ತೈಲ ಬೆಲೆ ಇಳಿಕೆಗೆ ಆಗ್ರಹಿಸಿ ರ‍್ಯಾಲಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

Update: 2022-06-01 17:57 GMT
photo: pti

ಚೆನ್ನೈ, ಜೂ. 1: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿ ಅನುಮತಿ ಇಲ್ಲದ ಚೆನ್ನೈಯಲ್ಲಿರುವ ರಾಜ್ಯ ಸೆಕ್ರೇಟರಿಯೇಟ್ ಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹಾಗೂ 5000ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ವಿರುದ್ಧ ತಮಿಳುನಾಡು ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ಅಣ್ಣಾಮಲೈ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಮಂಗಳವಾರ ರಾಜ್ಯ ಸೆಕ್ರೇಟರಿಯೇಟ್ ನತ್ತ ರ‍್ಯಾಲಿ ನಡೆಸಿದ್ದರು.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ತೆರಿಗೆಯನ್ನು ಕೇಂದ್ರ ಸರಕಾರ ಕಳೆದ ತಿಂಗಳು ಕಡಿತಗೊಳಿಸಿದ ಬಳಿಕ ಬಿಜೆಪಿ, ಹಣದುಬ್ಬರದ ನಡುವೆ ಜನರಿಗೆ ಪರಿಹಾರ ನೀಡಲು ತೈಲ ಬೆಲೆಯ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಆಗ್ರಹಿಸಿತ್ತು.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕಡಿತಗೊಳಿಲಾಗುವುದು ಎಂದು ರಾಜ್ಯ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಕೇಂದ್ರ ಸರಕಾರ ಈಗಾಗಲೇ ತೈಲ ಬೆಲೆಯನ್ನು ಇಳಿಕೆ ಮಾಡಿದೆ. ಈಗ ರಾಜ್ಯ ಸರಕಾರ ತನ್ನ ಭರವಸೆ ಈಡೇರಿಸಬೇಕಿದೆ ಎಂದಿದ್ದರು.

‘‘ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಅನುಕ್ರಮವಾಗಿ ರೂ. 5 ಹಾಗೂ 4 ಇಳಿಕೆ ಮಾಡಲಾಗುವುದು ಎಂದು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಬೆಲೆಯನ್ನು ಎರಡು ಬಾರಿ ಇಳಿಕೆ ಮಾಡಿದ್ದಾರೆ. ರಾಜ್ಯ ಸರಕಾರಗಳು ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ತೈಲ ಬೆಲೆ ಇಳಿಸುವಂತೆ ನಾವು ಆಗ್ರಹಿಸುತ್ತೇವೆ’’ ಎಂದು ಅಣ್ಣಾಮಲೈ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News