ಆಧಾರ್‌ ಫೋಟೋಕಾಪಿ ʼದುರ್ಬಳಕೆʼ ಬಗ್ಗೆ ನೀಡಿದ್ದ ಎಚ್ಚರಿಕೆಯನ್ನು ಹಿಂಪಡೆದ ಕೇಂದ್ರ.!

Update: 2022-05-29 14:20 GMT

ಹೊಸದಿಲ್ಲಿ,ಮೇ 29: ಪರವಾನಿಗೆ ಹೊಂದಿರದ ಖಾಸಗಿ ಸಂಸ್ಥೆಗಳೊಂದಿಗೆ ತಮ್ಮ ಆಧಾರ್ ಕಾರ್ಡ್ಗಳ ಫೋಟೊಪ್ರತಿಗಳನ್ನು ಹಂಚಿಕೊಳ್ಳದಂತೆ ತನ್ನ ಕಚೇರಿಯೊಂದು ಶುಕ್ರವಾರ ಸಾರ್ವಜನಿಕರಿಗೆ ನೀಡಿದ್ದ ಸೂಚನೆಯನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರವಿವಾರ ಹಿಂದೆಗೆದುಕೊಂಡಿದೆ. ಭಾರತೀಯ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ (ಯುಐಡಿಎಐ)ದ ಬೆಂಗಳೂರು ವಲಯ ಕಚೇರಿಯು ಆಧಾರ್ ಕಾರ್ಡ್ಗಳ ಫೋಟೊಪ್ರತಿಗಳು ದುರ್ಬಳಕೆಯಾಗಬಹುದು ಎಂಬ ಎಚ್ಚರಿಕೆಯೊಂದಿಗೆ ಪತ್ರಿಕಾ ಹೇಳಿಕೆಯನ್ನು ಶುಕ್ರವಾರ ಹೊರಡಿಸಿತ್ತು.

ಸಾರ್ವಜನಿಕರು ವಿಶಿಷ್ಟ ಗುರುತು ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ತೋರಿಸುವ ಮಾಸ್ಕ್ ಮಾಡಿದ ಆಧಾರ್ ಕಾರ್ಡ್ಗಳನ್ನು ಬಳಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಮಾಸ್ಕ್ ಮಾಡಲಾದ ಆಧಾರ್ ಕಾರ್ಡ್ಗಳನ್ನು ಯುಐಡಿಎಐ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಆದಾಗ್ಯೂ ಪತ್ರಿಕಾ ಹೇಳಿಕೆಯ ತಪ್ಪು ವ್ಯಾಖ್ಯಾನದ ಸಾಧ್ಯತೆಯ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯವು ರವಿವಾರ ತನ್ನ ಸಲಹೆಯನ್ನು ಹಿಂಪಡೆದುಕೊಂಡಿದೆ. ಆಧಾರ್ನ ದುರುಪಯೋಗದ ಕುರಿತು ಖಾಸಗಿತನ ಹಕ್ಕುಗಳ ಕಾರ್ಯಕರ್ತರು ವ್ಯಕ್ತಪಡಿಸಿದ್ದ ಕಳವಳಗಳನ್ನು ಸರಕಾರವು ಪದೇಪದೇ ತಿರಸ್ಕರಿಸಿತ್ತು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಟ್ಟು ಮಾಡಿದ ಬಳಿಕ ಸಚಿವಾಲಯವು ಈ ನಿರ್ಧಾರವನ್ನು ಕೈಗೊಂಡಿದೆ.

ಹೋಟೆಲ್ಗಳು ಮತ್ತು ಚಲನಚಿತ್ರ ಮಂದಿರಗಳಂತಹ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ಗಳ ಪ್ರತಿಗಳನ್ನು ಸಂಗ್ರಹಿಸುವುದು ಆಧಾರ್ ಕಾಯ್ದೆ 2016ರಡಿ ಅಪರಾಧವಾಗುತ್ತದೆ. ತನ್ನಿಂದ ಬಳಕೆದಾರ ಪರವಾನಿಗೆಯನ್ನು ಪಡೆದಿರುವ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತಿನ ಪುರಾವೆಗಾಗಿ ಆಧಾರ್ ಅನ್ನು ಬಳಸಬಹುದು ಎಂದು ಯುಐಡಿಎಐ ಶುಕ್ರವಾರ ಹೇಳಿತ್ತು. ಡಿಜಿಟಲ್ ಆವೃತ್ತಿಯಾದ ಇ-ಆಧಾರ್ಗಾಗಿ ಇಂಟರ್ನೆಟ್ ಕೆಫೆಗಳು ಅಥವಾ ಕಿಯೋಸ್ಕ್ಗಳಲ್ಲಿಯ ಸಾರ್ವಜನಿಕ ಕಂಪ್ಯೂಟರ್ಗಳನ್ನು ಬಳಸದಂತೆಯೂ ಹೇಳಿಕೆಯಲ್ಲಿ ಸಲಹೆ ನೀಡಲಾಗಿತ್ತು.

ಆಧಾರ್ ವಿವರಗಳನ್ನು ಬಳಸುವಾಗ ಮತ್ತು ಹಂಚಿಕೊಳ್ಳುವಾಗ ಸಾಮಾನ್ಯ ವಿವೇಚನೆಯನ್ನು ಬಳಸುವಂತೆ ಮಾತ್ರ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ ಎಂದು ಕೇಂದ್ರವು ರವಿವಾರ ತಿಳಿಸಿದೆ. ಫೋಟೊಶಾಪ್ ಮಾಡಲಾಗಿದ್ದ ಆಧಾರ್ ಕಾರ್ಡ್ನ ದುರುಪಯೋಗ ಪ್ರಯತ್ನದ ಸಂದರ್ಭದಲ್ಲಿ ಶುಕ್ರವಾರದ ಸಲಹೆಯನ್ನು ಹೊರಡಿಸಲಾಗಿತ್ತು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News