ಉಪ್ಪಿನಂಗಡಿ; ಮತಾಂತರ ಆರೋಪಿಸಿ ಹಿಂದುತ್ವ ಸಂಘಟನೆಯಿಂದ ದೂರು
ಉಪ್ಪಿನಂಗಡಿ: ನೆಲ್ಯಾಡಿಯ ಕೋಣಾಲು ಆರ್ಲ ಎಂಬಲ್ಲಿರುವ ಧ್ಯಾನ ಕೇಂದ್ರದಲ್ಲಿ ಶಿವಮೊಗ್ಗ ಮೂಲದ 27 ಮಂದಿಯನ್ನು ಮತಾಂತರಗೊಳಿಸಲು ಕರೆಯಿಸಿ ಇರಿಸಲಾಗಿದೆ ಎಂದು ಹಿಂದುತ್ವ ಸಂಘಟನೆಯ ದೂರಿನ ಅನ್ವಯ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆಗೆ ಒಳಪಡಿಸಿದ ಘಟನೆ ಶನಿವಾರ ತಡ ರಾತ್ರಿ ನಡೆದಿದೆ.
ಈ ಕೇಂದ್ರದಲ್ಲಿ 18 ಮಂದಿ ಮಹಿಳೆಯರು, 8 ಪುರುಷರು, 6 ವರ್ಷದ ಬಾಲಕ ಸೇರಿದಂತೆ ಒಟ್ಟು 27 ಜನರಿದ್ದರು. ಅವರನ್ನೆಲ್ಲಾ ವಿಚಾರಿಸಿದಾಗ, ತಾವು ಶಿವಮೊಗ್ಗ ಜಿಲ್ಲೆಯವರೆಂದೂ, ತಮ್ಮಲ್ಲಿ ಮದ್ಯ ವ್ಯಸನಿಗಳೂ, ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಸೇರಿದಂತೆ ಅನಾರೋಗ್ಯ ಪೀಡಿತರಿದ್ದು, ಇಲ್ಲಿನ ಕೇಂದ್ರದಲ್ಲಿ ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಿಸುವುದೆಂದು ಯೂ ಟ್ಯೂಬ್‍ನಲ್ಲಿ ವಿಚಾರ ತಿಳಿದು ಇಲ್ಲಿಗೆ ನಮ್ಮ ಸ್ವಂತ ಖರ್ಚಿನಲ್ಲಿ ಬಂದಿರುವುದಾಗಿ ತಿಳಿಸಿದ್ದಾರಲ್ಲದೆ, ನಾವು ಯಾರೂ ಮತಾಂತರಕ್ಕೆ ಬಂದವರಲ್ಲ. ನಮ್ಮ ಕಷ್ಟಗಳ ಪರಿಹಾರಕ್ಕಾಗಿ ನಂಬಿಕೆಯಿಂದ ನಮ್ಮ ಸ್ವಂತ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.