‘ಶೋಲೇ’ ಹೆಸರು ಬಳಸಿದ್ದಕ್ಕಾಗಿ 25 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

Update: 2022-05-26 17:41 GMT

ಹೊಸದಿಲ್ಲಿ, ಮೇ 26: ‘‘ಶೋಲೇ’’ ಎನ್ನುವುದು ‘‘ಪ್ರಸಿದ್ಧ ಚಿತ್ರ’’ವೊಂದರ ಹೆಸರಾಗಿದ್ದು, ಅದಕ್ಕೆ ರಕ್ಷಣೆ ಇಲ್ಲ ಎಂಬುದಾಗಿ ಭಾವಿಸಬಾರದು ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ ಹಾಗೂ ಆ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾದ ವ್ಯಕ್ತಿಗಳು ಬಳಸುವುದನ್ನು ನಿರ್ಬಂಧಿಸಿದೆ.

ತಮ್ಮ ಉದ್ಯಮಗಳನ್ನು ನಡೆಸಲು ಜನಪ್ರಿಯ ಚಿತ್ರದ ಹೆಸರನ್ನು ಬಳಸುತ್ತಿರುವ ವ್ಯಕ್ತಿಗಳ ವಿರುದ್ಧ ಚಿತ್ರದ ನಿರ್ಮಾಪಕರಾದ ಶೋಲೇ ಮೀಡಿಯ ಆ್ಯಂಡ್ ಎಂಟರ್‌ಟೇನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸಿಪ್ಪಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮೊಕದ್ದಮೆ ಹೂಡಿದ್ದವು.

‘ಶೋಲೇ’ ಮುಂತಾದ ಕೆಲವು ಚಿತ್ರಗಳ ಹೆಸರುಗಳು ಕೇವಲ ಸಾಧಾರಣ ಪದಗಳಾಗಿರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಹಾಗೂ ಚಿತ್ರದ ನಿರ್ಮಾಪಕರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ.

ಟ್ರೇಡ್‌ಮಾರ್ಕ್ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಮ್. ಸಿಂಗ್, ಚಿತ್ರಗಳು ಮತ್ತು ಅವುಗಳ ಹೆಸರುಗಳನ್ನು ಟ್ರೇಡ್‌ಮಾರ್ಕ್ ಕಾನೂನಿನಡಿ ಗುರುತಿಸಬಹುದಾಗಿದೆ ಎಂದರು.

ಈ ಮೊಕದ್ದಮೆಯ ವಿಚಾರಣೆ 20 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ನಡೆಯುತ್ತಿದೆ ಹಾಗೂ ಪ್ರತಿವಾದಿಗಳು ಈ ಚಿತ್ರದ ಡಿವಿಡಿಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡುವುದಕ್ಕಾಗಿ ‘ಶೋಲೇ’ ಚಿಹ್ನೆಯನ್ನು ಬಳಸಿರುವುದು ಸ್ಪಷ್ಟವಾಗಿ ಅಪ್ರಾಮಾಣಿಕವಾಗಿದೆ ಮತ್ತು ದುರುದ್ದೇಶಪೂರಿತವಾಗಿದೆ ಎಂದು ನ್ಯಾಯಾಧೀಶೆ ಹೇಳಿದರು.

ಪರಿಹಾರ ಮತ್ತು ಮೊಕದ್ದಮೆಯ ವೆಚ್ಚವಾಗಿ ದೂರುದಾರರಿಗೆ 25 ಲಕ್ಷ ರೂಪಾಯಿ ಮೊತ್ತವನ್ನು ನೀಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದರು ಹಾಗೂ ಈ ಮೊತ್ತವನ್ನು ಪಾವತಿಸಲು ಪ್ರತಿವಾದಿಗಳಿಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News