ಪ್ರವಾದಿ ನಿಂದನೆ: ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ದಿಲ್ಲಿ, ಉತ್ತರ ಪ್ರದೇಶದಲ್ಲಿ ಪ್ರತಿಭಟನೆ

Update: 2022-06-10 10:51 GMT

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಬಿಜೆಪಿಯ ನೂಪುರ್ ಶರ್ಮ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಇಂದು ಶುಕ್ರವಾರದ ನಮಾಝ್ ನಂತರ ದೇಶದ ಅತ್ಯಂತ ದೊಡ್ಡ ಮಸೀದಿಗಳಲ್ಲೊಂದಾದ ರಾಜಧಾನಿಯ ಜಾಮಾ ಮಸೀದಿಯ ಹೊರಗಡೆ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಸುಮಾರು ಒಂದು ತಾಸಿನ ಪ್ರತಿಭಟನೆ ನಂತರ ಪ್ರತಿಭಟನಾಕಾರರು ಅಲ್ಲಿಂದ ವಾಪಸಾಗಿದ್ದಾರೆ.

ಈ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಜಮಾ ಮಸೀದಿಯ ಶಾಹಿ ಇಮಾಮ್ ಅವರು ಮಸೀದಿಯ ಆಡಳಿತವು ಪ್ರತಿಭಟನೆಗೆ ಕರೆ ನೀಡಿರಲಿಲ್ಲ ಎಂದಿದ್ದಾರೆ. "ಯಾರು ಪ್ರತಿಭಟನೆ ಆರಂಭಿಸಿದರೆಂದು ತಿಳಿದಿಲ್ಲ. ಶುಕ್ರವಾರದ ಪ್ರಾರ್ಥನೆಯ ನಂತರ ಕೆಲವು ಮಂದಿ ಘೋಷಣೆಗಳನ್ನು ಕೂಗಿದರು, ಆಗ ದೊಡ್ಡ  ಗುಂಪು ಅಲ್ಲಿ ಜಮಾವಣೆಗೊಂಡಿತು. ನಂತರ ಅವರು ಅಲ್ಲಿಂದ ತೆರಳಿದರು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ,'' ಎಂದು ಅವರು ಹೇಳಿದರು.

ನೂಪುರ್ ಶರ್ಮ ಮತ್ತು ನವೀನ್ ಕುಮಾರ್ ಜಿಂದಾಲ್ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಯಿತು. ಜನರನ್ನು ಚದುರಿಸಲಾಗಿದೆ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಸಹರಾಣಪುರ್, ಮೊರಾದಾಬಾದ್ ಮತ್ತು ಪ್ರಯಾಗರಾಜದಲ್ಲೂ ನೂರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರಲ್ಲದೆ ವಾಣಿಜ್ಯ ಮಳಿಗೆಗಳೂ ಮುಚ್ಚಿದ್ದವು.

ಉಳಿದಂತೆ ಲಕ್ನೋ, ಫಿರೋಝಾಬಾದ್ ಮತ್ತು ಕಾನ್ಪುರ್‍ನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News