ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿನಯ ಮೋಹನ ಕ್ವಾತ್ರಾ ಅಧಿಕಾರ ಸ್ವೀಕಾರ

Update: 2022-05-01 15:09 GMT

ಹೊಸದಿಲ್ಲಿ, ಮೇ 1: ಉಕ್ರೇನ್ ಬಿಕ್ಕಟ್ಟು ಸೇರಿದಂತೆ ವಿವಿಧ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ನಡುವೆಯೇ ಅನುಭವಿ ರಾಜತಾಂತ್ರಿಕ ವಿನಯ ಮೋಹನ ಕ್ವಾತ್ರಾ ಅವರು ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ರವಿವಾರ ಅಧಿಕಾರ ಸ್ವೀಕರಿಸಿದ್ದಾರೆ.

1988ರ ತಂಡದ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿಯಾಗಿರುವ ಕ್ವಾತ್ರಾ ಶನಿವಾರ ಸೇವೆಯಿಂದ ನಿವೃತ್ತರಾದ ಹರ್ಷವರ್ಧನ ಶ್ರಿಂಗ್ಲಾರ ಉತ್ತರಾಧಿಕಾರಿಯಾಗಿದ್ದಾರೆ.

ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ಕ್ವಾತ್ರಾ ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾರತದ ನೆರೆಕರೆ ರಾಷ್ಟ್ರಗಳು ಹಾಗು ಅಮೆರಿಕ, ಚೀನಾ ಮತ್ತು ಯುರೋಪ್ ಜೊತೆ ವ್ಯವಹಾರಗಳಲ್ಲಿ ಕ್ವಾತ್ರಾ ಹೆಚ್ಚಿನ ಪರಿಣತಿಯನ್ನು ಹೊಂದಿದ್ದಾರೆ. ನೇಪಾಳಕ್ಕೆ ರಾಯಭಾರಿಯಾಗಿ ನೇಮಕಗೊಳ್ಳುವ ಮುನ್ನ ಕ್ವಾತ್ರಾ 2017 ಆಗಸ್ಟ್ ನಿಂದ 2020 ಫೆಬ್ರವರಿವರೆಗೆ ಫ್ರಾನ್ಸ್‌ ನಲ್ಲಿ ಭಾರತದ ರಾಯಭಾರಿಯಾಗಿದ್ದರು.
32 ವರ್ಷಗಳಿಗೂ ಹೆಚ್ಚಿನ ರಾಜತಾಂತ್ರಿಕ ಅನುಭವವನ್ನು ಹೊಂದಿರುವ ಕ್ವಾತ್ರಾ, 2015-17ರ ನಡುವೆ ಪ್ರಧಾನಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆಯನ್ನೂ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News