ಸಾಮಾಜಿಕ ಜಾಲತಾಣ ಕಂಪನಿಗಳ ಮೇಲೆ ಪೂರ್ಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಚಿಂತನೆ

Update: 2022-06-03 01:54 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಅಗ್ರಗಣ್ಯ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್‍ಬುಕ್, ಗೂಗಲ್ ಮತ್ತು ಇನ್‍ಸ್ಟಾಗ್ರಾಂ ಮತ್ತಿತರ ಕಂಪನಿಗಳು ಬಳಕೆದಾರರ ವಿರುದ್ಧ ವಿವಿಧ ನಿಮಯಗಳ ಉಲ್ಲಂಘನೆಗಾಗಿ ತೆಗೆದುಕೊಳ್ಳುವ ಕ್ರಮಗಳ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ತನ್ನ ಕೈಯಲ್ಲಿ ಉಳಿಸಿಕೊಳ್ಳುವ ಚಿಂತನೆಯನ್ನು ಕೇಂದ್ರ ಸರ್ಕಾರ ನಡೆಸಿದೆ.

ವಿವಿಧ ನಿಮಯಗಳ ಉಲ್ಲಂಘನೆಗಾಗಿ ಖಾತೆಯನ್ನು ಅಮಾನತು ಮಾಡುವುದು, ಬ್ಲಾಕ್ ಮಾಡುವುದು ಅಥವಾ ಖಾತೆಯನ್ನು ಕಿತ್ತುಹಾಕುವ ವಿಚಾರದಲ್ಲಿ ಜಾಲತಾಣ ಕಂಪನಿಗಳು ಕೈಗೊಂಡ ನಿರ್ಧಾರವನ್ನು ಅನೂರ್ಜಿತಗೊಳಿಸುವ ಅಸ್ತ್ರವನ್ನು ಹೊಂದಲು ಕೇಂದ್ರ ಸರ್ಕಾರ ಬಯಸಿದೆ.

ಇದಕ್ಕಾಗಿ ಕಳೆದ ವರ್ಷ ಜಾರಿಗೆ ತಂದಿರುವ ವಿವಾದಾತ್ಮಕ ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಾವಳಿ-2021ಕ್ಕೆ ತಿದ್ದುಪಡಿ ತರುವ ಸಂಬಂಧ ಕರಡು ಪ್ರಸ್ತಾವನೆ ಸಿದ್ಧಪಡಿಸಿದೆ.

ಈ ಪ್ರಸ್ತಾವನೆಯ ಪ್ರಕಾರ ಕೇಂದ್ರ ಸರ್ಕಾರಕ್ಕೆ ಅತ್ಯುನ್ನತ ಅಧಿಕಾರ ಹೊಂದಿರುವ ವ್ಯಾಜ್ಯ ಪರಿಹಾರ ಮೇಲ್ಮನವಿ ಸಮಿತಿ (ಜಿಎಸಿ) ನೇಮಕ ಮಾಡುವ ಮೂಲಕ ಎಲ್ಲ ಅಧಿಕಾರವನ್ನು ತನ್ನ ಕೈಗೆ ಸರ್ಕಾರ ತೆಗೆದುಕೊಳ್ಳಲಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯದ ವೆಬ್‍ಸೈಟ್‍ನಿಂದ ಇದೀಗ ಕರಡು ಕಿತ್ತುಹಾಕಲಾಗಿದೆ.

ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಸಂಪರ್ಕಿಸಿದಾಗ, ಇದನ್ನು ಕಿತ್ತುಹಾಕಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಶೀಘ್ರವೇ ಮತ್ತೆ ಬರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ವಿವರಗಳನ್ನು ಹಂಚಿಕೊಳ್ಳಲು ಉನ್ನತಾಧಿಕಾರಿ ನಿರಾಕರಿಸಿದ್ದಾರೆ.

ಈ ಕರಡು ಪ್ರಕಾರ, ಕಾನೂನುಬಾಹಿರ ಮತ್ತು ಪ್ರಚೋದನಾತ್ಮಕ ವಿಷಯಗಳನ್ನು ನಿರ್ವಹಿಸುವ ವಿಚಾರದಲ್ಲಿ ಜಾಲತಾಣ ಕಂಪನಿಗಳಿಗೆ ಹೆಚ್ಚಿನ ಹೊರೆ ಬೀಳಲಿದೆ. ಕಂಪನಿಗಳು ನಿಯಮಾವಳಿ ಮತ್ತು ನಿಬಂಧನೆಗಳು, ಖಾಸಗಿ ನೀತಿ ಮತ್ತು ಬಳಕೆದಾರರ ಒಪ್ಪಂದ ಮತ್ತಿತರ ವಿಷಯಗಳಿಗಾಗಿ ಕಾವಲು ವ್ಯವಸ್ಥೆಯನ್ನು ಆರಂಭಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News