‌ಕರ್ನಾಟಕ ಹೈಕೋರ್ಟ್ ನ ʼವೈವಾಹಿಕ ಅತ್ಯಾಚಾರ ವಿಚಾರಣೆʼ ತಡೆಗೆ ಸುಪ್ರೀಂ ನಕಾರ

Update: 2022-05-10 16:43 GMT

ಹೊಸದಿಲ್ಲಿ, ಮೇ 10: ಪತ್ನಿಯ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನ ವಿಚಾರಣೆಗೆ ಅನುಮತಿ ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಪತ್ನಿಯ ಸಮ್ಮತಿ ಇಲ್ಲದೆ ಪತಿಯಿಂದ ನಡೆಯುವ ಕ್ರೂರ ಲೈಂಗಿಕ ದೌರ್ಜನ್ಯವನ್ನು ಅತ್ಯಾಚಾರ ಎಂದೇ ವ್ಯಾಖ್ಯಾನಿಸಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಮಾರ್ಚ್ 23ರಂದು ಅಭಿಪ್ರಾಯಿಸಿತ್ತು. ವ್ಯಕ್ತಿಯ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಸಿದ್ಧಾರ್ಥ ದವೆ, ಉಚ್ಚ ನ್ಯಾಯಾಲಯದ ವಿಚಾರಣೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದರು. 

ಪತ್ನಿಯ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಈ ಮನವಿಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ವಿಚಾರಣೆಗೆ ಈಗಾಗಲೇ 5 ವರ್ಷ ತಡೆ ನೀಡಲಾಗಿತ್ತು ಎಂದು ತಿಳಿಸಿದರು. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ, ಹೀಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆಗೆ ತಡೆ ವಿಧಿಸಲಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ನೋಟಿಸು ನೀಡಿತು. ಈ ನೋಟಿಸು ನೀಡಿದ ಬಳಿಕ, ನಾವು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದೇವೆ ಎಂದು ಅವರಿಗೆ ತಿಳಿಸಬಹುದು ಎಂದು ರಮಣ ಅವರು ಹೇಳಿದರು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಜುಲೈ ಮೂರನೇ ವಾರದಲ್ಲಿ ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News