ವಿಷಯುಕ್ತ ನೊರೆಯಿಂದ ಮಲಿನವಾದ ಯಮುನೆ, ದಿಲ್ಲಿಗೆ ಕಾಡಲಿದೆ ಕುಡಿಯುವ ನೀರಿನ ಸಮಸ್ಯೆ: ಪರಿಸರ ತಜ್ಞರ ಎಚ್ಚರಿಕೆ

Update: 2022-06-02 18:25 GMT

ಹೊಸದಿಲ್ಲಿ, ಜೂ.2: ರಾಜಧಾನಿ ಹೊಸದಿಲ್ಲಿಯ ಆದಾಯ ತೆರಿಗೆ ಕಾರ್ಯಾಲಯವಿರುವ ಪ್ರದೇಶದಲ್ಲಿ ಹರಿಯುವ ಯಮುನಾ ನದಿಯ ಮೇಲ್ಮೈಯಲ್ಲಿ ಬಿಳಿಬಿಳಿಯಾದ ನೊರೆಹರಿಯುತ್ತಿರುವುದು ಜಲ ಮಾಲಿನ್ಯದ ತೀವ್ರತೆಗೆ ಸಾಕ್ಷಿಯಾಗಿದೆ.

ಕಳೆದ ವರ್ಷ ನವೆಂಬರ್ನಲ್ಲಿ ಚತ್ ಪೂಜಾ ಆಚರಣೆಯ ಸಂದರ್ಭದಲ್ಲಿ ಯಮುನಾ ನದಿಯಲ್ಲಿ ಭಕ್ತಾದಿಗಳು ವಿಷಕಾರಿಯಾದ ನೊರೆಯಿಂದ ತುಂಬಿದ ಯಮುನಾ ನದಿಯಲ್ಲಿ ಪೂಜಾ ವಿಧಿಗಳನ್ನು ನೆರವೇರಿಸುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಈ ಜಲಮಾಲಿನ್ಯವು ದೇಶದ ಗಮನವನ್ನು ಸೆಳೆದಿತ್ತು.

ಯಮುನಾ ನದಿಯ ಎರಡೂ ದಂಡೆಗಳವರೆಗೆ ನೊರೆ ವ್ಯಾಪಿಸಿದ್ದು, ಪರಿಸರ ವಿಜ್ಞಾನಿಗಳಲ್ಲಿ ಆತಂಕವನ್ನು ಮೂಡಿಸಿದೆ. ರಾಜಧಾನಿ ಸಮೀಪ ಹರಿಯುವ ಯಮುನಾ ನದಿಗೆ ಮಾರ್ಜಕ ರಾಸಾಯನಿಕಗಳು (ಡಿಟರ್ಜೆಂಟ್) ಸೇರಿದಂತೆ ಕೈಗಾರಿಕಾ ತ್ಯಾಜ್ಯಗಳನ್ನು ಅಗಾಧ ಪ್ರಮಾಣದಲ್ಲಿ ವಿಸರ್ಜಿಸುತ್ತಿರುವುದರಿಂ ದ ನೀರಿನಲ್ಲಿ ಅಮೋನಿಯಾ ಹಾಗೂ ಫಾಸ್ಫೇಟ್ ಅಂಶಗಳು ಅಧಿಕ ಪ್ರಮಾಣದ ಸೇರಿದ್ದರಿಂದಾಗಿ ಈ ವಿಷಕಾರಿಯಾದ ನೊರೆಯು ಉಂಟಾಗಿದೆಯೆಂದು ವರದಿ ಹೇಳಿದೆ.
 
ಕಳೆದ ವರ್ಷ ದಿಲ್ಲಿ ಸರಕಾರವು ಛತ್ಪೂಜೆಗೆ ಪೂರ್ವಭಾವಿಯಾಗಿ ವಿಷಕಾರಿಯಾದ ನೊರೆಯನ್ನು ಸ್ವಚ್ಛಗೊಳಿಸಲು 15 ದೋಣಿಗಳನ್ನು ನಿಯೋಜಿಸಿತ್ತು.

ಯಮುನಾ ನದಿಯ ಮಾಲಿನ್ಯವು ಹಲವಾರು ವರ್ಷಗಳಿಂದ ಪರಿಸರವಾದಿಗಳ ಕಳವಳಕ್ಕೆ ಕಾರಣವಾಗಿದೆ. ಯಮುನಾ ನದಿಯು ಹೆಚ್ಚು ಕಮ್ಮಿ ಬತ್ತಿ ಹೋಗಿದ್ದು, ಇದರಿಂದಾಗಿ ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆಯೆಂದು ದಿಲ್ಲಿಯ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News