ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ತೀವ್ರ ಏರಿಕೆ: ಸೂಕ್ತ ಕ್ರಮಗಳಿಗೆ ಎನ್‌ಜಿಒಗಳ ಕರೆ

Update: 2022-05-28 17:25 GMT

ಹೊಸದಿಲ್ಲಿ, ಮೇ 28: ಕೋವಿಡ್ ಸಾಂಕ್ರಾಮಿಕದ ಸಾಮಾಜಿಕ ಪ್ರಭಾವದಿಂದಾಗಿ ಕಳೆದೆರಡು ವರ್ಷಗಳಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ತೀವ್ರವಾಗಿ ಹೆಚ್ಚಿವೆ ಎಂದು ಎನ್ಜಿಒಗಳು ಕಳವಳ ವ್ಯಕ್ತಪಡಿಸಿವೆ.

ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಡೆಯಲು ಗಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ತಕ್ಷಣ ಬಲಪಡಿಸುವಂತೆ, ಪೋಷಕರನ್ನು ಜಾಗ್ರತಗೊಳಿಸುವಂತೆ ಮತ್ತು ತರಬೇತಿ ನೀಡುವಂತೆ ಕರೆ ನೀಡಿರುವ ಎನ್ಜಿಒಗಳು,ಈ ನಿಟ್ಟಿನಲ್ಲಿ ಸಾಕಷ್ಟು ಮುಂಗಡ ಪತ್ರ ಹಂಚಿಕೆಯನ್ನು ಮಾಡುವಂತೆ ಸರಕಾರವನ್ನು ಆಗ್ರಹಿಸಿವೆ.
 
ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ ಇತ್ತೀಚಿನ ಅಂಕಿಅಂಶಗಳಂತೆ 2020ರಲ್ಲಿ ಭಾರತದಲ್ಲಿ 59,262 ಮಕ್ಕಳು ನಾಪತ್ತೆಯಾಗಿದ್ದರು. ಅದಕ್ಕೂ ಹಿಂದಿನ ವರ್ಷಗಳಲ್ಲಿ 48,972 ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದರೊಂದಿಗೆ ನಾಪತ್ತೆಯಾಗಿರುವ ಮಕ್ಕಳ ಒಟ್ಟು ಸಂಖ್ಯೆ 1,08,234ಕ್ಕೇರಿದೆ. 2008 ಮತ್ತು 2020ರ ನಡುವೆ ವಾರ್ಷಿಕವಾಗಿ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚುಕಡಿಮೆ 13 ಪಟ್ಟು ಹೆಚ್ಚಾಗಿವೆ. 2008ರಲ್ಲಿ 7,650 ಮಕ್ಕಳು ನಾಪತ್ತೆಯಾಗಿದ್ದರು.

ಕಳೆದೆರಡು ವರ್ಷಗಳಲ್ಲಿ ಕೈಲಾಶ್ ಸತ್ಯಾರ್ಥಿ ಪ್ರತಿಷ್ಠಾನದ ಸೋದರಿ ಸಂಸ್ಥೆಯಾಗಿರುವ ಬಚಪನ್ ಬಚಾವೋ ಆಂದೋಲನ್ ದೇಶಾದ್ಯಂತ ಸುಮಾರು 12,000 ಮಕ್ಕಳನ್ನು ರಕ್ಷಿಸಿದೆ. ಸಾಂಕ್ರಾಮಿಕದ ಬಳಿಕ ಮಕ್ಕಳ ಕಳ್ಳ ಸಾಗಾಣಿಕೆ ತೀವ್ರವಾಗಿ ಹೆಚ್ಚಿದೆ ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಸಂಘಟನೆಯ ಕಾರ್ಯಕಾರಿ ನಿರ್ದೇಶಕ ಧನಂಜಯ ಟಿಂಗಳ್ ತಿಳಿಸಿದರು.
ಮಕ್ಕಳು ನಾಪತ್ತೆಯಾಗುತ್ತಿರುವುದಕ್ಕೆ ಅಥವಾ ಕಳ್ಳ ಸಾಗಾಣಿಕೆಯ ಬಲಿಪಶುಗಳಾಗುತ್ತಿರುವುದಕ್ಕೆ ಹೆಚ್ಚುತ್ತಿರುವ ಬಡತನವು ಪ್ರಮುಖ ಕಾರಣವಾಗಿದೆ ಎಂದು ಚೈಲ್ಡ್ ಪ್ರೊಟೆಕ್ಷನ್ನ ಪ್ರಭಾತ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News