ನವನೀತ್ ರಾಣಾಗೆ ಜೀವ ಬೆದರಿಕೆ; ಪ್ರಕರಣ ದಾಖಲು

Update: 2022-05-26 18:21 GMT
Photo: PTI

ಹೊಸದಿಲ್ಲಿ, ಮೇ 26: ತನಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ಲೋಕಸಭಾ ಸಂಸದೆ ನವನೀತ್ ರಾಣಾ ದೂರು ದಾಖಲಿಸಿದ ಒಂದು ದಿನದ ಬಳಿಕ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮಾತೋಶ್ರೀ-ಹನುಮಾನ್ ಚಾಲೀಸ್ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ನ್ಯಾಯಾಲಯ ನವನೀತ್ ರಾಣಾ ಅವರಿಗೆ ಇತ್ತೀಚೆಗೆ ಜಾಮೀನು ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಹೊಸದಿಲ್ಲಿ) ಅಮೃತಾ ಗುಗುಲೋತ್ ಅವರು ತಿಳಿಸಿದ್ದಾರೆ. ರಾಣಾ ಅವರು ಬುಧವಾರ ದಿಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘‘ನನ್ನ ಮೊಬೈಲ್‌ಗೆ ಮಂಗಳವಾರ ಸಂಜೆ 5.27ರಿಂದ 5.47ರ ನಡುವೆ 11 ಬಾರಿ ಕರೆ ಮಾಡಿ ಬೆದರಿಕೆ ಒಡ್ಡಲಾಗಿದೆ. ಇನ್ನೊಂದು ತುದಿಯಲ್ಲಿದ್ದ ವ್ಯಕ್ತಿ ಅನುಚಿತವಾಗಿ ಮಾತನಾಡಿದ್ದಾನೆ. ಕಿರುಕುಳ ನೀಡಿದ್ದಾನೆ. ಅಲ್ಲದೆ, ನಾನು ಮಹಾರಾಷ್ಟ್ರಕ್ಕೆ ಬಂದರೆ, ಹತ್ಯೆಗೈಯುವುದಾಗಿ ಬೆದರಿಕೆ ಒಡ್ಡಿದ್ದಾನೆ’’ಎಂದು ಅವರು ದೂರಿನಲ್ಲಿ ಅವರು ತಿಳಿಸಿದ್ದಾರೆ.

‘‘ನೀವು ಮತ್ತೊಮ್ಮೆ ಹನುಮಾನ್ ಚಾಲೀಸ್ ಪಠಿಸಿದರೆ, ನಿಮ್ಮನ್ನು ಹತ್ಯೆಗೈಯಲಾಗುವುದು’’ ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಮುಂಬೈಯಲ್ಲಿರುವ ನಿವಾಸ ‘ಮಾತೋಶ್ರೀ’ಯ ಹೊರಗೆ ಹನುಮಾನ್ ಚಾಲೀಸ್ ಪಠಿಸಲಾಗುವುದು ಎಂದು ನವನೀತ್ ರಾಣಾ ಹಾಗೂ ಅವರ ಪತಿ, ಶಾಸಕ ರವಿ ರಾಣಾ ಎಪ್ರಿಲ್‌ನಲ್ಲಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ರಾಣಾ ದಂಪತಿಯನ್ನು ಎಪ್ರಿಲ್ 23ರಂದು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News