ಲಸಿಕೆ ಪಡೆಯುವಂತೆ ಯಾರನ್ನೂ ಒತ್ತಾಯಿಸುವಂತಿಲ್ಲ: ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪು

Update: 2022-05-02 15:22 GMT

ಹೊಸದಿಲ್ಲಿ,ಮೇ 2: ಕೋವಿಡ್ ಲಸಿಕೆಯನ್ನು ಪಡೆಯುವಂತೆ ದೇಶದ ಯಾವುದೇ ವ್ಯಕ್ತಿಯನ್ನು ಬಲವಂತಗೊಳಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಮಹತ್ವದ ತೀರ್ಪೊಂದರಲ್ಲಿ ಸ್ಪಷ್ಟಪಡಿಸಿದೆ. ಭಾರತದ ಹಾಲಿ ಲಸಿಕೆ ನೀತಿಯು ಅಸಮಂಜಸವಾಗಿದೆ ಮತ್ತು ನಿರಂಕುಶತೆಯ ಅಭಿವ್ಯಕ್ತಿಯಿಂದ ಕೂಡಿದೆ ಎಂದು ಹೇಳಲಾಗುವುದಿಲ್ಲ ಎಂದೂ ನ್ಯಾಯಾಲಯವು ತಿಳಿಸಿತು.

ಕೋವಿಡ್ ಲಸಿಕೆ ನೀತಿಯ ಪರಿಷ್ಕರಣೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು,‌ ಯಾವುದೇ ವ್ಯಕ್ತಿಯನ್ನು,ಆತನ ಅಥವಾ ಆಕೆಯ ಇಚ್ಛೆಯ ವಿರುದ್ಧವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತಗೊಳಿಸುವಂತಿಲ್ಲ ಎಂದು ಹೇಳಿತು. 

ದೈಹಿಕ ಸ್ವಾಯತ್ತತೆಯನ್ನು ಪರಿಗಣಿಸಿ ದೈಹಿಕ ಸಮಗ್ರತೆಯು ಸಂವಿಧಾನದ ವಿಧಿ 21ರಡಿ ರಕ್ಷಣೆಯನ್ನು ಹೊಂದಿದೆ. ಲಸಿಕೆ ಪಡೆಯುವಂತೆ ಯಾರನ್ನೂ ಒತ್ತಾಯಿಸುವಂತಿಲ್ಲ. ಆದರೆ ಸಮುದಾಯ ಆರೋಗ್ಯದ ಹಿತಾಸಕ್ತಿಯಲ್ಲಿ ವೈಯಕ್ತಿಕ ಹಕ್ಕುಗಳ ಮೇಲೆ ಕೆಲವು ಮಿತಿಗಳನ್ನು ಹೇರಬಹುದು ಎಂದು ತಿಳಿಸಿತು.

ಲಸಿಕೆ ಹಾಕಿಸಿಕೊಳ್ಳದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಿರುವ ರಾಜ್ಯ ಸರಕಾರಗಳು ಮತ್ತು ಸಂಸ್ಥೆಗಳ ಕ್ರಮ ಸಮರ್ಪಕವಲ್ಲ ಮತ್ತು ಪ್ರಸ್ತುತ ಅಸ್ತಿತ್ವದಲ್ಲಿರುವ ಸ್ಥಿತಿಗಳಲ್ಲಿ ಅದನ್ನು ಹಿಂದೆಗೆದುಕೊಳ್ಳಬೇಕು ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,‘ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವವರೆಗೆ ಪ್ರಸ್ತುತ ಆದೇಶವನ್ನು ಪಾಲಿಸುವಂತೆ,ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸದಂತೆ ಹಾಗೂ ಈಗಾಗಲೇ ಇಂತಹ ನಿರ್ಬಂಧಗಳಿದ್ದರೆ ಅವುಗಳನ್ನು ಹಿಂದೆಗೆದುಕೊಳ್ಳುವಂತೆ ನಾವು ಸೂಚಿಸುತ್ತೇವೆ ’ಎಂದು ತಿಳಿಸಿತು.

ಲಸಿಕೆಯ ಪರಿಣಾಮಗಳನ್ನು ವರದಿ ಮಾಡುವ ವ್ಯಕ್ತಿಗಳ ಮಾಹಿತಿಗಳೊಂದಿಗೆ ರಾಜಿ ಮಾಡಿಕೊಳ್ಳದೆ ಸಾರ್ವಜನಿಕವಾಗಿ ಲಭ್ಯ ವ್ಯವಸ್ಥೆಯೊಂದರಲ್ಲಿ ಲಸಿಕೆಯ ಅಡ್ಡಪರಿಣಾಮಗಳನ್ನು ಯಾವುದೇ ವಿಳಂಬವಿಲ್ಲದೆ ಪ್ರಕಟಿಸುವಂತೆ ಪೀಠವು ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿತು.

ಕೋವಿಡ್ ಲಸಿಕೆಗಳ ಕ್ಲಿನಿಕಲ್ ಟ್ರಯಲ್‌ಗಳ  ದತ್ತಾಂಶಗಳನ್ನು ಬಹಿರಂಗಗೊಳಿಸುವಂತೆ ಮತ್ತು ಕಡ್ಡಾಯ ಲಸಿಕೆ ನೀಡಿಕೆಯು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮಾಜಿ ಸದಸ್ಯ ಡಾ.ಜಾಕೋಬ್ ಪುಲಿಯೆಲ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News