ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತ ವಯಸ್ಕ ನಾಲ್ಕನೇ ಆರೋಪಿ ಪೊಲೀಸ್ ವಶಕ್ಕೆ

Update: 2022-06-05 14:14 GMT
PHOTO: PTI

ಹೈದರಾಬಾದ್,ಜೂ.5: ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕನಾಗಿರುವ ನಾಲ್ಕನೇ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಐದನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಇಬ್ಬರು ಹದಿಹರೆಯದ ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ಪೈಕಿ ಓರ್ವ ಟಿಆರ್‌ಎಸ್‌ನ ಸ್ಥಳೀಯ ನಾಯಕನ ಪುತ್ರನಾಗಿದ್ದಾನೆ. ಶುಕ್ರವಾರ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಮೇ 28ರಂದು ಸಂಜೆ 17ರ ಹರೆಯದ ಬಾಲಕಿ ಸ್ನೇಹಿತನೊಂದಿಗೆ ಪಬ್ ಗೆ ತೆರಳಿದ್ದು,ಆತ ಬೇಗನೆ ಅಲ್ಲಿಂದ ನಿರ್ಗಮಿಸಿದ್ದ. ಅಲ್ಲಿದ್ದ ಪ್ರಭಾವಿ ಕುಟುಂಬಗಳಿಗೆ ಸೇರಿದ ಆರೋಪಿಗಳ ಪೈಕಿ ಓರ್ವ ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಮನೆಗೆ ಬಿಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರಿಂದ ಬಾಲಕಿ ಅವರ ಮರ್ಸಿಡಿಸ್ ಕಾರಿನಲ್ಲಿ ತೆರಳಿದ್ದಳು.

ಪಬ್‌ನಿಂದ ಪೇಸ್ಟ್ರಿ ಅಂಗಡಿಯೊಂದಕ್ಕೆ ತೆರಳಿದ್ದ ಆರೋಪಿಗಳು ಮರ್ಸಿಡಿಸ್ ಅನ್ನು ಅಲ್ಲಿಯೇ ಬಿಟ್ಟು ಬಾಲಕಿಯೊಂದಿಗೆ ಇನೋವಾ ಕಾರನ್ನು ಹತ್ತಿದ್ದರು. ಬಳಿಕ ಕಾರನ್ನು ಜ್ಯುಬಿಲಿ ಹಿಲ್ಸ್‌ನಲ್ಲಿ ನಿಲ್ಲಿಸಿ ಒಬ್ಬರಾದ ನಂತರ ಒಬ್ಬರಂತೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದರೆ ಉಳಿದವರು ಕಾರಿನ ಹೊರಗೆ ಕಾವಲು ಕಾಯುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣವೀಗ ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ. ನಿಷ್ಪಕ್ಷ ತನಿಖೆಯನ್ನು ಖಚಿತಪಡಿಸಲು ಕೆ.ಚಂದ್ರಶೇಖರ ರಾವ್ ನೇತೃತ್ವದ ಸರಕಾರವು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಆಗ್ರಹಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸುವಂತೆ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರು ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News