ಸರ್ವಜ್ಞ ಮೂರ್ತಿ ಸಂತನೊಬ್ಬನ ಅನನ್ಯ ಚಿತ್ರ

Update: 2022-05-07 19:30 GMT

ಚಿತ್ರ ಬಿಡುಗಡೆಯಾದಾಗ ಒಳ್ಳೆಯ ವಿಮರ್ಶೆಗಳೇನೋ ಬಂದವು. ಆದರೆ ತಾಯಿಯೇ ತನ್ನ ಮಗನನ್ನು ಒಪ್ಪಿಕೊಳ್ಳದ, ಸಿದ್ಧ ಮಾದರಿಯನ್ನು ತೊರೆದ, ಸಂತನ ಕತೆಯು ತನ್ನ ಕಾಲಕ್ಕಿಂತ ಮುಂದಿತ್ತು. ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ಬೆಟ್ಟದ ಹುಲಿ, ಸತ್ಯ ಹರಿಶ್ಚಂದ್ರ, ವಾತ್ಸಲ್ಯ ಮುಂತಾದ ರಾಜ್ ಚಿತ್ರಗಳ ಸರಣಿಯಲ್ಲಿ ಸರ್ವಜ್ಞನ ದನಿ ಕೇಳದೇ ಹೋಯಿತು.


ಕನ್ನಡದಲ್ಲಿ ಭಕ್ತಿ ಪರಂಪರೆಯ ಚಿತ್ರಗಳಿಗೆ ದೊಡ್ಡ ಇತಿಹಾಸವೇ ಇದೆ. ಈ ನಾಡಿನಲ್ಲಿ ಬದುಕಿದ್ದ ಅನೇಕ ಸಂತರು ಸಮಾಜ ಸುಧಾರಕರ ಕಾರ್ಯವನ್ನು ನಿರ್ವಹಿಸಿದ್ದಾರೆ. ಅನಿಷ್ಟ ಪದ್ಧತಿಗಳಿಂದ ಸಮಾಜವನ್ನು ಮುಕ್ತಗೊಳಿಸಲು ಯತ್ನಿಸಿದ್ದಾರೆ. ಮೌಢ್ಯದಿಂದ ಪಾರುಮಾಡಲು ತಿಳಿವನ್ನು ಹರಡಿದ್ದಾರೆ. ತಾವು ಬದುಕಿದ ರೀತಿಯಿಂದ ಜನರನ್ನು ಪ್ರಭಾವಿಸಿದ್ದಾರೆ. ತಮ್ಮ ಬರಹಗಳ ಮೂಲಕ ಸದಾ ಎಚ್ಚರಿಸುವ ದನಿಯಾಗಿ ಉಳಿದಿದ್ದಾರೆ.
ಸಾಮಾಜಿಕ ಅರಿವನ್ನು ಮೂಡಿಸಿದ ಕತೆ ಒಂದೆಡೆಯಿದ್ದರೆ, ಜನರ ನಡುವೆ ಬದುಕುತ್ತಾ, ತಮ್ಮ ಬದುಕು, ಬರಹ ಮತ್ತು ಸಾಧನೆಗಳ ಮೂಲಕ ಈ ನಾಡಿನ ಸಂಸ್ಕೃತಿಯ ಭಾಗವಾಗಿ ಉಳಿದಿರುವ ಇತಿಹಾಸ ಪುರುಷರ ಸರಣಿಯೂ ಒಂದಿದೆ. ಕಾಲ ಸರಿದಂತೆ ಈ ಸಂತರ ಬದುಕಿನಲ್ಲಿ ಪವಾಡಗಳು ಸೇರಿಹೋಗಿ, ಪುರಾಣಪುರುಷರಾಗಿ 'ಭಡ್ತಿ' ಪಡೆದ ಕತೆಗಳೂ ಇವೆ. ಆದರೂ ಈ ಭಕ್ತರು ಕನ್ನಡದ ಬದುಕಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಸಾರ್ವಕಾಲಿಕ ಮೌಲ್ಯಗಳ ಕೃತಿಗಳನ್ನು ಕೊಟ್ಟಿದ್ದಾರೆ. ವಚನಗಳು, ದಾಸರ ಪದಗಳು ಸಾಮಾನ್ಯ ಜನರ ಆಡುಮಾತಿನಲ್ಲಿ ದಿನನಿತ್ಯವೂ ಬದುಕುತ್ತಿವೆ.

ಇಂಥ ಸಂತರ ಕತೆಗಳು ಕಥನ ಸಾಹಿತ್ಯ, ನಾಟಕ ಪ್ರಕಾರಗಳನ್ನು ಯಾವತ್ತೂ ಆಕರ್ಷಿಸಿವೆ. ಸಿನೆಮಾ ಇದಕ್ಕೆ ಹೊರತಲ್ಲ. ವಚನಕಾರ ರಾದ ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ; ದಾಸಶ್ರೇಷ್ಠರಾದ ಪುರಂದರ, ಕನಕ; ಆಧುನಿಕ ಕಾಲದ ಕೈವಾರ ತಾತಯ್ಯ, ರಾಘವೇಂದ್ರ ಸ್ವಾಮಿ, ಶಿಶುನಾಳ ಷರೀಫ ಮೊದಲಾದ ಸಂತರ ಬದುಕು ವಿವಿಧ ಕಾಲಘಟ್ಟದಲ್ಲಿ ತೆರೆಯ ಮೇಲೆ ಮೂಡಿವೆ. ಇದರ ಜೊತೆಗೆ ಶೈವ ಸಂಪ್ರದಾಯದ ಶರಣರ ಕತೆಗಳು, ವಾರ್ಕರಿ ಸಂಪ್ರದಾಯದ ಭಕ್ತರ ಕತೆಗಳೂ ಈ ಪರಂಪರೆಗೆ ತಮ್ಮ ಕಾಣಿಕೆ ಸಲ್ಲಿಸಿವೆ. ಹಾಗೆಯೇ ಅನ್ಯಭಾಷೆಗಳಲ್ಲಿ ಅಭಂಗ, ದೋಹೆಗಳನ್ನು ರಚಿಸಿದ ತುಕಾರಾಂ, ಕಬೀರ ಮೊದಲಾದವರ ಜೀವನ ಕತೆಗಳೂ ಚಿತ್ರರೂಪದಲ್ಲಿ ಜನಪ್ರಿಯವಾಗಿವೆ.

ಈ ಭಕ್ತ ಪರಂಪರೆಯ ಸರಣಿಯಲ್ಲಿ ಮೂಡಿಬಂದ ಚಿತ್ರಗಳಲ್ಲಿ ವಸ್ತು, ನಿರೂಪಣೆ ಮತ್ತು ಅಭಿನಯದ ದೃಷ್ಟಿಯಿಂದ ತೀರಾ ಭಿನ್ನವಾದ ಮತ್ತು ಇಂದಿಗೂ ನನ್ನನ್ನು ಕಾಡುವ ಚಿತ್ರವೆಂದರೆ 'ಸರ್ವಜ್ಞ ಮೂರ್ತಿ' ಅನೇಕ ನ್ಯೂನತೆಗಳ ನಡುವೆಯೂ ಈ ಚಿತ್ರವು ಅದು ತಯಾರಾದ ಕಾಲಕ್ಕಿಂತ ಮುಂದಿದ್ದ ವಿಶಿಷ್ಟ ಪ್ರಯತ್ನ. ಆರ್ಥಿಕವಾಗಿ ಯಶಸ್ಸು ಕಾಣದ ಈ ಚಿತ್ರವು ತನ್ನ ವಿಶೇಷಗಳಿಂದ ಇಂದಿಗೂ ಅಭ್ಯಾಸಯೋಗ್ಯ ಚಿತ್ರವೆಂದರೆ ಹಲವರಿಗೆ ಅಚ್ಚರಿಯಾಗಬಹುದು.

ಸರ್ವಜ್ಞ ಕನ್ನಡದ ವಿಶಿಷ್ಟ ಕವಿ. ಅಷ್ಟೇ ಜನಮಾನಸದಲ್ಲಿ ನೆಲೆ ನಿಂತ ಕವಿ. ಆದರೆ ಈತನ ಜೀವನ ಸಂಗತಿಗಳ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಕೆಲವು ಸಂಗತಿಗಳು ಆತನ ರಚನೆಯಲ್ಲಿ ದೊರೆಯುವುದಾದರೂ, ಅವು ಪ್ರಕ್ಷಿಪ್ತವಾಗಿರುವುದೇ ಹೆಚ್ಚು ಎಂದು ತಜ್ಞರ ಅಭಿಪ್ರಾಯ. ಈತನ ಜೀವಿತ ಅವಧಿಯನ್ನು ವಿವಿಧ ಸಂಶೋಧಕರು ಹದಿನಾರರಿಂದ ಹದಿನೆಂಟನೆಯ ಶತಮಾನದವರೆಗೂ ಗುರುತಿಸಿದ್ದಾರೆ. ಆಶುಕವಿಯಾದ ಸರ್ವಜ್ಞ ಮೂರು ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸಿದ್ದಾನೆಂದು ಹೇಳುತ್ತಾರೆ. ವಿದ್ವಾಂಸರು ಆತನ ವಚನಗಳು ಸಾವಿರದಷ್ಟು ಇರಬಹುದೆಂದು ಅಭಿಪ್ರಾಯಪಡುತ್ತಾರೆ. ಜನಪದ ತ್ರಿಪದಿಯಂತೆ ಸರಳವಾದ ಕನ್ನಡದಲ್ಲಿ ಬರೆದ ಸರ್ವಜ್ಞನನ್ನು ಅನುಸರಿಸಿ ನೂರಾರು ಆಶುಕವಿಗಳು ಸರ್ವಜ್ಞನ ಹೆಸರಿಗೆ ತಮ್ಮ ರಚನೆಗಳನ್ನು ಜಮಾ ಮಾಡಿರಬಹುದೆಂದು ವಿದ್ವಾಂಸರ ನಿಲುವು.

ಇಂಥ ಸರ್ವಜ್ಞನ (ಇದು ಅವನ ಹೆಸರಾಗದೆ ಬಿರುದಾಗಿರ ಬಹುದು. ಅಂಕಿತ ನಾಮವಾಗಿರಬಹುದು ಎಂಬ ವಾದವೂ ಇದೆ) ಬಗ್ಗೆ ಜನಜನಿತವಾದ ಕತೆಗಳನ್ನು ಸಂಕಲಿಸಿ ಸಾಹಿತಿ ನರೇಂದ್ರಬಾಬು ಅವರು ಚಿತ್ರ ನಿರ್ಮಿಸುವ ಸಾಹಸಕ್ಕೆ ಪ್ರೇರಣೆ ಅವರ ವಿದ್ಯಾಗುರು ವಿ.ಸೀ. ಅವರು ಕೊಟ್ಟಿದ್ದ ಸರ್ವಜ್ಞನ ವಚನಗಳ ಪುಸ್ತಕವಂತೆ. ಸರ್ವಜ್ಞನ ವಚನಗಳು ಮತ್ತು ಆತನ ಬಗ್ಗೆ ಕೇಳಿದ ಕತೆಗಳು ಅವರಲ್ಲಿ ಚಿತ್ರ ನಿರ್ಮಿಸಲು ಪ್ರೇರಣೆಯಾಯಿತು.

ಸುಮಾರು ಒಂಭತ್ತು ವರ್ಷಗಳ ಕಾಲ ಸರ್ವಜ್ಞನ ಬದುಕು ಮತ್ತು ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿದವರು ರೆವರೆಂಡ್ ಉತ್ತಂಗಿ ಚನ್ನಪ್ಪ. ಅವರು ಸರ್ವಜ್ಞನ ವಚನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಶಾಸ್ತ್ರೀಯವಾಗಿ ಅಣಿಗೊಳಿಸಿದ ಅಪೂರ್ವ ಸಂಪಾದಕರು. ಅವರಿಗೆ ಕೀರ್ತಿಯನ್ನು ತಂದುಕೊಟ್ಟ 'ಸರ್ವಜ್ಞ ವಚನಗಳು' (1924) ಸಂಪಾದಿತ ಗ್ರಂಥದಲ್ಲಿ ಬರೆದಿರುವ 108 ಪುಟಗಳ ಪೀಠಿಕೆಯಲ್ಲಿ ಸರ್ವಜ್ಞನ ಪೂರ್ವೋತ್ತರ ಮತ್ತು ಅವನ ವ್ಯಕ್ತಿತ್ವವನ್ನು ಮನದಟ್ಟಾಗು ವಂತೆ ವಿವರಿಸಿದ್ದರು. ಇದು ಅಪಾರ ಜನಪ್ರಿಯತೆ ಪಡೆದ ಗ್ರಂಥ. ವಿ.ಸೀ. ಅವರು ನರೇಂದ್ರಬಾಬು ಅವರಿಗೆ ಕೊಟ್ಟಿದ್ದು ಇದೇ ಗ್ರಂಥ.

ನರೇಂದ್ರಬಾಬು ಅವರು ಚಿತ್ರವನ್ನು ಆರಂಭಿಸುವ ಮುನ್ನ 'ಜೀವಂತ ಸರ್ವಜ್ಞ' ಎಂದೇ ಹೆಸರಾಗಿದ್ದ ಉತ್ತಂಗಿ ಚನ್ನಪ್ಪನವರನ್ನು ಭೇಟಿಯಾಗಿ ತಮ್ಮ ಯೋಜನೆಯನ್ನು ವಿವರಿಸಿದರು. ನಿಶ್ಯಕ್ತರಾಗಿದ್ದರೂ, ಸರ್ವಜ್ಞನ ವಿಷಯ ಕೇಳಿ ಉತ್ತಂಗಿಯವರು ಪಂಡಿತ ಶಿವಮೂರ್ತಿಶಾಸ್ತ್ರಿಯವರು ಬರೆದಿದ್ದ ಜೀವನ ಚಿತ್ರವನ್ನು ಆಧರಿಸಿ ಕತೆಯ ಹಂದರವನ್ನು ಸೂಚಿಸಿದರಂತೆ. ಚನ್ನಪ್ಪನವರ ಗ್ರಂಥದ ಮಾಹಿತಿ, ಅವರು ನೀಡಿದ ಕಥಾ ಹಂದರ, ಆ ಬಗ್ಗೆ ತಿಳಿದ ಮಹನೀಯರಿಂದ ಪಡೆದ ಮಾಹಿತಿಯನ್ನು ಒಟ್ಟುಗೂಡಿಸಿ ಕನ್ನಡದ ಸಂತನ ಹುಟ್ಟು, ಬೆಳವಣಿಗೆ, ಅವನ ವಿಶಿಷ್ಟ ವ್ಯಕ್ತಿತ್ವದ ಸಂಗತಿಗಳನ್ನು ಹೆಣೆದು ನರೇಂದ್ರಬಾಬು ಅವರು ಚಿತ್ರದ ಕತೆ ಸಿದ್ಧಪಡಿಸಿದರು. ಆದರೆ ಚಿತ್ರದ ಚಿತ್ರೀಕರಣ ಆರಂಭವಾಗುವ ಮೊದಲೇ ಉತ್ತಂಗಿ ಚನ್ನಪ್ಪ ಅವರು ಎಂಬತ್ತೆರಡನೇ ವಯಸ್ಸಿನಲ್ಲಿ ತೀರಿಕೊಂಡರು!

ಅನೇಕ ಎಡರುತೊಡರು, ಆರ್ಥಿಕ ಸಂಕಷ್ಟ ಎದುರಿಸಿ ಚಿತ್ರೀಕರಣ ನಿಂತರೂ, ನಿರ್ಮಾಪಕ ನರೇಂದ್ರಬಾಬು ಅವರು ಆ ಪಾತ್ರವನ್ನು ತಯಾರಿಸಿ ಬಿಡುಗಡೆ ಮಾಡುವಲ್ಲಿ ಗುರಿಮುಟ್ಟಿದರು. ಆದರೆ ನಿರೀಕ್ಷಿತ ಯಶಸ್ಸು ದಕ್ಕದ ಕಾರಣ, ಆರ್ಥಿಕ ಸಂಕಷ್ಟಕ್ಕೊಳಗಾಗಿ ಮೈಸೂರಿನಲ್ಲಿದ್ದ ಮನೆಯನ್ನು ಮಾರಬೇಕಾದ ಅನಿವಾರ್ಯ ಉಂಟಾಯಿತು.

ಆರೂರು ಪಟ್ಟಾಭಿ ಅವರ ನಿರ್ದೇಶನದಲ್ಲಿ ಸರ್ವಜ್ಞಮೂರ್ತಿ (1965) ಚಿತ್ರವು ಸರ್ವಜ್ಞನ ವಿವಾದಾಸ್ಪದ ಹುಟ್ಟು, ಅವನ ಬೆಳವಣಿಗೆ ಮತ್ತು ಲೋಕ ಕಲ್ಯಾಣದ ಕತೆಯನ್ನು ಅನುಕ್ರಮದಲ್ಲಿ ನಿರೂಪಿಸುತ್ತದೆ.

ಮಾಸೂರಿನ ಬಸವರಸ ಎಂಬ ವ್ಯಕ್ತಿ ಮಕ್ಕಳ ವರಕ್ಕಾಗಿ ಕಾಶಿಯಾತ್ರೆ ಮಾಡಿ ಹಿಂದಿರುಗುವ ಹಾದಿಯಲ್ಲಿ ಅಬಲೂರಿನ ಕುಂಬಾರ ಹೆಣ್ಣು ಮಾಳವ್ವನ ಮನೆಗೆ ಬರುತ್ತಾನೆ. ಆಕಸ್ಮಿಕವಾಗಿ ಆಕೆಯನ್ನು ಕೂಡುತ್ತಾನೆ. ಅಕ್ರಮ ಸಂಬಂಧದ ಕುರುಹು ಗೋಚರಿಸಿದಾಗ ನೆರೆಹೊರೆಯವರಿಗೆ ಅಂಜಿದ ಮಾಳವ್ವನ ಮನೆಗೆ ಕಾಳವ್ವ ಎಂಬ ತಾಯಿ ಬಸುರಿಯಾದ ತನ್ನ ಮಗಳೊಡನೆ ನಡುರಾತ್ರಿಯಲ್ಲಿ ಆಶ್ರಯ ಕೇಳಿ ಬರುತ್ತಾಳೆ. ವಿಚಿತ್ರವೆಂಬಂತೆ ಇಬ್ಬರಿಗೂ ಒಂದೇ ಸಾರಿ ಹೆರಿಗೆಯಾಗುತ್ತದೆ. ಆದರೆ ಅಕ್ರಮ ಸಂಬಂಧದಿಂದ ಜನಿಸಿದ ತನ್ನ ಮಗು ಬದಲಾಗಿರ ಬಹುದೆಂಬ ಅನುಮಾನ, ಮಾಳವ್ವಗೆ. ಕಾಳವ್ವನ ಮಗಳ ಮಗು ಸಹ ಸತ್ತುಹೋದುದರಿಂದ ಆಕೆಯ ಅನುಮಾನ ಇನ್ನಷ್ಟು ಬಲವಾಗುತ್ತದೆ. ಸಮಾಜಕ್ಕೆ ಹೆದರಿದ ಮಾಳವ್ವನಿಗೆ ಮನೆಯಲ್ಲಿರುವವನು ತನ್ನ ಮಗನಲ್ಲ ಎಂಬ ಅನುಮಾನ ದೃಢವಾಗುತ್ತಾ ಹೋಗುತ್ತದೆ.

ಅವನ ಪ್ರತಿ ವರ್ತನೆಯಲ್ಲಿ ತಪ್ಪು ಕಾಣುವ ಆಕೆ ನಾನಾ ಹಿಂಸೆ ನೀಡುತ್ತಾಳೆ. ತನ್ನ ಮಗ ಅವನಲ್ಲ ಎಂಬ ಅನುಮಾನವೇ ಅವಳಲ್ಲಿ ದೃಢವಾಗುತ್ತದೆ. ಅವನಲ್ಲಿರುವ ಅಪಾರವಾದ ಬುದ್ಧಿಮತ್ತೆಯನ್ನು ಗುರುತಿಸಿದ ಊರಿಗ ಸಿದ್ಧವೀರಣ್ಣ ಎಂಬ ಉಪಾಧ್ಯಾಯರು ಸಾಲಿಯನ್ನು ದತ್ತು ಪಡೆದು ಲಿಂಗಧಾರಣೆ ಮಾಡಿಸಿ, ಸರ್ವಜ್ಞ ಎಂದು ನಾಮಕರಣ ಮಾಡುತ್ತಾರೆ. ಹೆಂಡತಿಯ ವಿರೋಧವಿದ್ದರೂ ಸರ್ವಜ್ಞನನ್ನು ಬೆಳೆಸುತ್ತಾರೆ. ತನ್ನ ಸುತ್ತಲಿನ ಸಮಾಜ, ಜನರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುವ ಸರ್ವಜ್ಞ ನಿಸರ್ಗದ ಲಯಗಳಲ್ಲಿರುವ ಸಂಗೀತವನ್ನು ಅರಿಯುತ್ತಾನೆ. ಸಮಸ್ತವನ್ನೂ ಚಿಕಿತ್ಸಕ ನೋಟದಿಂದ ಅರ್ಥೈ ಸಲು ಯತ್ನಿಸುತ್ತಾನೆ. ಒಮ್ಮಾಮ್ಮೆ ಹೆಡ್ಡನಂತೆ, ಹುಚ್ಚನಂತೆ, ಮುಗ್ಧ ಬಾಲಕನಂತೆ, ಜಗತ್ತಿನ ಆಗು ಹೋಗುಗಳು, ಸಂಬಂಧಗಳ ಬಗ್ಗೆ ಕಾಳಜಿ ಇಲ್ಲದವನಂತೆ ವರ್ತಿಸುತ್ತಾನೆ. ಅವನ ಸಹಜ ಸ್ಥಿತಿಯೇ ವಿಚಿತ್ರವಾಗಿ ಕಾಣಿಸುತ್ತದೆ. ತನ್ನ ಒಳಗೆ ತುಂಬಿ ಹೋದ ಎಷ್ಟೋ ವಿಷಯಗಳನ್ನು ಹೇಳಬೇಕೆಂಬ ಒತ್ತಾಯ ಬೇಗೆಯಾಗಿ ಸುಡುತ್ತದೆ. ಹೇಗೆ, ಯಾವ ರೀತಿ ಅದನ್ನೆಲ್ಲ ಹೊರಹಾಕಬೇಕು ಎಂಬ ಯೋಚನೆಗಳೇ ತುಂಬಿ ಹೋಗುತ್ತದೆ. ದೊಡ್ಡವನಾದ ಆತನಿಗೆ ಉದ್ಯೋಗವೊಂದನ್ನು ಹಿಡಿಯಲು ಗುರುಗಳು ಸಲಹೆ ಮಾಡಿದಾಗ ಸರ್ವಜ್ಞನ ಪ್ರಶ್ನೆ- ''ಯೋಚನೆ ಮಾಡುವುದೂ ಉದ್ಯೋಗ ಅಲ್ಲವೇ ಗುರುಗಳೇ?''.

ಇಂಥ ಸರ್ವಜ್ಞ ತನ್ನ ಭಾವನೆಗಳನ್ನು ಸರಳ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂಥ ತ್ರಿಪದಿಯಲ್ಲಿ ಹೊರಹಾಕುವ ಆಶುಕವಿಯಾಗುತ್ತಾನೆ. ಆದರೆ ಅದು ಹೇಗೊ ಮಾನವ ಸಹಜವಾದ ಸಂಬಂಧಗಳ ಗೋಜಲಿನಿಂದ ಬಿಡಿಸಿಕೊಳ್ಳುತ್ತಾನೆ. ಹೆಣ್ಣಿನ ಸ್ಪರ್ಶವೇ ಅನುಭವಕ್ಕೆ ಬಾರದ ಆತನಿಗೆ ಒಲಿದ ಹೆಣ್ಣು ವೀರ(ಹರಿಣಿ) ಕಂಡುಕೊಳ್ಳುವ ಸತ್ಯ-ಹೆಣ್ಣಿನ ಮನಸ್ಸನ್ನು ಹೂವು ಎಂದ ಕವಿ; ಗಂಡಿನ ಮನಸ್ಸನ್ನು ಕಲ್ಲು ಎಂದ ವಿಧಿ. ತನ್ನನ್ನು ಮದುವೆಯಾಗಲು ಒಲಿದು ಬಂದ ಎರಡು ಹೆಣ್ಣುಗಳಿಗೂ ಸರ್ವಜ್ಞ ನಿರಾಶೆ ಮೂಡಿಸುತ್ತಾನೆ. ತನಗೂ ಇನ್ನೊಂದು ಜೀವಿಗೂ ಸಂಬಂಧ ಸಾಧ್ಯವಿಲ್ಲ. ಏಕೆಂದರೆ ತಾನು ಮನುಷ್ಯ ಅಲ್ಲವೇ ಅಲ್ಲ; ಮಾನವ ಸಹಜ ಭಾವನೆಗಳಿಂದ ಮುಕ್ತನಾದವನು ಎಂದೇ ತಿಳಿದು ವರ್ತಿಸುತ್ತಾನೆ. ತನ್ನ ಸಾಕು ತಂದೆಯ ಋಣವನ್ನು ತೀರಿಸಲು ತಿರಿವವರಿಗಿಂತ ಸಿರಿವಂತನಾರು ಎಂದು ನಂಬಿ ಭಿಕ್ಷೆ ಬೇಡುತ್ತಾನೆ. ಒಮ್ಮೆ ಋಣಮುಕ್ತನಾದ ನಂತರ ಕನಿಷ್ಠ ಬಟ್ಟೆ ತೊಟ್ಟು, ದಂಡ ಹಿಡಿದು ದೇಶಾಂತರ ಹೋಗುವ ಸರ್ವಜ್ಞನನ್ನು ಕೀರ್ತಿ ಹಿಂಬಾಲಿಸುವುದು ವಿಚಿತ್ರ. ಆದರೆ ಕೀರ್ತಿಗೆ ವಿಮುಖನಾದ ಆತ ವಿಜಯನಗರದ ಅರಸು ವೀರವೆಂಕಟಪತಿರಾಯನ ಸನ್ಮಾನಕ್ಕೆ ಆಯ್ಕೆಯಾಗುತ್ತಾನೆ. ಸಿಂಹಾಸನವನ್ನು ಪಿಳಿ ಪಿಳಿ ಕಣ್ಣುಗಳಿಂದ ನೋಡುವ ಸರ್ವಜ್ಞ ದೊರೆತನ, ಸಿರಿತನ, ಸನ್ಮಾನಗಳೆಲ್ಲವನ್ನೂ ನಿರಾಕರಿಸಿ ಹೊರಟುಬಿಡುತ್ತಾನೆ. ''ಸರ್ವಜ್ಞ ನನ್ನ ಮಗ ಅಂತ ನೀವು ಹೇಳಿದರೆ ಸಾಕೆ? ನನ್ನ ಮಗ ಎಂದು ನನ್ನ ಮನಸ್ಸು ಹೇಳಬೇಡವೇ? ಅವನು ಇಂದೂ ನನ್ನ ಮಗನಲ್ಲ; ಮುಂದೂ ಆಗುವುದಿಲ್ಲ'' ಎಂದು ನಂಬಿದ ತಾಯಿ, ಕೊನೆಗೂ ಮಗನೆಂದು ಒಪ್ಪಿಕೊಳ್ಳುವ ವೇಳೆಗೆ ಸಾಂಸಾರಿಕ ಬಂಧಗಳಿಂದ ವಿಮುಕ್ತನಾದ ಸರ್ವಜ್ಞ ಯಾರಿಗೂ ಸಿಗದೆ ಬಯಲಾಗಿ ಹೋಗುತ್ತಾನೆ.

ನರೇಂದ್ರಬಾಬು ಅವರು ಸ್ವಾರಸ್ಯಕರವಾದ ಕತೆಯನ್ನು ಹೆಣೆದಿದ್ದಾರೆ. ಮುಗ್ಧನಲ್ಲದ, ಹುಚ್ಚನಲ್ಲದ, ನಿರ್ಭಾವುಕವಾದ, ಗೊಂದಲ ಹುಟ್ಟಿಸುವ ಸರ್ವಜ್ಞನ ಪಾತ್ರವನ್ನು ಡಾ. ರಾಜ್‌ಕುಮಾರ್ ನಿರ್ವಹಿಸಿರುವುದು ಅವರ ವೃತ್ತಿ ಬದುಕಿನಲ್ಲಿ ವಿಶಿಷ್ಟವಾದದ್ದು ಎನಿಸುತ್ತದೆ. ಮನುಷ್ಯರ ನಡುವೆಯೂ ಬದುಕಿ, ಪ್ರತ್ಯೇಕವಾಗುಳಿಯುವ ಸಂಕೀರ್ಣ ವ್ಯಕ್ತಿತ್ವವನ್ನು ನಿರ್ವಹಿಸುವುದು ಸುಲಭದ ಮಾತಲ್ಲ. ತಾನು ಹೇಳಬೇಕಾದುದನ್ನು ಭಾವವಿಲ್ಲದ, ನಿರ್ಭಾವುಕ ನೋಟದಿಂದ ಹೇಳುವ ರಾಜ್ ಅವರ ಅಭಿನಯ ಪರಾಕಾಷ್ಠೆಯನ್ನು ತಲುಪಿದೆ. ಒಮ್ಮೆ ಬುದ್ಧನಂತೆ, ಮತ್ತೊಮ್ಮೆ ಬಯಲಾದ ಅಲ್ಲಮನಂತೆ, ಇನ್ನೊಮ್ಮೆ ಶ್ರವಣನಂತೆ, ರಾಜ್ ಅವರ ಅಭಿನಯ ಅನೇಕ ವ್ಯಕ್ತಿತ್ವಗಳನ್ನು ಅಭಿವ್ಯಕ್ತಿಸುತ್ತದೆ. ಕೊನೆಯಲ್ಲಿ ತುಂಡು ಪಂಚೆಯನ್ನುಟ್ಟು ಕಾವೀನ ಧರಿಸಿ, ಕಪಾಲ, ದಂಡವನ್ನು ಹಿಡಿದು, ಹೆಗಲಲ್ಲಿ ಕಂಬಳಿ ಹೊದ್ದು, ತಲೆ ಬೋಳಿಸಿಕೊಂಡ ಸರ್ವಜ್ಞ ನಕ್ಕರೆ ಮಗುವೊಂದು ನಕ್ಕಂತಾಗುತ್ತದೆ. ನೋಡು ನೋಡುತ್ತಿದ್ದಂತೆ ಹಾಲುಗೆನ್ನೆಯ ಮಗುವೊಂದನ್ನು ಕಂಡ ಹಾಗೆ ಆಗುತ್ತದೆ. ಆಗ ತಾನೆ ಜನಪ್ರಿಯತೆಯ ಮೆಟ್ಟಿಲು ಏರುತ್ತಿದ್ದ ಕಾಲದಲ್ಲಿ ಅತಿ ಕನಿಷ್ಠ ಉಡುಪು ಧರಿಸಿ, ಬೋಳು ತಲೆಯಲ್ಲಿ ಅಭಿನಯಿಸಿದ್ದು ಮುಜುಗರ ತರಲಿಲ್ಲವೇ ಎಂದು ಕೇಳಿದವರಿಗೆ ರಾಜ್ ಕೊಟ್ಟ ಉತ್ತರ- ''ನಾನೊಬ್ಬ ಕಲಾವಿದ. ಶ್ರವಣ ಬೆಳಗೊಳದ ಗೊಮ್ಮಟನ ಕುರಿತು ಯಾರಾದರೂ ಚಿತ್ರ ಮಾಡಲು ಬಂದರೆ ನಾನು ಗೊಮ್ಮಟನಾಗಲೂ ಸಂಕೋಚವಿಲ್ಲ''. ಇಂಥ ಅಪ್ಪಟ ಕಲಾವಿದ ಒಂದು ಅನೂಹ್ಯ ಸಂಕೀರ್ಣತೆಯನ್ನು ತುಂಬಿರುವ ಪಾತ್ರವನ್ನು ಮೂರ್ತರೂಪಕ್ಕೆ ತರುವಲ್ಲಿ ಯಶಸ್ವಿಯಾದದ್ದು ನಿಜಕ್ಕೂ ವಿಸ್ಮಯವೇ? ನಿಜಕ್ಕೂ ಅಲ್ಲಮನಂಥ ಬಯಲಾದ ವ್ಯಕ್ತಿತ್ವವನ್ನು ರಾಜ್ ಒಬ್ಬರಿಗೆ ಮಾತ್ರ ನಿರ್ವಹಿಸಲು ಸಾಧ್ಯವಿತ್ತೇನೋ! ಚಂಚಲತೆ ಇಣುಕದಂತೆ ಕಣ್ಣುಗಳಲ್ಲೇ ಅಭಿನಯಿಸುವ ಕಲೆಯನ್ನು ಈ ಚಿತ್ರದಿಂದ ನೋಡಿ ಕಲಿಯಬಹುದೇನೋ!

ಉಪಾಧ್ಯಾಯ ಸಿದ್ಧ ವೀರಣ್ಣನ ಪಾತ್ರದಲ್ಲಿ ಬಾಲಕೃಷ್ಣ, ಬಸವರಸನ ಪಾತ್ರದಲ್ಲಿ ಕೆ.ಎಸ್. ಅಶ್ವಥ್, ವೀರ ವೆಂಕಟಪತಿರಾಯನಾಗಿ ಉದಯ ಕುಮಾರ್, ವೀರಳ ಪಾತ್ರದಲ್ಲಿ ಹರಿಣಿ, ಮೈನಾವತಿ ಮುಂತಾದ ಆ ಕಾಲದ ಬೇಡಿಕೆಯ ನಟರ ಸಮೂಹವೇ ಈ ಚಿತ್ರದಲ್ಲಿದೆ. ಜೊತೆಗೆ ರಾಜ್ ಸೋದರ ಎಸ್.ಪಿ. ವರದರಾಜ್ ಅವರೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜಿ.ಕೆ. ವೆಂಕಟೇಶ್ ಅವರು ಶೀರ್ಷಿಕೆ ಗೀತೆಯ ಜೊತೆಗೆ ಎರಡು ಮಧುರವಾದ ಗೀತೆಗಳನ್ನು ಸಂಯೋಜಿಸಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಾಜ್ ಅವರ ಕಂಠದಲ್ಲಿ ಸರ್ವಜ್ಞನ ವಚನಗಳ ವಾಚನವನ್ನು ಕೇಳುವುದೇ ಸೊಗಸು.

ಚಿತ್ರ ಬಿಡುಗಡೆಯಾದಾಗ ಒಳ್ಳೆಯ ವಿಮರ್ಶೆಗಳೇನೋ ಬಂದವು. ಆದರೆ ತಾಯಿಯೇ ತನ್ನ ಮಗನನ್ನು ಒಪ್ಪಿಕೊಳ್ಳದ, ಸಿದ್ಧ ಮಾದರಿಯನ್ನು ತೊರೆದ, ಸಂತನ ಕತೆಯು ತನ್ನ ಕಾಲಕ್ಕಿಂತ ಮುಂದಿತ್ತು. ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ಬೆಟ್ಟದ ಹುಲಿ, ಸತ್ಯ ಹರಿಶ್ಚಂದ್ರ, ವಾತ್ಸಲ್ಯ ಮುಂತಾದ ರಾಜ್ ಚಿತ್ರಗಳ ಸರಣಿಯಲ್ಲಿ ಸರ್ವಜ್ಞನ ದನಿ ಕೇಳದೇ ಹೋಯಿತು. ಸಾಹಿತಿ ನರೇಂದ್ರಬಾಬು ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡರು. ಅದೇನೇ ಇರಲಿ, ಕನ್ನಡಕ್ಕೊಂದು ಅಭ್ಯಾಸಯೋಗ್ಯ ಚಿತ್ರವನ್ನು ನೀಡಿದ ನರೇಂದ್ರಬಾಬು ಅವರಿಗೆ ಕನ್ನಡಿಗರು ಕೃತಜ್ಞರಾಗಿರಬೇಕು.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News