಸಂಸ್ಕೃತದಿಂದ ಹುಟ್ಟಿಕೊಂಡಿವೆ. ನಮಗೆ ಸಂಸ್ಕೃತ ಏಕೆ ರಾಷ್ಟ್ರ ಭಾಷೆಯಾಗಿಲ್ಲ? ಶಾಲೆಗಳಲ್ಲಿ ಏಕೆ ಆ ಭಾಷೆ ಕಡ್ಡಾಯವಾಗಿಲ್ಲ? ಅದು ನನಗೆ ಗೊತ್ತಿಲ್ಲ!  ಕೇಂದ್ರ ಸರಕಾರವು ಬಳಕೆಗೆ ಎರಡು ಅಧಿಕೃತ ಭಾಷೆಗಳನ್ನು (ಇಂಗ್ಲಿಷ್ ಮತ್ತು ಹಿಂದಿ ) ಹೊಂದಿದೆ. ವಿವಿಧ ರಾಜ್ಯಗಳು ಅಧಿಕೃತ ಉದ್ದೇಶಗಳಿಗಾಗಿ ತಮ್ಮದೇ ಆದ ವಿಭಿನ್ನ ಭಾಷೆಗಳನ್ನು ಬಳಸುತ್ತವೆ ಎಂದರು.

ಇತ್ತೀಚೆಗೆ, ನಟ ಅಜಯ್ ದೇವಗನ್ ಅವರು ಕನ್ನಡ ನಟ ಕಿಚ್ಚ ಸುದೀಪ್ ಅವರು ಹಿಂದಿ ಹಾಗೂ  ಕನ್ನಡ ಚಿತ್ರರಂಗ ಮತ್ತು ಭಾಷೆಗಳ ಬಗ್ಗೆ ಮಾಡಿದ ಕಾಮೆಂಟ್‌ಗಳಿಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿ ಬಿರುಗಾಳಿ ಎಬ್ಬಿಸಿದ್ದರು. ಅಜಯ್ ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆ ಎಂದು ಕರೆದಿದ್ದರು. ಆದಾಗ್ಯೂ, ಭಾರತವು ವಾಸ್ತವವಾಗಿ ರಾಷ್ಟ್ರೀಯ ಭಾಷೆಯನ್ನು ಹೊಂದಿಲ್ಲ ಎಂದು ಹಲವರು ಗಮನಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News