ಉತ್ತರಪ್ರದೇಶ: ಕಚೇರಿಯಲ್ಲಿ 'ಉಸಾಮಾ ಬಿನ್ ಲಾಡೆನ್ ಬೆಸ್ಟ್ ಇಂಜಿನಿಯರ್ʼ ಎಂಬ ಫೋಟೊ; ಅಧಿಕಾರಿ ವಜಾ

Update: 2022-06-02 07:03 GMT

ಫರೂಕಾಬಾದ್: ತನ್ನ ಕಚೇರಿಯಲ್ಲಿ ಉಸಾಮಾ ಬಿನ್ ಲಾಡೆನ್  ಫೋಟೊ ಇಟ್ಟುಕೊಂಡಿದ್ದಲ್ಲದೆ, ಆತ "ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್" ಎಂದು ಬಣ್ಣಿಸಿರುವ ಉತ್ತರ ಪ್ರದೇಶದ ಸರಕಾರಿ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿಯೊಬ್ಬರನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣಾಂಚಲ್ ವಿದ್ಯುತ್ ವಿತ್ರನ್ ನಿಗಮ್ ಲಿಮಿಟೆಡ್ (ಡಿವಿವಿಎನ್ ಎಲ್) ನ ಉಪವಿಭಾಗಾಧಿಕಾರಿ (ಎಸ್ ಡಿಒO) ರವೀಂದ್ರ ಪ್ರಕಾಶ್ ಗೌತಮ್ ಅವರು ಬಿನ್ ಲಾಡೆನ್  ಫೋಟೋವನ್ನು ತನ್ನ ಕಚೇರಿಯಲ್ಲಿ ಇಟ್ಟುಕೊಂಡಿದ್ದಲ್ಲದೆ, ಫೋಟೊದ  ಕೆಳಗೆ "ಗೌರವಾನ್ವಿತ ಉಸಾಮಾ ಬಿನ್ ಲಾಡೆನ್ ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್" ಎಂದು ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಫೋಟೋ ಹಾಗೂ  ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ  ಹಿರಿಯ ಜಿಲ್ಲಾ ಅಧಿಕಾರಿಗಳು ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ. ಉಸಾಮಾ ಬಿನ್ ಲಾಡೆನ್ ಫೋಟೋವನ್ನು ಸಹ ತೆಗೆದುಹಾಕಲಾಗಿದೆ.

"ಘಟನೆಯ ತನಿಖೆಯ ನಂತರ ಡಿವಿವಿಎನ್ಎಲ್ನ ವ್ಯವಸ್ಥಾಪಕ ನಿರ್ದೇಶಕರು,  ಎಸ್ಡಿಒ ರವೀಂದ್ರ ಪ್ರಕಾಶ್ ಗೌತಮ್ ಅವರನ್ನು ಅಮಾನತುಗೊಳಿಸಿದ್ದಾರೆ" ಎಂದು ಫರೂಕಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

"ಉಸಾಮಾ ಅವರು ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್ ಆಗಿದ್ದರು ಎನ್ನುವುದು ಸತ್ಯ. ಅವರ ಚಿತ್ರವನ್ನು ತೆಗೆದುಹಾಕಲಾಗಿದೆ.  ಆದರೆ ನನ್ನ ಬಳಿ ಹಲವಾರು ಪ್ರತಿಗಳಿವೆ’’ ಎಂದು  ಅಮಾನತುಗೊಂಡ ಅಧಿಕಾರಿ ಗೌತಮ್ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News