ಐಪಿಎಲ್: ರಸೆಲ್ ಆಲ್‌ರೌಂಡ್ ಆಟ, ಕೆಕೆಆರ್ ಗೆಲುವಿನ ಕೇಕೆ

Update: 2022-05-14 18:06 GMT
Photo:twitter

 ಪುಣೆ, ಮೇ 14: ಆ್ಯಂಡ್ರೆ ರಸೆಲ್  ಆಲ್‌ರೌಂಡ್  ಆಟದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್‌ನ 61ನೇ ಪಂದ್ಯದಲ್ಲಿ 54 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
 
 ಶನಿವಾರ ಗೆಲ್ಲಲು 178 ರನ್ ಗುರಿ ಪಡೆದ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೆಕೆಆರ್ ಪರ ರಸೆಲ್(3-22)ಹಾಗೂ ಟಿಮ್ ಸೌಥಿ(2-23) ಐದು ವಿಕೆಟ್ ಹಂಚಿಕೊಂಡರು. ಉಮೇಶ್ ಯಾದವ್(1-19), ಸುನೀಲ್ ನರೇನ್(1-34) ಹಾಗೂ ವರುಣ್ ಚಕ್ರವರ್ತಿ(1-25)ತಲಾ ಒಂದು ವಿಕೆಟ್ ಪಡೆದರು.

 ಹೈದರಾಬಾದ್ ಪರ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (43 ರನ್, 28 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಏಡೆನ್ ಮರ್ಕ್ರಾಮ್(32ರನ್, 25 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ಆ್ಯಂಡ್ರೆ ರಸೆಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 177 ರನ್ ಗಳಿಸಿತು.

ನಿತಿಶ್ ರಾಣಾ, ಅಜಿಂಕ್ಯ ರಹಾನೆ ಹಾಗೂ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್‌ಗಳನ್ನು ಉರುಳಿಸುವ ಮೂಲಕ ವೇಗದ ಬೌಲರ್ ಉಮ್ರಾನ್ ಮಲಿಕ್ ಹೈದರಾಬಾದ್‌ಗೆ ಆರಂಭಿಕ ಮೇಲುಗೈ ಒದಗಿಸಿದರು. ವೆಂಕಟೇಶ್ ಅಯ್ಯರ್ 7 ರನ್ ಗಳಿಸಿ ಔಟಾದರು. ಆಗ ಜೊತೆಯಾದ ಅಜಿಂಕ್ಯ ರಹಾನೆ (28 ರನ್, 24 ಎಸೆತ) ಹಾಗೂ ನಿತಿಶ್ ರಾಣಾ(26 ರನ್, 16 ಎಸೆತ) 2ನೇ ವಿಕೆಟ್‌ಗೆ 48 ರನ್ ಜೊತೆಯಾಟ ನಡೆಸಿ ಹೈದರಾಬಾದ್ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು.

ಕೋಲ್ಕತಾವು 12ನೇ ಓವರ್‌ನಲ್ಲಿ 94 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ಸ್ಯಾಮ್ ಬಿಲ್ಲಿಂಗ್ಸ್(34 ರನ್, 29 ಎಸೆತ)ಹಾಗೂ ರಸೆಲ್(ಔಟಾಗದೆ 49 ರನ್, 28 ಎಸೆತ, 3 ಬೌಂಡರಿ, 4 ಸಿಕ್ಸರ್)ಆರನೇ ವಿಕೆಟ್‌ಗೆ 63 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಬಿಲ್ಲಿಂಗ್ಸ್ ಔಟಾದ ಬಳಿಕ ಸುನೀಲ್ ನರೇನ್(1)ಅವರೊಂದಿಗೆ 7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 20 ರನ್ ಸೇರಿಸಿದ ರಸೆಲ್ ಅವರು ವಾಷಿಂಗ್ಟನ್ ಸುಂದರ್ ಎಸೆದ ಕೊನೆಯ ಓವರ್‌ನಲ್ಲಿ 3 ಸಿಕ್ಸರ್ ಸಿಡಿಸಿ ತಂಡ 177 ರನ್ ಗಳಿಸಲು ನೆರವಾದರು.

ಹೈದರಾಬಾದ್ ಪರ ಮಲಿಕ್(3-33) ಯಶಸ್ವಿ ಬೌಲರ್ ಎನಿಸಿಕೊಂಡರು. ಭುವನೇಶ್ವರ ಕುಮಾರ್(1-27), ಜಾನ್ಸನ್(1-30) ಹಾಗೂ ನಟರಾಜನ್(1-43)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News