ಯಾವ ಭಾಷೆ ಮಾತನಾಡಬೇಕೆಂಬುದನ್ನು ನಿರ್ಧರಿಸುವ ಹಕ್ಕನ್ನು ಜನರು ಹೊಂದಿದ್ದಾರೆ: ಸೋನು ನಿಗಮ್
ಹೊಸದಿಲ್ಲಿ: ಹಿಂದಿ ರಾಷ್ಟ್ರ ಭಾಷೆ ಕುರಿತಂತೆ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕನ್ನಡ ನಟ ಸುದೀಪ್ ನಡುವೆ ಕಳೆದ ವಾರ ನಡೆದ ಟ್ವಿಟರ್ ವಾಕ್ಸಮರದ ಕುರಿತಂತೆ ಗಾಯಕ ಸೋನು ನಿಗಮ್ ಸ್ವಾರಸ್ಯಕರ ಉತ್ತರದ ಮೂಲಕ ತಿರುಗೇಟು ನೀಡಿದ್ದಾರೆ.
''ನನಗೆ ಗೊತ್ತಿರುವ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಬರೆದಿಲ್ಲ. ಈ ಕುರಿತು ನಾನು ತಜ್ಞರ ಜತೆಗೂ ಮಾತನಾಡಿದ್ದೇನೆ. ದೇಶದಲ್ಲಿ ಗರಿಷ್ಠ ಸಂಖ್ಯೆಯ ಜನರು ಮಾತನಾಡುವ ಭಾಷೆ ಹಿಂದಿಯಾಗಿದೆ. ಇದು ನನಗೆ ಅರ್ಥವಾಗುತ್ತದೆ. ಆದರೆ ತಮಿಳು ಜಗತ್ತಿನ ಅತ್ಯಂತ ಹಳೆಯ ಭಾಷೆಯೆಂದು ನಮಗೆ ಗೊತ್ತಿದೆಯೇ? ತಮಿಳು ಮತ್ತು ಸಂಸ್ಕೃತದ ಕುರಿತೂ ಚರ್ಚೆ ನಡೆಯುತ್ತಿದೆ. ಜಗತ್ತಿನಲ್ಲಿಯೇ ಅತ್ಯಂತ ಹಳೆಯ ಭಾಷೆ ತಮಿಳು ಎಂದು ಜನರು ಹೇಳುತ್ತಿದ್ದಾರೆ''ಎಂದು 'ಪದ್ಮ ಶ್ರೀ' ಪ್ರಶಸ್ತಿ ವಿಜೇತರಾಗಿರುವ ಸೋನು ನಿಗಮ್ ಹೇಳಿದರು.
"ನಮಗೆ ಇನ್ನೊಂದು ಸಮಸ್ಯೆ ಬೇಕೇ?ನಮ್ಮಲ್ಲಿರುವ ಸಮಸ್ಯೆಗಳೇನಾದರೂ ಕಡಿಮೆ ಇವೆಯೇ? ಇತರರ ಮೇಲೆ ಒಂದು ಭಾಷೆಯನ್ನು ಹೇರುವ ಮೂಲಕ ನಾವು ಸಾಮರಸ್ಯವನ್ನು ಹದಗೆಡಿಸುತ್ತಿದ್ದೇವೆ. ತಮಿಳು ಭಾಷಿಕರೂ ಹಿಂದಿ ಮಾತನಾಡಬೇಕು ಎಂದರೆ ಅವರು ಮಾತನಾಡುತ್ತಾರೆಯೇ, ತಾವು ಯಾವ ಭಾಷೆ ಮಾತನಾಡಬೇಕು ಎಂದು ನಿರ್ಧರಿಸುವ ಹಕ್ಕನ್ನು ಜನರು ಹೊಂದಿದ್ದಾರೆ''ಎಂದು ಸೋನು ನಿಗಮ್ ಹೇಳಿದರು.
``ಛೋಡೋ ಯಾರ್(ಬಿಟ್ಟುಬಿಡಿ ಇದನ್ನು), ಪಂಜಾಬಿ ಜನರು ಪಂಜಾಬಿ ಭಾಷೆ ಮಾತನಾಡಬೇಕು, ತಮಿಳು ಜನರು ತಮ್ಮ ಭಾಷೆ ಮಾತನಾಡಬೇಕು. ಅವರಿಗೆ ಇಂಗ್ಲಿಷ್ ಬರುತ್ತದೆಯಾದರೆ ಅವರು ಇಂಗ್ಲಿಷ್ ಮಾತನಾಡಲಿ, ನಮ್ಮ ಕೋರ್ಟುಗಳಲ್ಲೂ ತೀರ್ಪುಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗುತ್ತದೆ'' ಎಂದು 32 ಭಾಷೆಗಳಲ್ಲಿ ಹಾಡುಗಳನ್ನು ಹಾಡಿರುವ ಸೋನು ನಿಗಮ್ ಹೇಳಿದರು.
ಬೀಸ್ಟ್ ಸ್ಟುಡಿಯೋಸ್ ಸ್ಥಾಪಕ ಮತ್ತು ಸಿಇಒ ಸುಶಾಂತ್ ಮೆಹ್ತಾ ಜೊತೆಗಿನ ಸಂಭಾಷಣೆ ವೇಳೆ ಸೋನು ನಿಗಮ್ ಈ ಮಾತನ್ನು ಹೇಳಿದರು.