"ಸಂಜೆ 7 ಗಂಟೆ ಬಳಿಕ ಮಹಿಳೆಯರನ್ನು ಕೆಲಸ ಮಾಡಿಸುವಂತಿಲ್ಲ": ಉತ್ತರಪ್ರದೇಶ ಸರಕಾರ ಆದೇಶ

Update: 2022-05-29 17:38 GMT

ಲಕ್ನೋ (ಉತ್ತರಪ್ರದೇಶ), ಮೇ 29 : ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷೆಯ ವಾತಾವರಣ ಒದಗಿಸುವ ಸಲುವಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರ, ರಾಜ್ಯಾದ್ಯಂತದ ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ಕೆಲಸ ಮಾಡಿಸುವಂತಿಲ್ಲ ಎಂದು ಶನಿವಾರ ನೀಡಿದ ಆದೇಶದಲ್ಲಿ ತಿಳಿಸಿದೆ.

‘‘ಲಿಖಿತ ಒಪ್ಪಿಗೆಯಿಲ್ಲದೆ ಯಾವುದೇ ಮಹಿಳೆಯನ್ನು ಬೆಳಗ್ಗೆ 6 ಗಂಟೆಗಿಂತ ಮುನ್ನ ಹಾಗೂ ಸಂಜೆ 7 ಗಂಟೆಯ ಬಳಿಕ ಕೆಲಸ ಮಾಡಿಸುವಂತಿಲ್ಲ. ಈ ಸಮಯದಲ್ಲಿ ಮಹಿಳೆಯರನ್ನು ಕೆಲಸ ಮಾಡಿಸುವುದಿದ್ದರೆ, ಉಚಿತ ಸಾಗಾಟ, ಆಹಾರ ಹಾಗೂ ಸಾಕಷ್ಟು ಮೇಲ್ವಿಚಾರಣೆಯನ್ನು ಸಂಸ್ಥೆ ಒದಗಿಸಬೇಕು’’ ಎಂದು ಸರಕಾರದ ಸುತ್ತೋಲೆ ತಿಳಿಸಿದೆ. ಆದೇಶದ ಪ್ರಕಾರ, ಬೆಳಗ್ಗೆ 6 ಗಂಟೆಗೆ ಮುಂಚಿತವಾಗಿ ಹಾಗೂ ಸಂಜೆ 7 ಗಂಟೆ ನಂತರ ಮಹಿಳಾ ಕಾರ್ಮಿಕರು ಕೆಲಸ ಮಾಡಲು ನಿರಾಕರಿಸಿದರೆ, ಅವರನ್ನು ಉದ್ಯೋಗದಿಂದ ವಜಾಗೊಳಿಸುವಂತಿಲ್ಲ.

ಈ ನಿರ್ಧಾರವನ್ನು ಅಧಿಸೂಚಿಸಲು ಉತ್ತರಪ್ರದೇಶದ ಕಾರ್ಮಿಕ ಇಲಾಖೆ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದೆ. ಮಹಿಳಾ ಕಾರ್ಮಿಕರ ಲಿಖಿತ ಹೇಳಿಕೆ ಇಲ್ಲದೆ ಸಂಜೆ 7 ಗಂಟೆ ನಂತರ ನಿಲ್ಲುವಂತೆ ಒತ್ತಾಯಿಸಬಾರದು ಹಾಗೂ ಬೆಳಗ್ಗೆ 6 ಗಂಟೆಯ ಮುನ್ನ ಕೆಲಸ ಮಾಡಲು ಕರೆಯಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ರಾಜ್ಯದ ಎಲ್ಲಾ ಗಿರಣಿಗಳು ಹಾಗೂ ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕರಿಗೆ ಈ ವಿನಾಯಿತಿಯನ್ನು ಸರಕಾರ ಸೂಚಿಸಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಘಟನೆ ತಡೆಯಲು ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣ ಒದಗಿಸುವ ಜವಾಬ್ದಾರಿ ಉದ್ಯೋಗದಾತರದ್ದಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News