ಸಮೀಕ್ಷೆಯ ವೀಡಿಯೊ, ಚಿತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದಂತೆ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ಸಮಿತಿ ಮನವಿ

Update: 2022-05-29 14:05 GMT
Photo: PTI

ಲಕ್ನೋ,ಮೇ 29: ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವೀಡಿಯೊಗಳು ಮತ್ತು ಚಿತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸದಂತೆ ಮಸೀದಿ ಆಡಳಿತ ಸಮಿತಿಯು ಶನಿವಾರ ವಾರಣಾಸಿ ಜಿಲ್ಲಾ ನ್ಯಾಯಾಲಯವನ್ನು ಆಗ್ರಹಿಸಿದೆ.

ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ಸಮೀಕ್ಷೆಯ ವೀಡಿಯೊಗಳು ಮತ್ತು ಚಿತ್ರಗಳನ್ನು ಪಡೆಯಲು ಪ್ರಕರಣದಲ್ಲಿ ಭಾಗಿಯಾಗಿರುವ ಕಕ್ಷಿದಾರರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಅಂಜುಮನ್ ಇಂತೆಝಾಮಿಯಾ ಮಸ್ಜಿದ್ ಸಮಿತಿಯು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಜಯಕೃಷ್ಣ ವಿಶ್ವೇಶ ಅವರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದೆ. ಪ್ರಕರಣದಲ್ಲಿ ಕಕ್ಷಿದಾರರಲ್ಲದಿದ್ದರೂ ಹಲವಾರು ವ್ಯಕ್ತಿಗಳು ಮತ್ತು ಸುದ್ದಿ ವಾಹಿನಿಗಳು ಸಮೀಕ್ಷೆಯ ದೃಶ್ಯಾವಳಿಯ ಪ್ರತಿಯನ್ನು ಪಡೆಯಲು ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಸಮಿತಿಯು ಬೆಟ್ಟು ಮಾಡಿದೆ.

ಕಳೆದ ಎಪ್ರಿಲ್ ನಲ್ಲಿ ನ್ಯಾಯಾಲಯವು ಹೊರಡಿಸಿದ್ದ ಆದೇಶದ ಮೇರೆಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ವೀಡಿಯೊ ಸಮೀಕ್ಷೆಯನ್ನು ನಡೆಸಲಾಗಿದೆ. ಮಸೀದಿಯ ಗೋಡೆಯಲ್ಲಿ ಶೃಂಗಾರ ಗೌರಿಯ ಬಿಂಬವಿದೆ ಎಂದು ಪ್ರತಿಪಾದಿಸಿದ್ದ ಐವರು ಹಿಂದು ಮಹಿಳೆಯರು ಅಲ್ಲಿ ದೈನಂದಿನ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶವನ್ನು ಕೋರಿ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಮೇ ತಿಂಗಳಿನಲ್ಲಿ ಸಮೀಕ್ಷೆಯು ಪೂರ್ಣಗೊಂಡ ಬಳಿಕ ಹಿಂದು ಕಕ್ಷಿದಾರರ ಪರ ವಕೀಲರು ಮಸೀದಿಯ ವಝುಖಾನಾದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಪ್ರತಿಪಾದಿಸಿದ್ದರು. ಆದರೆ ಅದು ಕಲ್ಲಿನ ಕಾರಂಜಿಯ ಭಾಗವಾಗಿದೆ ಎಂದು ಸಮಿತಿಯು ತಿಳಿಸಿತ್ತು. ಸರ್ವೆ ಆಯೋಗದ ವರದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮೇ 26ರಂದು ಏಳು ದಿನಗಳ ಕಾಲಾವಕಾಶವನ್ನು ನೀಡಿರುವ ಜಿಲ್ಲಾ ನ್ಯಾಯಾಲಯವು ಮೇ 30ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News