ಪದವಿ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ: ಕಾಲೇಜು ಶಿಕ್ಷಣ ಇಲಾಖೆಯಿಂದ ಯಾವುದೇ ಆದೇಶ ಇಲ್ಲ

Update: 2022-06-10 02:48 GMT

ಬೆಂಗಳೂರು, ಜೂ.9: ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಸರಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆಯ ಬಗ್ಗೆ ಇಲಾಖೆಯಿಂದ ಯಾವುದೇ ಆದೇಶ ಹಾಗೂ ಸುತ್ತೋಲೆ ಹೊರಡಿಸಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಆರ್‌ಟಿಐನಲ್ಲಿ ಮಾಹಿತಿ ಒದಗಿಸಿದ್ದಾರೆ.

 ಉಡುಪಿಯ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ 2022ರ ಫೆಬ್ರುವರಿಯಲ್ಲಿ ತರಗತಿ ಪ್ರವೇಶ ನಿರ್ಬಂಧಿಸಲಾಗಿದ್ದರ ಬೆನ್ನಲ್ಲೇ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಕುರಿತು ಕಾಲೇಜು ಶಿಕ್ಷಣ ಇಲಾಖೆಯು ಒದಗಿಸಿರುವ ಮಾಹಿತಿಯು ಮುನ್ನೆಲೆಗೆ ಬಂದಿದೆ.

 ಬಂಗಾರಪೇಟೆಯ ಎಸ್.ಇಕ್ಬಾಲ್ ಅಹ್ಮದ್ ಎಂಬವರು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಿರುವ ಬಗ್ಗೆ ಮಾಹಿತಿ ದಾಖಲೆಗಳನ್ನು ಕೋರಿ 2022ರ ಎಪ್ರಿಲ್ 17ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕರು 2022ರ ಮೇ 11ರಂದು ಉತ್ತರಿಸಿದ್ದಾರೆ. ಇದರ ಪ್ರತಿಯು ‘The-file.in'ಗೆ ಲಭ್ಯವಾಗಿದೆ.

‘ಇಲಾಖಾ ವ್ಯಾಪ್ತಿಗೊಳಪಡುವ ಸರಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆಯ ಬಗ್ಗೆ ಇಲಾಖೆಯಿಂದ ಯಾವುದೇ ಆದೇಶ ಮತ್ತು ಸುತ್ತೋಲೆ ಹೊರಡಿಸಿರುವುದಿಲ್ಲ’ ಎಂಬ ಮಾಹಿತಿ ಒದಗಿಸಿದ್ದಾರೆ.

‘ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಯಾವುದೇ ರೀತಿಯ ವಸ್ತ್ರವನ್ನು ಮುಕ್ತವಾಗಿ ಧರಿಸಬಹುದು’ ಎಂದು ಹೇಳಿಕೆ ನೀಡಿದ್ದ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಆ ನಂತರ ರಾಗ ಬದಲಾಯಿಸಿದ್ದರು. ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಅವರು, ‘ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸಿರುವ ವಸ್ತ್ರಸಂಹಿತೆ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶ ಸ್ಪಷ್ಟವಾಗಿದೆ. ಇದೇ ಆದೇಶ ಸರಕಾರಿ ಮತ್ತು ಖಾಸಗಿ ಪಿಯುಸಿ, ಡಿಗ್ರಿ ಕಾಲೇಜುಗಳಿಗೂ ಅನ್ವಯವಾಗಲಿದೆ’ ಎಂದು ಹೇಳಿದ್ದನ್ನು ಸ್ಮರಿಸಬಹುದು.

ಪದವಿ ಪೂರ್ವ, ಪದವಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಮಂಡಳಿ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ವಸ್ತ್ರ ಸಂಹಿತೆ ಅಳವಡಿಸಿಕೊಳ್ಳದ ಕಾಲೇಜುಗಳ ವಿದ್ಯಾರ್ಥಿಗಳು ಈ ಹಿಂದಿನ ನಿಯಮಾನುಸಾರ ತರಗತಿಗಳಿಗೆ ಹಾಜರಾಗಬೇಕು. ನ್ಯಾಯಾಲಯದ ಮಧ್ಯಂತರ ತೀರ್ಪನ್ನು ಕಡ್ಡಾಯವಾಗಿ ಪಾಲಿಸಿ ಮುನ್ನಡೆಯೋಣ ಎಂದಿದ್ದರು.

ಸಚಿವ ಅಶ್ವತ್ಥನಾರಾಯಣ ಅವರು ದಿಢೀರ್ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದರಿಂದಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಬುಧವಾರ ತೀವ್ರ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿನ ನಾಲ್ಕು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ 49 ವಿದ್ಯಾರ್ಥಿನಿಯರಿಗೆ ಕಾಲೇಜ್ ಪ್ರವೇಶ ನಿರಾಕರಿಸಿದ್ದರಿಂದ ಅವರು ಮನೆಗೆ ವಾಪಸ್ ಹೋಗಿದ್ದರು.

ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ್ದರಿಂದ ದಯಾನಂದ ಪೈ ಡಿಗ್ರಿ ಕಾಲೇಜು, ಪೊಂಪೈ ಡಿಗ್ರಿ ಕಾಲೇಜು, ಇಂದಿರಾ ನಗರ ಡಿಗ್ರಿ ಕಾಲೇಜು ಮತ್ತು ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಮನೆಗೆ ತೆರಳಿದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ. ಮುಡಿಪು ಡಿಗ್ರಿ ಕಾಲೇಜ್ ಮತ್ತು ಮೊಂಟೆಪದವು ಕಾಲೇಜಿನ 33 ವಿದ್ಯಾರ್ಥಿಗಳು ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾಗಿದ್ದರು.

Writer - ಜಿ. ಮಹಾಂತೇಶ್

contributor

Editor - ಜಿ. ಮಹಾಂತೇಶ್

contributor

Similar News