ಉಸ್ಮಾನಿಯಾ ವಿವಿಗೆ ರಾಹುಲ್ ಭೇಟಿ ಕುರಿತು ವಿವಾದ, ನ್ಯಾಯಾಲಯದ ಮೆಟ್ಟಿಲೇರಿದ ವಿದ್ಯಾರ್ಥಿಗಳು

Update: 2022-05-02 15:37 GMT
PHOTO PTI

ಹೈದರಾಬಾದ್,ಮೇ 2: ಇಲ್ಲಿಯ ಉಸ್ಮಾನಿಯಾ ವಿವಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಉದ್ದೇಶಿತ ಭೇಟಿಯ ಕುರಿತು ಭಾರೀ ವಿವಾದ ಸೃಷ್ಟಿಯಾಗಿದೆ. ರಾಹುಲ್ ಮೇ 6 ಮತ್ತು 7ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದು, ಇತರ ಕಾರ್ಯಕ್ರಮಗಳ ಜೊತೆಗೆ ವಿವಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ರಾಹುಲ್ ಭೇಟಿಗೆ ಅನುಮತಿಯನ್ನು ಪಡೆಯಲು ವಿದ್ಯಾರ್ಥಿಗಳು ಮನವಿಯನ್ನು ಸಲ್ಲಿಸುವುದರೊಂದಿಗೆ ವಿವಾದವು ಈಗ ನ್ಯಾಯಾಲಯದ ಮೆಟ್ಟಲನ್ನೇರಿದೆ.
 
ರಾಹುಲ್ ಮೇ 7ರಂದು ಉಸ್ಮಾನಿಯಾ ವಿವಿ ಕ್ಯಾಂಪಸ್‌ನಲ್ಲಿ ಭೇಟಿ ನೀಡುವ ನಿರೀಕ್ಷೆಯಿದೆ. ಅವರು ವಿದ್ಯಾರ್ಥಿಗಳೊಂದಿಗೆ ‘ರಾಜಕೀಯೇತರ ಸಂವಾದ ’ವನ್ನು ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಕ್ಯಾಂಪಸ್‌ನಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ,ಹೀಗಾಗಿ ರಾಹುಲ್ ಭೇಟಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

2017,ಜೂನ್‌ನಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಕ್ಯಾಂಪಸ್‌ನಲ್ಲಿ ರಾಜಕೀಯ ಸೇರಿದಂತೆ ಯಾವುದೇ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಅವಕಾಶ ನೀಡದಿರಲು ನಿರ್ಣಯವೊಂದನ್ನು ವಿವಿಯು ಅಂಗೀಕರಿಸಿದೆ ಎಂದು ಅಧಿಕಾರಿಗಳು ಬೆಟ್ಟು ಮಾಡಿದ್ದಾರೆ.

ಆದರೆ ಬೋಧಕ ವೃಂದದ ಒಂದು ವರ್ಗವು ರಾಹುಲ್ ಭೇಟಿಯನ್ನು ಬೆಂಬಲಿಸಿದೆ. ರಾಹುಲ್ ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಬರುವುದಾದರೆ ಅದು ರಾಜಕೀಯವಲ್ಲ,ಬೌದ್ಧಿಕ ಚಟುವಟಿಕೆಯಾಗುತ್ತದೆ ಎಂದು ಕಾನೂನು ಪ್ರಾಧ್ಯಾಪಕ ಜಿ.ವಿನೋದ ಕುಮಾರ ಹೇಳಿದರು. ರಾಹುಲ್ ಭೇಟಿಗೆ ಅನುಮತಿ ನಿರಾಕರಣೆಯ ವಿರುದ್ಧ ಎನ್ಎಸ್ಯುಐ ಕಾರ್ಯಕರ್ತರು ರವಿವಾರ ಕ್ಯಾಂಪಸ್‌ನಲ್ಲಿ  ಪ್ರತಿಭಟನೆ ನಡೆಸಿದ್ದು,ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಟಿಆರ್‌ಎಸ್‌ನ ವಿದ್ಯಾರ್ಥಿ ಘಟಕ ಮತ್ತು ಎಬಿವಿಪಿ ಕೂಡ ಪ್ರತಿಭಟನೆಗಳನ್ನು ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News