ಸಂಕುಚಿತ ಮನಸ್ಸು: ಪ್ರವಾದಿ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿ ಇಸ್ಲಾಮಿಕ್‌ ರಾಷ್ಟ್ರಗಳ ಗುಂಪಿಗೆ ಪ್ರತಿಕ್ರಿಯಿಸಿದ ಭಾರತ

Update: 2022-06-06 15:14 GMT
Photo: ANI

ಹೊಸದಿಲ್ಲಿ,ಜೂ.6: ಸುದ್ದಿವಾಹಿನಿಗಳಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ನಾಯಕರ ಅವಮಾನಕಾರಿ ಹೇಳಿಕೆಗಳು ಗಲ್ಫ್ ರಾಷ್ಟ್ರಗಳಲ್ಲಿ ಸೃಷ್ಟಿಸಿರುವ ಆಕ್ರೋಶದ ನಡುವೆಯೇ ಈ ಕುರಿತು ಇಸ್ಲಾಮಿಕ್ ಸಹಕಾರ ಸಂಘಟನೆ (ಐಒಸಿ)ಯ ಹೇಳಿಕೆಗಳನ್ನು ತಿರಸ್ಕರಿಸಿರುವ ಭಾರತವು,ಇವು ಅನಗತ್ಯ ಮತ್ತು ಸಂಕುಚಿತ ಮನಸ್ಸಿನ ಟೀಕೆಗಳಾಗಿವೆ ಎಂದು ಬಣ್ಣಿಸಿದೆ.

ಪ್ರವಾದಿಯವರ ಕುರಿತು ಅವಹೇಳನಕಾರಿ ಹೇಳಿಕೆಗಳಿಗಾಗಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ ಶರ್ಮಾರನ್ನು ಈಗಾಗಲೇ ಅಮಾನತುಗೊಳಿಸಿರುವ ಬಿಜೆಪಿಯು,ಪಕ್ಷದ ದಿಲ್ಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ ಕುಮಾರ ಜಿಂದಾಲ್ ಅವರನ್ನು ಉಚ್ಚಾಟಿಸಿದೆ.
ಸೌದಿ ಅರೇಬಿಯದ ಜೆದ್ದಾದಲ್ಲಿ ಕಚೇರಿಯನ್ನು ಹೊಂದಿರುವ ಐಒಸಿ, ಪ್ರವಾದಿ ಮುಹಮ್ಮದ್ರ ಕುರಿತು ಶರ್ಮಾ ಮತ್ತು ಜಿಂದಾಲ್ರ ಹೇಳಿಕೆಗಳನ್ನು ಖಂಡಿಸಿತ್ತು. ಭಾರತದಲ್ಲಿ ಇಸ್ಲಾಮ್ ವಿರುದ್ಧ ದ್ವೇಷ ಮತ್ತು ನಿಂದನೆಗಳು ಹಾಗೂ ಮುಸ್ಲಿಮರ ವಿರುದ್ಧ ವ್ಯವಸ್ಥಿತ ಕಾರ್ಯತಂತ್ರಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆಗಳು ಹೊರಬಿದ್ದಿವೆ ಎಂದು ಐಒಸಿ ಹೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು,ಒಐಸಿ ಸಚಿವಾಲಯದ ಅನಗತ್ಯ ಮತ್ತು ಸಂಕುಚಿತ ಮನಸ್ಸಿನ ಟೀಕೆಗಳನ್ನು ಭಾರತವು ಸ್ಪಷ್ಟವಾಗಿ ತಿರಸ್ಕರಿಸುತ್ತದೆ. ಭಾರತ ಸರಕಾರವು ಎಲ್ಲ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ ಎಂದು ಹೇಳಿದರು.

ಒಐಸಿ ಮುಸ್ಲಿಮ್ ಪ್ರಾಬಲ್ಯದ ದೇಶಗಳ ಅಂತರ್ಸರಕಾರಿ ಸಂಘಟನೆಯಾಗಿದ್ದು,ಅದರ ಸದಸ್ಯ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಸೇರಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಂತಹ ದೇಶದ ಆಂತರಿಕ ವಿಷಯಗಳ ಬಗ್ಗೆ ಟೀಕೆಗಳಿಗಾಗಿ ಒಐಸಿಯನ್ನು ಭಾರತವು ಆಗಾಗ್ಗೆ ಖಂಡಿಸುತ್ತಲೇ ಬಂದಿದೆ. ಒಐಸಿ ತನ್ನನ್ನು ‘ಮುಸ್ಲಿಮ್ ಜಗತ್ತಿನ ಸಾಮೂಹಿಕ ಧ್ವನಿ’ಎಂದು ಹೇಳಿಕೊಳ್ಳುತ್ತದೆ.

ಕೆಲವು ವ್ಯಕ್ತಿಗಳು ಧಾರ್ಮಿಕ ವ್ಯಕ್ತಿಯನ್ನು ಅವಮಾನಿಸುವ ಆಕ್ಷೇಪಾರ್ಹ ಟ್ವೀಟ್‌ಗಳು ಮತ್ತು ಹೇಳಿಕೆಗಳನ್ನು ನೀಡಿದ್ದಾರೆ. ಯಾವುದೇ ರೀತಿಯಲ್ಲಿಯೂ ಅವರು ಭಾರತ ಸರಕಾರದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಸಂಬಂಧಿಸಿದ ಸಂಸ್ಥೆಗಳು ಈಗಾಗಲೇ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿವೆ ಎಂದು ಬಾಗ್ಚಿ ಹೇಳಿದರು.

‘ಒಐಸಿ ಮತ್ತೊಮ್ಮೆ ಪ್ರೇರೇಪಿತ,ದಾರಿ ತಪ್ಪಿಸುವ ಮತ್ತು ಕುಚೇಷ್ಟೆಯ ಹೇಳಿಕೆಗಳನ್ನು ನೀಡಿರುವುದು ವಿಷಾದನೀಯವಾಗಿದೆ. ಇದು ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಸೆಯ ಮೇರೆಗೆ ಅದು ಅನುಸರಿಸುತ್ತಿರುವ ವಿಭಜಕ ಕಾರ್ಯಸೂಚಿಯನ್ನು ಬಹಿರಂಗಗೊಳಿಸಿದೆ. ಒಐಸಿ ತನ್ನ ಕೋಮುವಾದಿ ಧೋರಣೆಯನ್ನು ಅನುಸರಿಸುವುದನ್ನು ನಿಲ್ಲಿಸಬೇಕು ಹಾಗೂ ಎಲ್ಲ ನಂಬಿಕೆಗಳು ಮತ್ತು ಧರ್ಮಗಳನ್ನು ಗೌರವಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ’ ಎಂದೂ ಬಾಗ್ಚಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News