ಉತ್ತರಪ್ರದೇಶ: ಬಿಕ್ಷೆ ಬೇಡುತ್ತಿದ್ದ ಫಕೀರರನ್ನು ʼಉಗ್ರರು, ಜಿಹಾದಿಗಳುʼ ಎಂದು ನಿಂದಿಸಿ ಕಿರುಕುಳ ನೀಡಿದ ಸ್ಥಳೀಯರು

Update: 2022-06-09 10:20 GMT

ಗೊಂಡಾ: ಭಿಕ್ಷಾಟನೆ ನಡೆಸುತ್ತಿದ್ದ ಮೂವರು ಮುಸ್ಲಿಂ ಫಕೀರರನ್ನು ಸ್ಥಳೀಯ ಜನರು ನಿಂದಿಸಿ ಅವರಿಗೆ ಕಿರುಕುಳ ನೀಡಿದ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಘಟನೆ ಉತ್ತರ ಪ್ರದೇಶದ ಗೊಂಡಾ ಪ್ರಾಂತ್ಯದ ದೇಗೂರ್ ಎಂಬ ಗ್ರಾಮದಲ್ಲಿ ನಡೆದಿದೆಯೆನ್ನಲಾಗಿದೆ. ಆರೋಪಿಗಳಲ್ಲೊಬ್ಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೂವರು ಫಕೀರರನ್ನು ಹುಡುಗರು ಓಡಿಸುತ್ತಿರುವುದು, ಧರ್ಮಕ್ಕೆ ಸಂಬಂಧಿಸಿದಂತೆ ಅವರನ್ನು ನಿಂದಿಸುತ್ತಿರುವುದು ಹಾಗೂ ಅವರಿಗೆ ಹೊಡೆಯಿರಿ ಎಂದು ಬೊಬ್ಬಿಡುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

"ಅವರು ಸಾಧುಗಳ ಬಟ್ಟೆ ಹಾಕಿದ್ದರೂ ಭಿಕ್ಷೆ ಬೇಡಿ ದೊರೆತ ಹಣದಿಂದ ಬಿರಿಯಾನಿ ತಿನ್ನುತ್ತಾರೆ" ಎಂದು ಹೇಳುತ್ತಿರುವುದೂ ಕೇಳಿಸುತ್ತದೆ. ಕೈಯ್ಯಲ್ಲಿ ಕೋಲು ಹಿಡಿದುಕೊಂಡ ಯುವಕನೊಬ್ಬ ಆ ವ್ಯಕ್ತಿಗಳ ಗುರುತು ಪತ್ರಗಳನ್ನೂ ಕೇಳುತ್ತಾನೆ. ತಮ್ಮ ಬಳಿ ಇಲ್ಲವೆಂದು ಅವರು ಹೇಳಿದಾಗ ಅವರನ್ನು ʼಜಿಹಾದಿಗಳು, ಉಗ್ರರು' ಎಂದು ಹೀಗಳೆಯುವುದು ವೀಡಿಯೊದಲ್ಲಿ ಸೆರೆಯಾಗಿದೆ.

"ನಿಮ್ಮ ಬಳಿಯೇಕೆ ಆಧಾರ್ ಇಲ್ಲ ನೀವೆಲ್ಲರೂ ಉಗ್ರರು" ಎಂದೂ ಹೇಳುತ್ತಿರುವುದು ಕೇಳಿಸುತ್ತದೆ. ಒಬ್ಬ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೂ ಆತನನ್ನು ಅಲ್ಲಿದ್ದವರು ದೂಡುತ್ತಿದ್ದುದು ಕಂಡುಬಂದಿದೆ. ಈ ವೀಡಿಯೋ ಕುರಿತು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News