ಹಣದುಬ್ಬರದ ನಿಯಂತ್ರಣದ ಹೆಸರಿನಲ್ಲಿ ಇನ್ನಷ್ಟು ಬಡತನ

Update: 2022-05-09 08:14 GMT

ಸರ್ಕಾರ ಕೂಡ ವಿತ್ತೀಯ ಕ್ರಮಗಳ ಮೂಲಕ ಅಂದರೆ ತೆರಿಗೆಯನ್ನು ಸೂಕ್ತವಾಗಿ ನಿರ್ವಹಿಸುವುದರ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳ ಬೇಕು. ಪಟ್ರೋಲ್ ಹಾಗೂ ಇತರ ಅವಶ್ಯಕ ಪದಾರ್ಥಗಳ ಮೇಲೆ ತೆರಿಗೆಯನ್ನು ಕಡಿಮೆ ಮಾಡಬೇಕು. ಇಲ್ಲದೇ ಹೋದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ತರಾತುರಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸಿಬಿಡುತ್ತದೆ.

ಹಣದುಬ್ಬರ ನಿರಾತಂಕವಾಗಿ ಏರುತ್ತಲೇ ಇದೆ. ಜನರ ಕೊಳ್ಳುವ ಶಕ್ತಿ ಯನ್ನು, ಆರ್ಥಿಕ ಚೇತರಿಕೆಯನ್ನು ಕೊಲ್ಲುತ್ತಾ ನಡೆದಿದೆ. ಇದನ್ನು ನಿಯಂತ್ರಿಸುವುದು ಆರ್‌ಬಿಐ ಜವಾಬ್ದಾರಿ. ಹಣದುಬ್ಬರದ ದರ ಶೇ. 4ನ್ನು ಮೀರಬಾರದು ಅನ್ನುವುದು ಗುರಿ. ಆದರೆ ಶೇ. 6ವರೆಗೆ ಅವಕಾಶ ನೀಡಲಾಗಿತ್ತು. ಈ ಉದ್ದೇಶಕ್ಕಾಗಿಯೇ 2014ರಲ್ಲಿ ಹಣಕಾಸು ನೀತಿ ಸಮಿತಿಯನ್ನು ರಚಿಸಲಾಯಿತು. ಸತತವಾಗಿ ಮೂರು ಚಾತುರ್ಮಾಸಗಳು ಗರಿಷ್ಠ ಮಿತಿಯನ್ನು ದಾಟುವುದು ಆರ್‌ಬಿಐನ ವೈಫಲ್ಯವೆಂದೇ ಭಾವಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಅದು ವಿವರಣೆ ಕೊಡಬೇಕಾಗುತ್ತದೆ. 2019ರಿಂದಲೇ ಹಣದುಬ್ಬರ ದರ ಏರುತ್ತಿರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲ ಹಲವು ಚಾತುರ್ಮಾಸಗಳು ಅದು ಗರಿಷ್ಠ ಮಿತಿಯನ್ನು ಮೀರಿರುವುದನ್ನೂ ಕಾಣಬಹುದು. ಆದರೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಆರ್‌ಬಿಐ ಆರ್ಥಿಕ ಬೆಳವಣೆಗೆಗೆ ಆದ್ಯತೆ ನೀಡಿತ್ತು. ಅದನ್ನು ಸಾಧಿಸುವುದಕ್ಕೆ ರೆಪೊ ದರವನ್ನು ಕಡಿಮೆ ಮಾಡುತ್ತಾ ಬಂದಿತ್ತು. ಅದರಿಂದ ಸಾಲ ಅಗ್ಗವಾಗಿ ಬಂಡವಾಳ ಹೂಡಿಕೆ ಹೆಚ್ಚುತ್ತದೆ, ಬೆಳವಣಿಗೆ ಹೆಚ್ಚುತ್ತದೆ ಅನ್ನುವುದು ಆರ್‌ಬಿಐ ಯೋಚನೆಯಾಗಿತ್ತು. ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಏರದಿದ್ದರೂ, ಹಣದುಬ್ಬರ ಮಿತಿಮೀರಿ ಹೆಚ್ಚಿದ್ದರಿಂದ ಎಪ್ರಿಲ್ ತಿಂಗಳ ಎಂಪಿಸಿ ಸಭೆಯಲ್ಲಿ ಈವರೆಗೂ ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಿದ್ದೆವು, ಇನ್ನು ಮುಂದೆ ಹಣದುಬ್ಬರದ ನಿಯಂತ್ರಣಕ್ಕೆ ನಮ್ಮ ಮೊದಲ ಆದ್ಯತೆ ಎಂದು ಘೋಷಿಸಲಾಯಿತು. ನೀತಿಯಲ್ಲಿ ಒಂದಿಷ್ಟು ಬದಲಾವಣೆಯನ್ನು ತರಲಾಯಿತು. ಆದರೆ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಬಹುಷಃ ಜೂನ್ ತಿಂಗಳಿನಲ್ಲಿ ರೆಪೊ ದರವನ್ನು ಏರಿಸಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಯಾಕೆ ಈ ದಿಢೀರ್ ನಿರ್ಧಾರ?

ಆದರೆ ಎಲ್ಲರಿಗೂ ಆಶ್ಚರ್ಯವಾಗುವಂತೆ ದಿಢೀರನೆ ಅದಕ್ಕೂ ಮುಂಚಿತ ವಾಗಿಯೇ ಮಧ್ಯಂತರ ಸಭೆ ಕರೆದು ರೆಪೊ ದರವನ್ನು ಶೇ. 0.40 ಅಷ್ಟು ಏರಿಸಲು ನಿರ್ಧರಿಸಿದೆ. ಯಾಕೆ ಈ ದಿಢೀರ್ ನಿರ್ಧಾರ? ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಗೌವರ್ನರ್ ನೀಡಿದ ಬಹುತೇಕ ಕಾರಣಗಳು ನಿಜವಾದ ಕಾರಣಗಳಿರಲಿಕ್ಕಿಲ್ಲ. ಯಾಕೆಂದರೆ ಇವೆಲ್ಲಾ ಈ ಮೊದಲೇ ತಿಳಿದಿದ್ದ ವಿಷಯಗಳೇ ಆಗಿದ್ದವು. ಪೆಟ್ರೋಲ್ ಬೆಲೆ ಆಗಲೂ ಏರಿತ್ತು, ಹಣದುಬ್ಬರವೂ ಸಾಕಷ್ಟಿತ್ತು, ಉಕ್ರೇನ್ ಯುದ್ಧ ನಡೆದಿತ್ತು, ಜಾಗತಿಕ ಕುಸಿತವೂ ಗೊತ್ತಿತ್ತು. ಅವೇ ನಿಜವಾದ ಕಾರಣಗಳಾಗಿದ್ದರೆ ಎಪ್ರಿಲ್ ಸಭೆಯಲ್ಲೇ ರೆಪೊ ದರವನ್ನು ಏರಿಸುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಹಾಗಾಗಿ ಈ ನಿರ್ಧಾರದ ಹಿಂದಿನ ನಿಜವಾದ ಕಾರಣಗಳು ಗೊತ್ತಿಲ್ಲ. ಆದರೆ ಹಲವು ಊಹೆಗಳು ಸುದ್ದಿಯಲ್ಲಿವೆ.

ಬಹುಶಃ ಆರ್‌ಬಿಐಗೆ ಹಣದುಬ್ಬರ ತಾನು ಅಂದಾಜಿಸಿದ್ದಕ್ಕಿಂತ ಹೆಚ್ಚಿದೆ ಅನ್ನು ವುದು ಮನವರಿಕೆಯಾಗಿರಬೇಕು. ಎಪ್ರಿಲ್‌ನಲ್ಲಿ ಶೇ. 6.95ರಷ್ಟು ಇರಬಹುದು ಅನ್ನುವುದು ಆರ್‌ಬಿಐ ಲೆಕ್ಕಾಚಾರವಾಗಿತ್ತು. ಈಗ ಅದು ಇನ್ನೂ ಹೆಚ್ಚು ಅಂದರೆ ಶೇ. 7.5ರ ಆಸುಪಾಸಿನಲ್ಲಿ ಇರಬಹುದು ಅನ್ನುವ ಅಂದಾಜು ಸಿಕ್ಕಿರಬಹುದು. ಈ ದಿಢೀರ್ ನಿರ್ಧಾರಕ್ಕೆ ಇನ್ನೊಂದು ಆತಂಕವೂ ಕಾರಣವಿದ್ದಿರಬಹುದು. ಅಮೆರಿಕದ ಫೆಡರಲ್ ಬ್ಯಾಂಕ್ ದರವನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇತ್ತು. ಆರ್‌ಬಿಐ ಹೆಚ್ಚಿಸದೇ ಹೋದರೆ ಭಾರತದ ವಿದೇಶಿ ವಿನಿಮಯದ ಸಂಚಯ ಇನ್ನಷ್ಟು ಹೊರಕ್ಕೆ ಹರಿದು ಹೋಗಿಬಿಡುವ ಸಾಧ್ಯತೆ ಇದೆ. ಈಗಾಗಲೇ ಕಳೆದ ಕೆಲ ತಿಂಗಳುಗಳಲ್ಲಿ 30 ಬಿಲಿಯನ್ ಡಾಲರ್‌ನಷ್ಟು ಹಣ ಹೊರಗೆ ಹೋಗಿದೆ. ಈಗ ಫೆಡರಲ್ ಬ್ಯಾಂಕು ಶೇ. 0.5ರಷ್ಟು ಬ್ಯಾಂಕ್ ದರವನ್ನು ಏರಿಸಿದೆ. ಇನ್ನಷ್ಟು ಹೆಚ್ಚುವ ನಿರೀಕ್ಷೆಯೂ ಇದೆ. ಆ ಒತ್ತಡವೂ ಆರ್‌ಬಿಐ ಮೇಲೆ ಸಹಜವಾಗಿಯೇ ಇರುತ್ತದೆ.

ರೂಪಾಯಿ ಮೌಲ್ಯವನ್ನು ಆರ್‌ಬಿಐ ಕಾಪಾಡಿಕೊಳ್ಳಬೇಕಾಗುತ್ತದೆ. ಒಂದು ಡಾಲರಿನ ವಿನಿಮಯ ಮೌಲ್ಯ ಒಂದು ರೂಪಾಯಿ ಹೆಚ್ಚಾದರೆ ಆಮದಿನ ಮೌಲ್ಯ 58.26 ಬಿಲಿಯನ್ ರೂಪಾಯಿಯಷ್ಟು ಹೆಚ್ಚಾಗುತ್ತದೆ. ಅದರಿಂದ ಚಾಲ್ತಿ ಖಾತೆಯ ಕೊರತೆ ಇನ್ನಷ್ಟು ಹೆಚ್ಚುತ್ತದೆ.

ಮತ್ತೊಂದು ಅಂಶವೂ ಈ ನಿರ್ಧಾರದ ಹಿಂದೆ ಕೆಲಸ ಮಾಡಿರಬಹುದು. ಹಣದುಬ್ಬರವನ್ನು ನಿಯಂತ್ರಿಸುವುದು ಸರಕಾರದ ಕೆಲಸವೂ ಹೌದು. ಅದು ವಿತ್ತೀಯ ಕ್ರಮಗಳ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ಕೆಲಸ ಮಾಡಬೇಕಿತ್ತು. ಯಾಕೆಂದರೆ ಈಗಿನ ಹಣದುಬ್ಬರಕ್ಕೆ ಕೃಷಿ ಪದಾರ್ಥಗಳು ಹಾಗೂ ಪೆಟ್ರೋಲ್ ಬೆಲೆ ಏರಿಕೆ ಬಹುಮಟ್ಟಿಗೆ ಕಾರಣ. ಹಾಗಾಗಿ ಅದರ ಮೇಲಿನ ಸುಂಕವನ್ನು ಕಡಿಮೆ ಮಾಡುವುದು ಹಣದುಬ್ಬರದ ನಿಯಂತ್ರಣಕ್ಕೆ ಒಂದು ಅವಶ್ಯಕ ಕ್ರಮ. ಆದರೆ ಸರಕಾರ ಹಾಗೆ ಮಾಡಿ ತನ್ನ ಆದಾಯವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತಯಾರಿಲ್ಲ ಅನ್ನುವುದು ಸ್ಪಷ್ಟವಾಗಿದೆ. ಹಾಗಾಗಿ ತನ್ನ ಪಾಲಿನ ಕೆಲಸವನ್ನು ನಿಭಾಯಿಸುವುದು ಆರ್‌ಬಿಐಗೆ ತುರ್ತಿನ ವಿಷಯವಾಗಿರಬಹುದು.

ಜೊತೆಗೆ ಹಣದುಬ್ಬರ ಒಂದು ತಾತ್ಕಾಲಿಕ ಪ್ರಕ್ರಿಯೆಯಲ್ಲ. ಅದು ದೀರ್ಘಕಾಲ ಕಾಡುವ ಸಮಸ್ಯೆ ಹಾಗೂ ಅದಕ್ಕೆ ಕಾರಣವಾಗಿರುವ ಉಕ್ರೇನ್ ಯುದ್ಧ, ಜಾಗತಿಕ ಆರ್ಥಿಕ ಬಿಕ್ಕಟ್ಟು ಇವೆಲ್ಲಾ ತಕ್ಷಣ ಪರಿಹಾರವಾಗದ ಸಮಸ್ಯೆಗಳು ಅನ್ನುವ ಅರಿವು ಆರ್‌ಬಿಐ ತಕ್ಷಣ ಕಾರ್ಯಪ್ರವೃತ್ತವಾಗುವುದರ ಹಿಂದೆ ಕೆಲಸ ಮಾಡಿರಬಹುದು. ಆರ್‌ಬಿಐ ತೆಗೆದುಕೊಂಡ ಕ್ರಮಗಳು

ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಎರಡು ಕ್ರಮಗಳನ್ನು ತೆಗೆದು ಕೊಂಡಿದೆ. ಮೊದಲನೆಯದಾಗಿ ರೆಪೊ ದರವನ್ನು 40 ಮೂಲಾಂಶಗಳು ಅಂದರೆ ಶೇ.0.40ರಷ್ಟು ಹೆಚ್ಚಿಸಿದೆ. ಈಗ ಅದು ಶೇ.4.40ಕ್ಕೆ ಏರಿಕೆ ಆಗಿದೆ. ಅಂದರೆ ವಾಣಿಜ್ಯ ಬ್ಯಾಂಕುಗಳು ಇನ್ನು ಮುಂದೆ ಆರ್‌ಬಿಐಯಿಂದ ಪಡೆಯುವ ಸಾಲಕ್ಕೆ ಶೇ. 0.40 ಹೆಚ್ಚು ಬಡ್ಡಿಯನ್ನು ಕೊಡಬೇಕು. ಇದರಿಂದ ಆರ್‌ಬಿಐಯಿಂದ ಸಾಲ ಪಡೆಯುವುದು ಹೆಚ್ಚು ದುಬಾರಿಯಾಗುತ್ತದೆ. ಹಾಗಾಗಿ ಬ್ಯಾಂಕುಗಳು ಪಡೆಯುವ ಸಾಲದ ಪ್ರಮಾಣ ಕಡಿಮೆಯಾಗುತ್ತದೆ. ಆರ್ಥಿಕತೆಯಲ್ಲಿ ಹಣದ ಪ್ರಮಾಣದ ಏರಿಕೆಗೆ ಕಡಿವಾಣ ಹಾಕಿದಂತಾಗುತ್ತದೆ. ಎರಡನೆಯದಾಗಿ ಈಗಾಗಲೇ ಚಲಾವಣೆಯಲ್ಲಿರುವ ದ್ರವ್ಯತೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಅದಕ್ಕಾಗಿ ಸಿಆರ್‌ಆರ್ ಪ್ರಮಾಣವನ್ನು ಹೆಚ್ಚಿಸಿದೆ. ಬ್ಯಾಂಕಿಂಗ್ ನಿಯಮಗಳ ಪ್ರಕಾರ ಪ್ರತಿ ಬ್ಯಾಂಕ್ ತನ್ನ ಒಟ್ಟು ಹಣದ ಒಂದು ನಿರ್ದಿಷ್ಟ ಭಾಗವನ್ನು ರಿಸರ್ವ್ ಬ್ಯಾಂಕಿನಲ್ಲಿ ಇಡಬೇಕು. ಇದನ್ನು ನಗದು ಮೀಸಲು ಅನುಪಾತ ಅಥವಾ ಸಿಆರ್‌ಆರ್ ಎಂದು ಕರೆಯುತ್ತಾರೆ. ಈಗ ಆರ್‌ಬಿಐ ಸಿಆರ್‌ಆರ್ ಪ್ರಮಾಣವನ್ನು ಶೇ.0.50ರಷ್ಟು (ಶೇ. 4.5ಕ್ಕೆ) ಹೆಚ್ಚಿಸಿದೆ. ಈಗ ಬ್ಯಾಂಕುಗಳು ಹೆಚ್ಚು ಹಣವನ್ನು ರಿಸರ್ವ್ ಬ್ಯಾಂಕಿನಲ್ಲಿ ಇಡಬೇಕು. ಆ ಮಟ್ಟಿಗೆ ಚಲಾವಣೆಯಲ್ಲಿರುವ ಹಣ ಕಡಿಮೆಯಾಗುತ್ತದೆ. ಈಗಿನ ಕ್ರಮದಿಂದ 87 ಸಾವಿರ ಕೋಟಿ ರೂಪಾಯಿಯಷ್ಟು ಹಣ ರಿಸರ್ವ್ ಬ್ಯಾಂಕ್ ಸೇರಿಲಿದೆ. ಒಟ್ಟಾರೆಯಾಗಿ ಈ ಎರಡು ಕ್ರಮಗಳಿಂದ ಚಲಾವಣೆಯಲ್ಲಿರುವ ಹಣದ ಪ್ರಮಾಣ ಕಡಿಮೆಯಾಗುತ್ತದೆ. ಆಗ ಹಣದುಬ್ಬರದ ದರ ಕಡಿಮೆಯಾಗುತ್ತದೆ. ಇದು ಈ ಕ್ರಮಗಳ ಹಿಂದಿರುವ ಗ್ರಹಿಕೆ. ಈ ಕ್ರಮಗಳು ಫಲಕಾರಿಯಾಗಬಹುದೆ?

ಬೇಡಿಕೆ ಹೆಚ್ಚಳ ಹಣದುಬ್ಬರಕ್ಕೆ ಕಾರಣವಾಗಿದ್ದರೆ ಈ ಕ್ರಮಗಳು ಫಲಕಾರಿಯಾಗ ಬಹುದು. ಆದರೆ ಈಗಿನ ಹಣದುಬ್ಬರಕ್ಕೆ ಪೆಟ್ರೋಲ್ ಬೆಲೆಗಳು, ಕೃಷಿ ಪದಾರ್ಥಗಳ ಬೆಲೆಗಳ ಹೆಚ್ಚಳ ಇವುಗಳೂ ಕೂಡ ಬಹುಮಟ್ಟಿಗೆ ಕಾರಣ ಎನ್ನುವುದು ಸ್ಪಷ್ಟ. ಉತ್ಪಾದನಾ ವೆಚ್ಚದ ಹೆಚ್ಚಳ ಹಾಗೂ ಪೂರೈಕೆಯ ಕೊರತೆ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಹಾಗಾಗಿ ಕೃಷಿಗೆ ಬೇಕಾದ ಗೊಬ್ಬರ ಇತ್ಯಾದಿ ಪದಾರ್ಥಗಳ ಬೆಲೆಗಳ ನಿಯಂತ್ರಣ ತುರ್ತಾಗಿ ಆಗಬೇಕು. ಜೊತೆಗೆ ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚಿ ಅವು ನಿರಂತರವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅದು ಆರ್‌ಬಿಐ ಕೈಯಲ್ಲಿಲ್ಲ. ಹಾಗೆಯೇ ಪೆಟ್ರೋಲ್, ಡೀಸೆಲ್ ಇತ್ಯಾದಿ ಪದಾರ್ಥಗಳ ಬೆಲೆ ನಿಯಂತ್ರಣವೂ ಆರ್‌ಬಿಐ ಕೈಯಲ್ಲಿ ಇಲ್ಲ. ಹಾಗಾಗಿ ಕೇವಲ ಬಡ್ಡಿ ದರದ ನಿರ್ವಹಣೆಯ ಮೂಲಕ ಈಗಿನ ಹಣದುಬ್ಬರವನ್ನು ನಿಯಂತ್ರಿಸಬಹುದು ಅನ್ನುವುದು ಅನುಮಾನ. ಎಲ್ಲಾ ಜ್ವರಕ್ಕೂ ಒಂದೇ ಮದ್ದು ಸಾಧ್ಯವಿಲ್ಲ. ಜ್ವರದ ಕಾರಣವನ್ನು ತಿಳಿದುಕೊಂಡು ಔಷಧಿ ಕೊಡಬೇಕಾಗುತ್ತದೆ.

ಇಲ್ಲದೇ ಹೋದರೆ ನಾವು ತೆಗೆದುಕೊಳ್ಳುವ ಕ್ರಮಗಳಿಂದ ವ್ಯತಿರಿಕ್ತ ಪರಿಣಾಮ ಗಳು ಉಂಟಾಗಬಹುದು. ಉದಾಹರಣೆಗೆ ರೆಪೋ ದರದ ಹೆಚ್ಚಳದಿಂದ ಸಾಲ ದುಬಾರಿಯಾಗುತ್ತದೆ. ಹಾಗಾಗಿ ಬಂಡವಾಳದ ಹೂಡಿಕೆ ಕಡಿಮೆಯಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಕಮ್ಮಿಯಾಗಿ ಬೆಳವಣಿಗೆ ಕುಂಠಿತಗೊಳ್ಳಬಹುದು. ಜೂನ್‌ನಲ್ಲಿ ರೆಪೊ ದರ ಇನ್ನಷ್ಟು ಏರುವ ನಿರೀಕ್ಷೆ ಇದೆ. ಯಾಕೆಂದರೆ ಮೂಲ (ಕೋರ್) ಹಣದುಬ್ಬರ ದರ ಅಂದರೆ ಹಣದುಬ್ಬರ ದರದಲ್ಲಿ ಆಹಾರ ಹಾಗೂ ಇಂಧನದ ದರವನ್ನು ಕಳೆದ ನಂತರ ಉಳಿದ ಹಣದುಬ್ಬರ, ಶೇ. 6ರಷ್ಟು ಉಳಿಯುವ ಸಾಧ್ಯತೆ ಇದೆ. ಇದು ಖಂಡಿತಾ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಜಿಡಿಪಿ ಕಡಿಮೆಯಾಗುತ್ತದೆ ಎನ್ನುವ ಅಂದಾಜು ಮೊದಲೇ ಇದೆ. ಬೆಳವಣಿಗೆ ಕಡಿಮೆಯಾದರೆ ಉದ್ಯೋಗದ ಪ್ರಮಾಣ ಕಡಿಮೆಯಾಗುತ್ತದೆ. ಜಿಡಿಪಿ ಶೇ.1 ರಷ್ಟು ಕಡಿಮೆ ಆದರೆ ನಿರುದ್ಯೋಗ ಕನಿಷ್ಠ ಶೇ. 0.2 ರಷ್ಟು ಹೆಚ್ಚುತ್ತದೆ ಎಂಬ ಅಂದಾಜಿದೆ. ಒಟ್ಟೊಟ್ಟಿಗೆ ಬಡತನ, ಅಸಮಾನತೆ ಇವೆಲ್ಲಾ ಹೆಚ್ಚುತ್ತಾ ಹೋಗುತ್ತವೆ.

ಇರುವ ಒಂದೇ ಪರಿಹಾರ ಅಂದರೆ, ಸರಕಾರ ಕೂಡ ವಿತ್ತೀಯ ಕ್ರಮಗಳ ಮೂಲಕ ಅಂದರೆ ತೆರಿಗೆಯನ್ನು ಸೂಕ್ತವಾಗಿ ನಿರ್ವಹಿಸುವುದರ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಪಟ್ರೋಲ್ ಹಾಗೂ ಇತರ ಅವಶ್ಯಕ ಪದಾರ್ಥಗಳ ಮೇಲೆ ತೆರಿಗೆಯನ್ನು ಕಡಿಮೆ ಮಾಡಬೇಕು. ಇಲ್ಲದೇ ಹೋದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ತರಾತುರಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸಿಬಿಡುತ್ತದೆ.

Writer - ವೇಣುಗೋಪಾಲ್ ಟಿ.ಎಸ್.

contributor

Editor - ವೇಣುಗೋಪಾಲ್ ಟಿ.ಎಸ್.

contributor

Similar News