ಮೊಬೈಲ್‌ನ ಗೇಮ್‌ಗಾಗಿ ಕಿರಿಯ ಸಹೋದರನನ್ನೇ ಹತ್ಯೆಗೈದ 16 ವರ್ಷದ ಬಾಲಕ

Update: 2022-05-27 04:29 GMT

ಅಹ್ಮದಾಬಾದ್, ಮೇ 26: ಆನ್‌ಲೈನ್ ಗೇಮ್ ಆಡಲು ಮೊಬೈಲ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 16 ವರ್ಷದ ಬಾಲಕ ತನ್ನ ಕಿರಿಯ ಸಹೋದರನನ್ನು ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆಗೈದು, ಬಾವಿಗೆ ಎಸೆದ ಘಟನೆ ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಗೋಬ್ಲೇಜ್ ಗ್ರಾಮದಲ್ಲಿ ಸೋಮವಾರ ನಡೆದಿದೆ. ಆರೋಪಿ ಬಾಲಕನನ್ನು ಬುಧವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಖೇಡಾ ಪಟ್ಟಣ ಪೊಲೀಸ್‌ನ ಸಬ್ ಇನ್ಸ್‌ಪೆಕ್ಟರ್ ಎಸ್.ಪಿ. ಪ್ರಜಾಪತಿ ಅವರು ತಿಳಿಸಿದ್ದಾರೆ.

ನೆರೆಯ ರಾಜಸ್ಥಾನದ ಬನ್ಸ್ವಾರ ಜಿಲ್ಲೆಯ ಈ ಕುಟುಂಬ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಲು ಗೋಬ್ಲೇಜ್‌ಗೆ ಆಗಮಿಸಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ‘‘ಮೇ 23ರಂದು ಇಬ್ಬರು ಸಹೋದರರು ಮೊಬೈಲ್‌ನಲ್ಲಿ ಆಟ ಆಡುತ್ತಿದ್ದರು. ಹಿರಿಯ ಸಹೋದರನ ಸರದಿ ಬಂದಾಗ ಮೊಬೈಲ್ ನೀಡಲು ಕಿರಿಯ ಸಹೋದರ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಹಿರಿಯ ಸಹೋದರ ಆತನೊಂದಿಗೆ ಜಗಳವಾಡಿದ್ದಾನೆ. ಆಕ್ರೋಶಿತನಾಗಿ ಆತನ ತಲೆಗೆ ದೊಡ್ಡ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಕಿರಿಯ ಸಹೋದರ ಪ್ರಜ್ಞೆ ಕಳೆದುಕೊಂಡಿದ್ದಾನೆ. ಕೂಡಲೇ ಆತ ಕಿರಿಯ ಸಹೋದರನ ದೇಹಕ್ಕೆ ವಯರ್ ಬಳಸಿ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾನೆ’’ ಎಂದು ಪೊಲೀಸರು ತಿಳಿಸಿದ್ದಾರೆ.

ಅನಂತರ ತನ್ನ ಹೆತ್ತವರಿಗೆ ವಿಷಯ ತಿಳಿಸದೆ ಆರೋಪಿ ಬಾಲಕ ಬಸ್ ಹತ್ತಿ ತನ್ನ ಊರಾದ ರಾಜಸ್ಥಾನಕ್ಕೆ ತೆರಳಿದ್ದಾನೆ ಎಂದು ಅವರು ತಿಳಿಸಿದ್ದಾರೆ. ‘‘ಮನೆಯಲ್ಲಿ ತಡ ಸಂಜೆ ವರೆಗೆ ತಮ್ಮ ಇಬ್ಬರು ಪುತ್ರರನ್ನು ಕಾಣದಾದಾಗ ಹೆತ್ತವರು ತಮ್ಮ ಊರಿನಲ್ಲಿ ವಿಚಾರಿಸಿದರು ಹಾಗೂ ಅಲ್ಲಿ ತನ್ನ ಹಿರಿಯ ಪುತ್ರನಿರುವುದು ತಿಳಿದು ಬಂದಿತು. ಆತನನ್ನು ಮತ್ತೆ ಕರೆ ತಂದು ವಿಚಾರಿಸಿದಾಗ ಆತ ಕಿರಿಯ ಸಹೋದರನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದಾನೆ’’ ಎಂದು ಅವರು ಹೇಳಿದ್ದಾರೆ.

ಕುಟುಂಬದಿಂದ ಘಟನೆಯ ಕುರಿತು ಬುಧವಾರ ಮಾಹಿತಿ ಪಡೆದುಕೊಂಡ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಹಾಗೂ ಬಾಲಕನ ಮೃತದೇಹವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಅಲ್ಲದೆ, ಬಾಲಕನ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಜಾಪತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News