ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಹತ್ತರ ಬಾಲೆ!

Update: 2022-06-08 07:09 GMT
Editor : Saleeth Sufiyan

ಮುಂಬೈ: ಮಹಾರಾಷ್ಟ್ರದ ವೊರ್ಲಿಯ 10 ವರ್ಷದ ಪೋರಿ, ಚಾಂಪಿಯನ್ ಸ್ಕೇಟರ್ ರಿದಂ ಮಮಾನಿಯಾ, ಹಿಮಾಲಯನ್ ಪರ್ವತ ಶ್ರೇಣಿಯ ಎವೆರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಏರಿದ ಮೊಟ್ಟಮೊದಲ ಅತ್ಯಂತ ಕಿರಿಯ ಭಾರತೀಯ ಪರ್ವತಾರೋಹಿ ಎನಿಸಿಕೊಂಡಿದ್ದಾರೆ.

ರಿದಂಗೆ ಯಾವುದೇ ಕೋಚಿಂಗ್ ಅಥವಾ ಔಪಚಾರಿಕ ತರಬೇತಿ ಇರಲಿಲ್ಲ. ಆದರೆ ಪ್ರತಿ ದಿನ ಮುಂಜಾನೆ 5ಕ್ಕೆ ಶಾಸ್ತ್ರಿ ಗಾರ್ಡನ್ ಪಕ್ಕ ಎತ್ತರದ ಹಾಗೂ ಕಡಿದಾದ ಮೆಟ್ಟಲುಗಳನ್ನು ಏರುವ ಮೂಲಕ ಮತ್ತು ಓಡುವ ಮೂಲಕ ಅಭ್ಯಾಸ ನಡೆಸಿದ್ದಳು.

ಸಮುದ್ರಮಟ್ಟದಿಂದ 5364 ಮೀಟರ್ ಎತ್ತರದಲ್ಲಿ ಕಡಿಮೆ ಆಮ್ಲಜನಕದ ವಾತಾವರಣ ಅಥವಾ ವಾಕರಿಕೆ ಇಲ್ಲವೇ ಪಾದದ ಮೇಲಿನ ಗುಳ್ಳೆಗಳು ಈ ಪೋರಿಯ ಸಾಧನೆಯ ಛಲಕ್ಕೆ ಅಡ್ಡಿಯಾಗಲಿಲ್ಲ. ಮೇ 6ರಂದು ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ಬಾಂದ್ರಾ ಋಷಿಕುಲ ವಿದ್ಯಾಲಯದ ಐದನೇ ತರಗತಿ ವಿದ್ಯಾರ್ಥಿನಿಯಾಗಿರುವ ರಿದಂ, ತಮ್ಮ ಹೆಮ್ಮೆಯ ಪೋಷಕರಾದ ಊರ್ಮಿ ಮತ್ತು ಹರ್ಷಲ್ ಜತೆಗೆ ಶೃಂಗದ ತುದಿ ತಲುಪಿದಳು.

"ಇಬಿಸಿ ಶೃಂಗ ತಲುಪುವುದು ನನ್ನ ಗುರಿಯಾಗಿತ್ತು. ಆದ್ದರಿಂದ ಚಳಿ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಕ್ರೀಡೆಯನ್ನು ಆಸ್ವಾದಿಸುತ್ತೇನೆ. ಅಪರೂಪದ ಆಲೀಕಲು ಮಳೆ ನನಗೆ ಹೊಸದು" ಎಂದು ರಿದಂ ಉದ್ಗರಿಸಿದಳು.

"ರಿದಂ ರಾಷ್ಟ್ರಮಟ್ಟದ ಸ್ಕೇಟರ್. ಆದ್ದರಿಂದ ಆಕೆಯ ತೊಡೆ ಮಾಂಸಖಂಡಗಳು ಶಕ್ತಿಯುತ. ಆದರೆ ಆಕೆಯ ಉತ್ಕಟ ಇಚ್ಛೆ ಮತ್ತು ಆತ್ಮಪ್ರಜ್ಞೆ ಉಲ್ಲೇಖಾರ್ಹ. ಇಬಿಸಿ ತಲುಪಲು ಇತರರು ಹೆಲಿಕಾಪ್ಟರ್ ಆಯ್ಕೆ ಮಾಡಿಕೊಂಡರೆ ಆಕೆ ಪರ್ವತಾರೋಹಣವನ್ನೇ ಆಯ್ಕೆ ಮಾಡಿಕೊಂಡಳು. ತನ್ನ ಕಸಗಳನ್ನು ಪರ್ವತದಲ್ಲೇ ಎಸೆದು ಬರುವ ಬದಲು ವರ್ಷಗಳಾದರೂ ಮಣ್ಣಿನಲ್ಲಿ ಸೇರದ ಎಲ್ಲ ಕಸವನ್ನೂ ಸಂಗ್ರಹಿಸಿ ಕಠ್ಮಂಡುವಿಗೆ ತಂದಳು" ಎಂದು ತಾಯಿ ಊರ್ಮಿ ವಿವರಿಸಿದರು.

Writer - Saleeth Sufiyan

contributor

Editor - Saleeth Sufiyan

contributor

Similar News