"ನವರಾತ್ರಿ ವೇಳೆ ಮಾಂಸ ಮಾರಾಟ ನಿಷೇಧವನ್ನು ಖಂಡಿಸುತ್ತೇನೆ" ಎಂದಿದ್ದ ಸೋನು ನಿಗಮ್‌ ವಿರುದ್ಧ ಬಲಪಂಥೀಯರು ಕಿಡಿ

Update: 2022-05-18 17:48 GMT

ಮುಂಬೈ: ಈ ಹಿಂದೆ ಬೆಳಗ್ಗಿನ ಆಝಾನ್‌ ವಿರುದ್ಧ ಹೇಳಿಕೆ ನೀಡಿ ಬಲಪಂಥೀಯರಿಂದ ಶ್ಲಾಘನೆಗೆ ಒಳಗಾಗಿದ್ದ ಬಹುಭಾಷಾ ಗಾಯಕ ಸೋನು ನಿಗಮ್‌ ವಿರುದ್ಧ ಇದೀಗ ಬಲಪಂಥೀಯರು ಮತ್ತು ಹಿಂದುತ್ವ ಸಂಘಟನೆಗಳು ಟ್ವಿಟರ್‌ ಅಭಿಯಾನ ಪ್ರಾರಂಭಿಸಿದ್ದಾರೆ. 

ತಿಂಗಳ ಹಿಂದೆ ಟೈಮ್ಸ್‌ ನೌ ನಿರೂಪಕಿ ನಾವಿಕಾ ಕುಮಾರ್‌ ಜೊತೆ ನೀಡಿರುವ ಸಂದರ್ಶನದ ತುಣುಕುಗಳನ್ನು ಹಿಡಿದು #BhandSonuNigam ಟ್ವಿಟರ್‌ ನಲ್ಲಿ ಟ್ರೆಂಡ್‌ ಆಗಿದೆ. 

ನವರಾತ್ರಿ ಹಾಗೂ ಇತರೆ ಉತ್ಸವಗಳ ಸಮಯದಲ್ಲಿ ಮಾಂಸ ಮಾರಾಟಕ್ಕೆ ಅಡ್ಡಿ ಪಡಿಸುವುದನ್ನು ಖಂಡಿಸಿರುವ ಸೋನು ನಿಗಮ್, ದುಬೈ ಸಂಸ್ಕೃತಿಯನ್ನು ಕೊಂಡಾಡಿದ್ದಾರೆ. ಜೊತೆಗೆ, "ನಾನು ಜೈಶ್ರೀರಾಮ್‌ ಎಂದು ಅರಚಾಡುವ ಭಕ್ತನಲ್ಲ" ಎಂದಿದ್ದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. 

“ನವರಾತ್ರಿ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಲಾಗುತ್ತದೆ. ಇದು ಸರಿಯಲ್ಲ, ನಾನು ದುಬೈಯಲ್ಲಿದ್ದೆ, ಅದು ಇಸ್ಲಾಮಿಕ್‌ ದೇಶ. ಆದರೆ, ಅಲ್ಲಿ ಇಂತಹದ್ದೇನು ಕಾಣುವುದಿಲ್ಲ. ರಮ್ಝಾನ್‌ನಲ್ಲಿ ಅದು ಮಾಡಬಾರದು, ಇದು ಮಾಡಬಾರದು ಎಂಬ ನಿರ್ಬಂಧಗಳೇನು ಇರುವುದಿಲ್ಲ. ನವರಾತ್ರಿಗಳಲ್ಲಿ ಮಾಂಸದ ನಿಷೇಧವನ್ನು ನಾನು ಖಂಡಿಸುತ್ತೇನೆ. ಮಟನ್‌ ಮಾರಾಟ ಮಾಡುವುದು ಒಬ್ಬನ ಉದ್ಯೋಗ, ಅದನ್ನು ಹೇಗೆ ನೀವು ಬಂದ್‌ ಮಾಡಿಸುತ್ತೀರಿ” ಎಂದು ಪ್ರಶ್ನಿಸುವ ವಿಡಿಯೋ ಈಗ ಟ್ವಿಟರಿನಲ್ಲಿ ಟ್ರೆಂಡ್‌ ಆಗುತ್ತಿದೆ.

ಹಲವು ಬಲಪಂಥೀಯರು ಅವರ ಸಂದರ್ಶನದ ಹಲವು ತುಣುಕುಗಳನ್ನು ಟ್ವೀಟ್‌ ಮಾಡಿ "ನಾನು ಸೋನುನಿಗಂರನ್ನು ಓರ್ವ ಉತ್ತಮ ವ್ಯಕ್ತಿ ಎಂದು ತಿಳಿದುಕೊಂಡಿದ್ದೆ. ಆದರೆ ಈ ಬಾಲಿವುಡ್‌ ನವರೆಲ್ಲರೂ ಒಂದೇ, ದೇಶದ್ರೋಹಿಗಳಿಗೆ ಬೆಂಬಲಿಸುವವರು ಮತ್ತು ಹಿಂದೂ ವಿರೋಧಿಗಳು" ಎಂದು ತಮ್ಮ ಹತಾಶೆಯನ್ನು ಹೊರಗೆಡಹಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News