ನೂತನ ರಾಜ್ಯಸಭಾ ಪಟ್ಟಿ: ಸಂಸತ್‌ ನಲ್ಲಿ ಇನ್ನುಮುಂದೆ ಬಿಜೆಪಿಯಿಂದ ಯಾವುದೇ ಮುಸ್ಲಿಂ ಸಂಸದನಿಲ್ಲ !

Update: 2022-05-31 09:41 GMT

ಹೊಸದಿಲ್ಲಿ: ಸಂಸತ್ತಿನ ಎರಡೂ ಸದನಗಳಲ್ಲಿ ಬಿಜೆಪಿಗೆ ಒಂದೇ ಒಂದು ಮುಸ್ಲಿಂ ಸದಸ್ಯರು ಸದ್ಯದಲ್ಲಿಯೇ ಇರುವುದಿಲ್ಲ. ಈಗ ಬಿಜೆಪಿಗೆ ಮೂವರು ರಾಜ್ಯಸಭಾ ಸದಸ್ಯರಿದ್ದಾರೆ ಆದರೆ ಲೋಕಸಭೆಯಲ್ಲಿ ಪಕ್ಷದ ಯಾವುದೇ ಮುಸ್ಲಿಂ ಸಂಸದರಿಲ್ಲ.

ಹಾಲಿ ಬಿಜೆಪಿಯ ಮೂವರು ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯ ಹಂತದಲ್ಲಿದ್ದು ಮುಂದಿನ ಚುನಾವಣೆಗೆ ಯಾವುದೇ ಮುಸ್ಲಿಂ ಅಭ್ಯರ್ಥಿಯ ಹೆಸರನ್ನು ಪಕ್ಷ ಸೂಚಿಸಿಲ್ಲ.  ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಸಯ್ಯದ್ ಝಫರ್ ಇಸ್ಲಾಂ ಮತ್ತು ಎಂ ಜೆ ಅಕ್ಬರ್ ಅವರ ಅವಧಿಗಳು  ಮುಕ್ತಾಯಗೊಳ್ಳುತ್ತಿದ್ದರೂ ಪಕ್ಷ ಅವರನ್ನು ಮರುನಾಮಕರಣಗೊಳಿಸಿಲ್ಲ.

ಜೂನ್ 10ರಂದು ನಡೆಯಲಿರುವ ಮೇಲ್ಮನೆಯ ಚುನಾವಣೆಗೆ ಪಕ್ಷ 22 ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ ಆದರೆ ಯಾರೂ ಮುಸ್ಲಿಂ ಅಭ್ಯರ್ಥಿಗಳಲ್ಲ.

ಸದ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿರುವ ನಖ್ವಿ ಅವರು  ಆರು ತಿಂಗಳೊಳಗೆ ಮತ್ತೆ ಸಂಸದರಾಗಿ ಆಯ್ಕೆಯಾಗದೇ ಇದ್ದರೆ ತಮ್ಮ ಕ್ಯಾಬಿನೆಟ್ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ. ಅವರ ಅವಧಿ ಜುಲೈ 7ಕ್ಕೆ ಮುಗಿಯಲಿದ್ದು ಉತ್ತರ ಪ್ರದೇಶದ ರಾಮಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅವರು ಬಿಜೆಪಿ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ.

ಈ ಕ್ಷೇತ್ರದ ಈ ಹಿಂದಿನ ಸಂಸದರಾಗಿದ್ದ ಸಮಾಜವಾದಿ ಪಕ್ಷದ ಆಝಂ ಖಾನ್ ಅವರು ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ ತಮ್ಮ ಸ್ಥಾನ ತೆರವುಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News