ಮಕ್ಕಳಿಗೆ ಏನನ್ನು ಬೋಧಿಸಬೇಕೆಂಬ ಅರಿವಿರಲಿ

Update: 2022-06-12 03:30 GMT

 ಭವಿಷ್ಯದ ಪ್ರಜೆಗಳೆಂದೇ ಪರಿಭಾವಿಸಲಾಗುವ ಎಳೆಯ ಮಕ್ಕಳಿಗೆ ನಾವು ಮಾಡುವ ಬೋಧನೆಗಳು ಆ ಮಕ್ಕಳ ಬದುಕನ್ನಷ್ಟೇ ರೂಪಿಸುವುದಿಲ್ಲ, ಹಲವು ಪೀಳಿಗೆಗಳ ಸಮಾಜವನ್ನು ರೂಪಿಸುವ ಅಡಿಗಲ್ಲುಗಳಾಗುತ್ತವೆ. ಭಾರತೀಯ ಸಮಾಜ ನಡೆದುಬಂದ ಹಾದಿ, ನಡೆಯುತ್ತಿರುವ ಮಾರ್ಗ ಮತ್ತು ಮುಂದೆ ಕ್ರಮಿಸಲಿರುವ ಹೆದ್ದಾರಿ ಈ ಮೂರೂ ಮಾರ್ಗಗಳ ಇಬ್ಬದಿಯಲ್ಲಿರಬಹುದಾದ ಚಾರಿತ್ರಿಕ ಸತ್ಯಗಳು, ಮೌಲ್ಯಗಳು ಮತ್ತು ಸಾಮಾಜಿಕ ವಿದ್ಯಮಾನಗಳ ಪರಿಚಯದ ಮೂಲಕವೇ ನಾವು ಭವಿಷ್ಯದ ಪೀಳಿಗೆಯನ್ನು ರೂಪಿಸಲು ಸಾಧ್ಯ.

ಇತಿಹಾಸದ ಪ್ರಮಾದಗಳನ್ನು ಸರಿಪಡಿಸುವ ಉನ್ಮಾದದಲ್ಲಿ ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ಕಲುಷಿತಗೊಳಿಸುವ ಒಂದು ವಿಕೃತ ಚಿಂತನೆ ಬಹುಪಾಲು ಸಾರ್ವತ್ರಿಕವಾಗುತ್ತಿದೆ. ಇಂದಿನ ಭಾರತೀಯ ಸಮಾಜದಲ್ಲಿ ಭೂಗತವಾಗಿರುವ ಜಾತೀಯತೆ, ಅಸ್ಪೃಶ್ಯತೆ, ಮತಾಂಧತೆ ಮತ್ತು ಅಸಹಿಷ್ಣುತೆಗಳ ಉತ್ಖನನ ಮಾಡುವ ಮೂಲಕ, ನಮ್ಮಿಳಗಿನ ವಿಷಬೇರುಗಳನ್ನು ಕಿತ್ತೊಗೆಯಬೇಕಾದ ಸಂದರ್ಭದಲ್ಲಿ ನಾವು ಇತಿಹಾಸದ ಅವಶೇಷಗಳಲ್ಲಿನ ದೋಷಗಳನ್ನು ಹೆಕ್ಕಿ ತೆಗೆದು, ಶತಮಾನಗಳ ಹಿಂದಿನ ದುಷ್ಕೃತ್ಯಗಳಿಗೆ ಇಂದಿನ ಸಮಾಜವನ್ನು ಗುರಿ ಮಾಡುತ್ತಿದ್ದೇವೆ. ಶಿಕ್ಷಣ, ವಿದ್ಯಾರ್ಹತೆ ಮತ್ತು ಜ್ಞಾನಸಂಪಾದನೆಯ ಮಾರ್ಗಗಳು ಮಾನವ ಸಮಾಜವನ್ನು ಬೌದ್ಧಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎನ್ನುವ ನಂಬಿಕೆಯನ್ನೇ ಹುಸಿಯಾಗಿಸುವಂತೆ ನಮ್ಮ ಸುತ್ತಲಿನ ಬೆಳವಣಿಗೆಗಳು ಕಂಡುಬರುತ್ತಿವೆ. ದುರಂತ ಎಂದರೆ ಈ ಬೌದ್ಧಿಕ ವಿಕೃತಿಗಳು ನಮಗೆ ಕಾಣಿಸಿಕೊಳ್ಳುತ್ತಿರುವುದು ಶಾಲಾ ಶಿಕ್ಷಣದ ಅಂಗಳದಲ್ಲಿ. ಕೂಗುಮಾರಿ ವಿದ್ಯುನ್ಮಾನ ಮಾಧ್ಯಮಗಳು ಈ ಸಾಂಸ್ಕೃತಿಕ ವಿಕೃತಿಗೆ ಮತ್ತಷ್ಟು ಮೆರುಗು ನೀಡಲು ತಮ್ಮ ಮಾರುಕಟ್ಟೆ ತಂತ್ರಗಳನ್ನು ಅವ್ಯಾಹತವಾಗಿ ಬಳಸುತ್ತಿವೆ.

ಶಾಲಾ ಶಿಕ್ಷಣ ಎಂದರೆ ವಿಕಸಿಸುತ್ತಿರುವ ಎಳೆಯ ಮಕ್ಕಳನ್ನು ಯಾವುದೋ ಒಂದು ಉದ್ಯೋಗಕ್ಕಾಗಿ ಅಥವಾ ಜೀವನೋಪಾಯದ ಮಾರ್ಗ ಶೋಧಕ್ಕಾಗಿ ತಯಾರು ಮಾಡುವ ಒಂದು ಕಾರ್ಯಾಗಾರ ಎಂದು ಭಾವಿಸಲಾಗಿರುವ ಈ ಹೊತ್ತಿನಲ್ಲಿ, ಶೈಕ್ಷಣಿಕ ವಲಯವನ್ನು ಬೌದ್ಧಿಕ ಸರಕುಗಳನ್ನು ಉತ್ಪಾದಿಸುವ ಕಾರ್ಖಾನೆ ಎಂದೇ ಭಾವಿಸಲಾಗುತ್ತಿದೆ. ಹಾಗಾಗಿ ಅಕ್ಷರ ಕಲಿಕೆಗಾಗಿ ಬರುವ ಮಕ್ಕಳ ಮಿದುಳಿನಲ್ಲಿ ನಮಗೆ ಬೇಕಾದ ಬೌದ್ಧಿಕ ಸರಕುಗಳನ್ನು ತುರುಕಲು ಪ್ರಯತ್ನಿಸಲಾಗುತ್ತಿದೆ. ಬಾಹ್ಯ ಸಮಾಜದಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರಾಬಲ್ಯ ಸಾಧಿಸಲು ಹೆಣಗಾಡುವ ಶಕ್ತಿಗಳಿಗೆ ಭವಿಷ್ಯದ ಪೀಳಿಗೆ ಎಂದರೆ ತಮ್ಮ ಸುರಕ್ಷಿತ ಹಿತವಲಯವನ್ನು ಕಾಪಾಡಲು ನೆರವಾಗುವ ಒಂದು ಕಾಲಾಳುಪಡೆ ಎಂದೇ ಭಾಸವಾದಂತಿದೆ. ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಾ, ಬಾಹ್ಯ ಸಮಾಜದ ಗೊಡವೆ ಇಲ್ಲದೆ, ತಾವು ಮುನ್ನಡೆಯುವ ಹಾದಿಯನ್ನು ರೂಪಿಸಿಕೊಳ್ಳಲು ಅಕ್ಷರ ಕಲಿಕೆ ಮತ್ತು ವಿದ್ಯಾರ್ಜನೆಯನ್ನು ಬಯಸುವ ಎಳೆಯ ಮಕ್ಕಳಿಗೆ, ಈ ಹಾದಿಯಲ್ಲಿ ಬಾಹ್ಯ ಸಮಾಜವೇ ನಿರ್ಮಿಸುತ್ತಿರುವ ಎಲ್ಲ ರೀತಿಯ ಸಾಂಸ್ಕೃತಿಕ ವಿಕೃತಿಗಳನ್ನೂ ಪರಿಚಯಿಸುವ ದಿಕ್ಕಿನಲ್ಲಿ ನಾವು ಸಾಗುತ್ತಿದ್ದೇವೆ.

ನಮಗೆ ಇದರ ಅರಿವಾಗುತ್ತಿದೆಯೇ? ಅಧಿಕಾರ ಕೇಂದ್ರಗಳಲ್ಲಿರುವವರಿಗೆ, ಆಡಳಿತ ನೀತಿಗಳನ್ನು ರೂಪಿಸುವವರಿಗೆ, ಭಾರತದ ಸಂವಿಧಾನ ಒದಗಿಸಿರುವ ಸುಂದರ ಜಗತ್ತಿನ ಫಲಾನುಭವಿಗಳಾಗಿ ಹಿತವಲಯದಲ್ಲಿರುವ ಬೌದ್ಧಿಕ ಪ್ರವರ್ತಕರಿಗೆ ತಾವು ಬದುಕಿ ಸಾಗಿರುವ ಮತ್ತು ವರ್ತಮಾನದಲ್ಲಿ ಬದುಕುತ್ತಿರುವ ಹಾಗೂ ಮುಂದಿನ ಪೀಳಿಗೆಗೆ ತಾವು ಸೃಷ್ಟಿಸಲಿರುವ ಸಮಾಜ ಹೇಗಿರಬೇಕು ಎಂಬ ಪರಿವೆ, ಪರಿಜ್ಞಾನ ಇಲ್ಲದೆ ಹೋದರೆ ಏನಾಗುತ್ತದೆ? ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ಆಡಳಿತ ನೀತಿಗಳನ್ನು ರೂಪಿಸಬೇಕಾದ ಶಾಸನ ಸಭೆಯ ಚುನಾಯಿತ ಪ್ರತಿನಿಧಿಗಳು ಸಂವಿಧಾನ ನಿಷ್ಠೆಗಿಂತಲೂ ವ್ಯಕ್ತಿ/ಪಕ್ಷ ನಿಷ್ಠೆಗೇ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಏನಾಗುತ್ತದೆ?. ಶಿಕ್ಷಣ ಇಲಾಖೆಯನ್ನು ನಿರ್ವಹಿಸುವ ಸಚಿವರಿಗೆ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ನಡುವೆ ಇರುವ ಅಂತರ, ವ್ಯತ್ಯಾಸ ಮತ್ತು ಅದರೊಳಗಿನ ಸೂಕ್ಷ್ಮಗಳ ಪರಿವೆ ಇಲ್ಲದಿದ್ದರೆ ಏನಾಗುತ್ತದೆ? ಈ ಪ್ರಶ್ನೆಗಳಿಗೆ ಕರ್ನಾಟಕದ ಶಾಲಾ ಪಠ್ಯ ಪರಿಷ್ಕರಣೆಯ ಚಕ್ರತೀರ್ಥದಲ್ಲಿ ಮಿಂದೆದ್ದರೆ ಸ್ಪಷ್ಟ ಉತ್ತರ ಹೊಳೆಯಬಹುದು.

ಭವಿಷ್ಯದ ಪ್ರಜೆಗಳೆಂದೇ ಪರಿಭಾವಿಸಲಾಗುವ ಎಳೆಯ ಮಕ್ಕಳಿಗೆ ನಾವು ಮಾಡುವ ಬೋಧನೆಗಳು ಆ ಮಕ್ಕಳ ಬದುಕನ್ನಷ್ಟೇ ರೂಪಿಸುವುದಿಲ್ಲ, ಹಲವು ಪೀಳಿಗೆಗಳ ಸಮಾಜವನ್ನು ರೂಪಿಸುವ ಅಡಿಗಲ್ಲುಗಳಾಗುತ್ತವೆ. ಭಾರತೀಯ ಸಮಾಜ ನಡೆದುಬಂದ ಹಾದಿ, ನಡೆಯುತ್ತಿರುವ ಮಾರ್ಗ ಮತ್ತು ಮುಂದೆ ಕ್ರಮಿಸಲಿರುವ ಹೆದ್ದಾರಿ ಈ ಮೂರೂ ಮಾರ್ಗಗಳ ಇಬ್ಬದಿಯಲ್ಲಿರಬಹುದಾದ ಚಾರಿತ್ರಿಕ ಸತ್ಯಗಳು, ಮೌಲ್ಯಗಳು ಮತ್ತು ಸಾಮಾಜಿಕ ವಿದ್ಯಮಾನಗಳ ಪರಿಚಯದ ಮೂಲಕವೇ ನಾವು ಭವಿಷ್ಯದ ಪೀಳಿಗೆಯನ್ನು ರೂಪಿಸಲು ಸಾಧ್ಯ. ಹಾಗಾಗಿಯೇ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮಗಳನ್ನು ರೂಪಿಸಲು ರಾಷ್ಟ್ರಮಟ್ಟದಲ್ಲೇ ಉನ್ನತ ಮಟ್ಟದ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಎನ್‌ಸಿಇಆರ್‌ಟಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸೈದ್ಧಾಂತಿಕವಾಗಿ ಭಿನ್ನ ಮಾರ್ಗ ಅನುಸರಿಸಿದರೂ, ಈ ಸಂಸ್ಥೆಯನ್ನು ಪ್ರತಿನಿಧಿಸುವ ಬೌದ್ಧಿಕ ವಲಯದ ಪ್ರತಿನಿಧಿಗಳಿಗೆ ವಿಶಾಲ ದೃಷ್ಟಿಕೋನ ಮತ್ತು ಚಾರಿತ್ರಿಕ ಅರಿವು ಇರುವುದನ್ನು ಇಂದಿಗೂ ಗಮನಿಸಬಹುದು. ಆಡಳಿತಾರೂಢ ಪಕ್ಷಗಳ ಹಸ್ತಕ್ಷೇಪವಿಲ್ಲದ ಸ್ವಾಯತ್ತ ಸಂಸ್ಥೆಯಾಗಿರಬೇಕಾದ ಇಂತಹ ಸಂಸ್ಥೆಗಳನ್ನೂ ರಾಜಕೀಯ ಪ್ರಭಾವಕ್ಕೊಳಪಡಿಸಿ ಕಲುಷಿತಗೊಳಿಸಿರುವುದು ಭಾರತದ ದುರಂತ.

ಶಾಲಾ ಶಿಕ್ಷಣದ ಹಂತದಲ್ಲಿ ಮಕ್ಕಳಿಗೆ ಏನು ಬೋಧಿಸಬೇಕು? ಬದುಕಿನ ಮೌಲ್ಯಗಳನ್ನೋ ಯಾವುದೋ ಒಂದು ನಿರ್ದಿಷ್ಟ ಸೈದ್ಧಾಂತಿಕ ಮೌಲ್ಯಗಳನ್ನೋ? ಈ ಪ್ರಶ್ನೆಗೆ ಪ್ರಜ್ಞಾವಂತ ಸಮಾಜ ಉತ್ತರ ಕಂಡುಕೊಳ್ಳಬೇಕಿದೆ. ವಿಕಸನದ ಹಂತದಲ್ಲಿರುವ ಮಕ್ಕಳಿಗೆ ಪ್ರಪ್ರಥಮವಾಗಿ ನಮ್ಮ ದೇಶದ ಸಂವಿಧಾನ ಪ್ರತಿಪಾದಿಸುವಂತಹ ಉನ್ನತ ಧ್ಯೇಯಾದರ್ಶಗಳನ್ನು, ಮೌಲ್ಯಗಳನ್ನು ಮತ್ತು ಸಾಮಾಜಿಕ ಚಿಂತನೆಗಳನ್ನು ಪರಿಚಯಿಸುವುದು ನಮ್ಮ ಆದ್ಯತೆಯಾಗಬೇಕು. ಏಕೆಂದರೆ ತಮ್ಮ ಪ್ರಾಥಮಿಕ ವ್ಯಾಸಂಗ ಮುಗಿಸಿ, ಪ್ರೌಢಾವಸ್ಥೆಗೆ ತಲುಪಿ, ಬಾಹ್ಯ ಸಮಾಜದೊಡನೆ ಬೆಸೆದುಕೊಳ್ಳುವ ಮಕ್ಕಳಿಗೆ, ತಮ್ಮ ಸಾರ್ವಜನಿಕ ಬದುಕಿನ ಸೋಪಾನವೇ ಈ ದೇಶದ ಸಂವಿಧಾನ ಎಂಬ ಅರಿವು ಮೂಡಿರಬೇಕು. ತಮ್ಮ ನಿತ್ಯಬದುಕಿನಲ್ಲಿ ಈ ಮಕ್ಕಳು ಎದುರಿಸುವ ಸಾಮಾಜಿಕ ತಾರತಮ್ಯಗಳು, ಅಸಮಾನತೆಗಳು ಮತ್ತು ದೌರ್ಜನ್ಯಗಳನ್ನು ದಾಟಿ ಸಮ ಸಮಾಜವನ್ನು ಕಟ್ಟಲು ಸಂವಿಧಾನವೇ ಮೂಲಾಧಾರ ಎಂಬ ಅರಿವು ಈ ಮಕ್ಕಳಲ್ಲಿ ಮೂಡಿಸಬೇಕು. ಈ ದೇಶದ ಬಹುಸಂಖ್ಯಾತ ಮಕ್ಕಳು ಎದುರಿಸುವ ಸಾಮಾಜಿಕ ಅನ್ಯಾಯಗಳ ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಆಯಾಮ ಮತ್ತು ಸಾಂಸ್ಕೃತಿಕ ಕಾರಣಗಳನ್ನು ಅವರಿಗೆ ಅರ್ಥಮಾಡಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ.

ಈ ದೃಷ್ಟಿಯಿಂದಲೇ ಶಾಲಾ ಪಠ್ಯಗಳಲ್ಲಿ ಸಮಾಜ ಸುಧಾರಕರ, ಯುಗ ಪ್ರವರ್ತಕರ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತಕರ ಮಾರ್ಗದರ್ಶಿ ಬೋಧನೆಗಳನ್ನು ಕತೆ, ಕವಿತೆ, ನಾಟಕ, ಪ್ರಬಂಧ ಮತ್ತು ಜೀವನ ಚರಿತ್ರೆಗಳ ಮೂಲಕ ಪರಿಚಯಿಸಬೇಕಾಗುತ್ತದೆ. ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಜಾತಿ ತರತಮಗಳನ್ನು ಪೋಷಿಸುವಂತಹ, ಮೇಲ್ಜಾತಿಯ ಶ್ರೇಷ್ಠತೆ ಮತ್ತು ಮೇಲರಿಮೆಗಳನ್ನು ಪ್ರೇರೇಪಿಸುವಂತಹ, ಅನ್ಯರನ್ನು ನಿಕೃಷ್ಟವಾಗಿ ಕಾಣಲು ಪ್ರಚೋದಿಸುವಂತಹ ಮತ್ತು ಮಕ್ಕಳ ಮನಸ್ಸಿನಲ್ಲಿ ಅನ್ಯತೆಯ ಭಾವನೆಯನ್ನು ಬಿತ್ತುವಂತಹ ಯಾವುದೇ ಬೌದ್ಧಿಕ ಚಿಂತನೆಗೆ ಶಾಲಾ ಪಠ್ಯಗಳಲ್ಲಿ ಅವಕಾಶ ನೀಡಕೂಡದು. ಹಾಗೆಯೇ ಭಾರತದ ಸಮನ್ವಯ ಸಂಸ್ಕೃತಿ, ಬಹುಸಾಂಸ್ಕೃತಿಕ ವೈವಿಧ್ಯತೆ ಮತ್ತು ಇವುಗಳನ್ನು ಕಾಪಾಡಲು ಅಗತ್ಯವಾದ ಸಾಂಸ್ಕೃತಿಕ ಸಹಿಷ್ಣುತೆಯನ್ನು ಬಿತ್ತುವಂತಹ ಬೋಧನೆಗಳನ್ನು, ಚಿಂತನೆಗಳನ್ನು ಪಠ್ಯಗಳಲ್ಲಿ ಅಳವಡಿಸಬೇಕಾಗುತ್ತದೆ. ಯಾವುದೇ ಪಂಥೀಯ ಭಾವನೆಗಳು ಅಥವಾ ಸೈದ್ಧಾಂತಿಕ ವಿಚಾರಧಾರೆಗಳ ಹೊರೆಯಿಲ್ಲದೆಯೇ ಇಂತಹ ಚಿಂತನೆಗಳನ್ನು ಬಿತ್ತಲು ನೆರವಾಗುವ ಸಾಹಿತ್ಯದ ಸರಕು ಕನ್ನಡದಲ್ಲಿ ಲಭ್ಯವಿದೆ. ಶರಣ ಸಾಹಿತ್ಯದಿಂದ ಬಂಡಾಯ-ದಲಿತ-ಆಧುನಿಕ ಸಾಹಿತ್ಯದವರೆಗೆ ಈ ವಿಚಾರಧಾರೆ ಹರಿದುಬಂದಿದೆ.

 20ನೇ ಶತಮಾನದ ಆರಂಭದಿಂದ ಈ ಹೊತ್ತಿನವರೆಗೂ ಈ ಆಶಯಗಳನ್ನು ಹೊತ್ತ ಸಾಹಿತ್ಯದ ಕಡಲು ನಮ್ಮ ನಡುವೆ ಹರಿಯುತ್ತಿದೆ. ಸ್ವಾತಂತ್ರ್ಯಾನಂತರದಲ್ಲೂ ಈ ಪ್ರವಾಹ ಜಡಗಟ್ಟದೆ ಪ್ರವಹಿಸುತ್ತಿದೆ. ಪ್ರಾಚೀನ ಭಾರತದ ಸನಾತನ ವಿಚಾರಧಾರೆಗಳನ್ನು ವೈಭವೀಕರಿಸುವ, ಶತಮಾನಗಳ ಹಿಂದೆ ಜಾತಿ ವ್ಯವಸ್ಥೆಯನ್ನು, ಪಿತೃಪ್ರಾಧಾನ್ಯತೆಯನ್ನು, ಜಾತಿ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಸಾಹಿತ್ಯವೂ ಈ ಪ್ರವಾಹದೊಡನೆ ಬೆರೆತು ಹರಿಯುತ್ತಿರುವುದು ವಾಸ್ತವ. ರಾಜಕೀಯ ಪರಿಭಾಷೆಯ ಎಡಪಂಥೀಯ ಮತ್ತು ಬಲಪಂಥೀಯ ಎನ್ನುವ ವರ್ಗೀಕರಣವನ್ನು ಈ ಸಾಹಿತ್ಯ ಕೃಷಿಗೆ ಆರೋಪಿಸುವ ಮೂಲಕ, ಪಠ್ಯಕ್ರಮ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಶಿಕ್ಷಣ ಸಚಿವರಿಗೆ, ಈ ವಿಚಾರಧಾರೆಗಳಲ್ಲಿ ಯಾವುದು ಭವಿಷ್ಯದ ಪೀಳಿಗೆಯನ್ನು ಸ್ವಸ್ಥ ಸಮಾಜದತ್ತ ಕೊಂಡೊಯ್ಯುತ್ತದೆ ಎಂಬ ಪರಿವೆ ಇರಬೇಕಿತ್ತು. ಇಲ್ಲಿ ನಾವು ವರ್ಗೀಕರಿಸಬೇಕಿರುವುದು ಪ್ರತಿಗಾಮಿ ಮತ್ತು ಪುರೋಗಾಮಿ ಸಾಹಿತ್ಯವನ್ನು. ಯಥಾಸ್ಥಿತಿವಾದ ಮತ್ತು ಪರಿವರ್ತನೆಯ ಮಾರ್ಗಗಳನ್ನು. ಪ್ರಾಚೀನ ಮತ್ತು ಅರ್ವಾಚೀನ ಆಲೋಚನಾ ಮಾರ್ಗಗಳನ್ನು.

ಚರಿತ್ರೆಯ ಅವಲೋಕನವಾಗಲೀ, ಚಾರಿತ್ರಿಕ ವ್ಯಕ್ತಿಗಳ ಪರಿಚಯವಾಗಲೀ, ಪ್ರಾಚೀನ ಭಾರತದ ಆಲೋಚನೆಗಳಾಗಲೀ ಅಥವಾ ಧಾರ್ಮಿಕ-ಆಧ್ಯಾತ್ಮಿಕ ಚಿಂತನಾ ಧಾರೆಗಳಾಗಲೀ, ಇವೆಲ್ಲವೂ ಆಧುನಿಕ ನಾಗರಿಕತೆಗೆ ಪೂರಕವಾದಂತಹ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದ್ದಾಗ ಮಾತ್ರವೇ ಅದು ಭವಿಷ್ಯ ಭಾರತದ ಸುಂದರ ಸಮಾಜಕ್ಕೆ ಪೂರಕವಾಗಿರಲು ಸಾಧ್ಯ. ವೈಚಾರಿಕ ಪ್ರಜ್ಞೆ ಇಲ್ಲದ, ವೈಜ್ಞಾನಿಕ ಆಲೋಚನೆ ಇಲ್ಲದ ಸಂಕುಚಿತ ದೃಷ್ಟಿಕೋನದ ಧಾರ್ಮಿಕ-ಆಧ್ಯಾತ್ಮಿಕ-ಸಾಂಸ್ಕೃತಿಕ ಚಿಂತನೆಗಳು ತುಲನಾತ್ಮಕ ಅಧ್ಯಯನಕ್ಕೆ ಮಾತ್ರವೇ ಯೋಗ್ಯವಾಗಿರಲು ಸಾಧ್ಯ. ಏಕೆಂದರೆ ನಾವು ಡಿಜಿಟಲ್ ಯುಗದಲ್ಲಿದ್ದೇವೆ, ಅತ್ಯಾಧುನಿಕ ತಂತ್ರಜ್ಞಾನ ಯುಗದ ಹೊಸ್ತಿಲಲ್ಲಿದ್ದೇವೆ, ಇಂತಹ ಸಾಹಿತ್ಯದ ಸರಕುಗಳನ್ನು ನಿರಾಕರಿಸಬೇಕೆಂದೇನಿಲ್ಲ, ಈ ಸಾಹಿತ್ಯ ಸರಕುಗಳ ತೌಲನಿಕ ಅಧ್ಯಯನದ ಮೂಲಕವೇ ಭಾರತ ನಡೆದುಬಂದ ಹಾದಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಆದರೆ ಇದು ಪ್ರಾಥಮಿಕ ಅಥವಾ ಮಾಧ್ಯಮಿಕ ಶಿಕ್ಷಣದ ಹಂತದಲ್ಲಿರುವ ಮಕ್ಕಳಿಗೆ ಬೇಕಾಗುವುದಿಲ್ಲ. ಶಾಲಾ ಶಿಕ್ಷಣದ ಹಂತದಲ್ಲಿ ಮಕ್ಕಳು ತೌಲನಿಕ ಅಧ್ಯಯನ ಮಾಡುವುದಿಲ್ಲ. ಬೋಧಿಸುವುದನ್ನು ಅರ್ಥಮಾಡಿಕೊಳ್ಳುವ ಮಟ್ಟಿಗೆ ಮಾತ್ರವೇ ಬುದ್ಧಿವಿಕಸನವಾಗಿರುತ್ತದೆ. ಇದೇ ಮಕ್ಕಳು ಉನ್ನತ ವ್ಯಾಸಂಗದಲ್ಲಿ ಮುಂದುವರಿದಾಗ ಈ ಪ್ರಾಚೀನತೆಯನ್ನು ಮತ್ತು ಅಧುನಿಕತೆಯನ್ನು ತೌಲನಿಕವಾಗಿ ಅಧ್ಯಯನ ಮಾಡಿ, ಗ್ರಹಿಸುವ ಶಕ್ತಿಯನ್ನು ಸಹಜವಾಗಿ ಪಡೆದುಕೊಳ್ಳುತ್ತವೆ.

ಹಾಗಾಗಿಯೇ ಶಾಲಾ ಪಠ್ಯಕ್ರಮದಲ್ಲಿ ಬುದ್ಧ, ಬಸವಣ್ಣ, ನಾರಾಯಣಗುರು, ವಿವೇಕಾನಂದ, ಮಹಾತ್ಮಾ ಫುಲೆ, ಅಂಬೇಡ್ಕರ್, ಠಾಗೋರ್, ಗಾಂಧಿ ಮುಂತಾದವರ ಚಿಂತನೆಗಳು ಮುಖ್ಯವಾಗುತ್ತವೆ. ಈ ಮಹಾನ್ ಚಿಂತಕರ ಆಲೋಚನಾ ಧಾರೆಗಳೇ ಭಾರತದ ಸಂವಿಧಾನವನ್ನು ಸಾಕಾರಗೊಳಿಸುವಂತಹ ಒಂದು ಸುಂದರ ಸಮಾಜಕ್ಕೆ ಬುನಾದಿ ಹಾಕಲು ಸಾಧ್ಯ. ಇವರೊಟ್ಟಿಗೇ ಭಾರತದ ಇತಿಹಾಸದ ಪರ್ವಕಾಲಗಳಲ್ಲಿ ಯುಗಪ್ರವರ್ತಕರಾಗಿ, ಸಮಾಜ ಸುಧಾರಕರಾಗಿ ಮತ್ತು ಧರ್ಮ ಪ್ರವರ್ತಕರಾಗಿ ಕಂಡುಬರುವ ಸಂತ ಪರಂಪರೆ, ದಾಸ ಪರಂಪರೆ, ಆಚಾರ್ಯ ಪರಂಪರೆಗಳನ್ನೂ ಮಕ್ಕಳಿಗೆ ಪರಿಚಯಿಸುವುದು ಅತ್ಯವಶ್ಯ. ಈ ಪಠ್ಯಗಳನ್ನು ರೂಪಿಸುವ ಸಂದರ್ಭದಲ್ಲಿ ಇತಿಹಾಸದ ಆಳವಾದ ಜ್ಞಾನ ಇರುವ ಮತ್ತು ವರ್ತಮಾನ ಸಮಾಜದ ಅವಶ್ಯಕತೆಗಳ ಅರಿವು ಇರುವ, ಭವಿಷ್ಯದ ಕನಸಿನ ಪರಿವೆ ಇರುವ ತಜ್ಞರು ಅವಶ್ಯವಾಗಿ ಬೇಕಾಗುತ್ತಾರೆ. ಈ ಹಿಂದಿನ ಪಠ್ಯಕ್ರಮ ಪರಿಷ್ಕರಣೆಯ ಸಂದರ್ಭದಲ್ಲಿ 177 ಜನರ ಬೃಹತ್ ಬೌದ್ಧಿಕ ತಂಡ ತನ್ನ ಸಲಹೆ, ಮಾರ್ಗದರ್ಶನಗಳನ್ನು ನೀಡಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಿದೆ.

ಭಾರತದ ಸಂದರ್ಭದಲ್ಲಿ ಸಹಜವಾಗಿಯೇ ಉದ್ಭವಿಸುವ ಸೈದ್ಧಾಂತಿಕ ಭಿನ್ನಮತಗಳು, ತಾತ್ವಿಕ ಭಿನ್ನಾಭಿಪ್ರಾಯಗಳು ಮತ್ತು ವೈಚಾರಿಕ ವಿರೋಧಾಭಾಸಗಳನ್ನು ಗಮನದಲ್ಲಿಟ್ಟುಕೊಂಡೇ ಭವಿಷ್ಯದ ಪೀಳಿಗೆಗೆ ಒಂದು ಸೌಹಾರ್ದಯುತ, ಸಮನ್ವಯದ ಶೈಕ್ಷಣಿಕ ನೆಲಹಾಸನ್ನು ನಾವು ಸಿದ್ಧಪಡಿಸಬೇಕಾಗಿದೆ. ವೈವಿಧ್ಯತೆಯಲ್ಲಿ ಏಕತೆ ಸಾಧಿಸುವ ಗುರಿ ಹೊತ್ತು ಸಾಗುತ್ತಿರುವ ಭಾರತೀಯ ಸಮಾಜಕ್ಕೆ ಭಿನ್ನಮತವನ್ನು ಸಹಿಸಿಕೊಳ್ಳುವ ವ್ಯವಧಾನ ಸಹಜವಾಗಿಯೇ ಇರಬೇಕಾಗುತ್ತದೆ. ಬದಲಾದ ರಾಜಕೀಯ ಸಂದರ್ಭದಲ್ಲಿ ಬೌದ್ಧಿಕ ವಲಯದಲ್ಲೂ ಈ ವ್ಯವಧಾನ ಮರೆಯಾಗುತ್ತಿರುವುದೇ ಅಸಹನೆ ಮತ್ತು ಮತ್ಸರ ಹೆಚ್ಚಾಗಲು ಕಾರಣವಾಗುತ್ತಿದೆ. ಹಾಗೆಯೇ ಭೌತಿಕವಾಗಿ ಶತಮಾನಗಳ ಅಸ್ಪಶ್ಯತೆಯನ್ನು ಅನುಭವಿಸುತ್ತಿರುವ ಸಾಂಪ್ರದಾಯಿಕ ಸಮಾಜವನ್ನು ಬೌದ್ಧಿಕ ಅಸ್ಪಶ್ಯತೆಯೂ ಕಾಡಲಾರಂಭಿಸಿದೆ. ಗುಪ್ತಗಾಮಿನಿಯಂತೆ ನಮ್ಮ ಸಮಾಜದ ಗರ್ಭದಲ್ಲಿ ಹರಿಯುತ್ತಿದ್ದ ಜಾತಿ ಶ್ರೇಷ್ಠತೆಯ ಮಾಲಿನ್ಯ, ಜಾತಿ ತಾರತಮ್ಯದ ಧೋರಣೆಗಳು, ಮೇಲರಿಮೆಗಳು, ಪುರುಷಪ್ರಧಾನ ವ್ಯವಸ್ಥೆಯ ಮನಸ್ಥಿತಿ, ಶೋಷಕ ವ್ಯವಸ್ಥೆಯ ವಿಭಿನ್ನ ನೆಲೆಗಳು ಮತ್ತು ‘ಅನ್ಯ ದ್ವೇಷ’ದ ಧೋರಣೆಗಳು ಇವೆಲ್ಲವನ್ನೂ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪಠ್ಯಪರಿಷ್ಕರಣದ ಸಂದರ್ಭದಲ್ಲಿ ಒಮ್ಮೆಲೆ ಹೊರಹಾಕಿಬಿಟ್ಟಿದೆ. ಎರಡು ಮೂರು ಪೀಳಿಗೆಗಳ ಕಾಲ ಭಾರತದ ಸಾಂವಿಧಾನಿಕ ಆಶಯಗಳಿಗನುಗುಣವಾಗಿ ಮತ್ತು ದೇಶದ ಬಹುಸಾಂಸ್ಕೃತಿಕ ನೆಲೆಗಳನ್ನರಿತು, ಒಂದು ಸ್ವಸ್ಥ ಶೈಕ್ಷಣಿಕ ವಲಯದ ಫಲಾನುಭವಿಗಳಾಗಿ, ಹಿತವಲಯದಲ್ಲಿರುವ ಬೃಹತ್ ಜನಸ್ತೋಮ ಇಂದು ಮೌನವಾಗಿರುವುದು ಅಥವಾ ಎಡ-ಬಲದ ಬದಿಗಳಲ್ಲಿ ನಿಂತು ಪರ-ವಿರೋಧದ ನೆಲೆಗಳಲ್ಲಿರುವುದು ಶತಮಾನದ ದುರಂತ. ಈ ಪರ-ವಿರೋಧ ಚರ್ಚೆಗಳಿಂದ ಹೊರಬರುತ್ತಿರುವ ವಿಚಾರಗಳು ಶಾಲಾ ಮಕ್ಕಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎಂಬ ಆಲೋಚನೆಯೂ ನಮ್ಮಲ್ಲಿ ಮೂಡಿಲ್ಲ. ಈಗಾಗಲೇ ಕಲುಷಿತಗೊಂಡಿರುವ ಸಾಂಸ್ಕೃತಿಕ ವಲಯವನ್ನು ಮಾಲಿನ್ಯರಹಿತವಾಗಿ ಮಾಡುವ ಜವಾಬ್ದಾರಿ ಹೊಂದಿರುವ ನಾವು, ನಮ್ಮ ಮಕ್ಕಳಲ್ಲೇ ಪ್ರಾಚೀನ ಆಲೋಚನೆಗಳನ್ನು ತುಂಬುವ ಮೂಲಕ ಭವಿಷ್ಯದ ಬೌದ್ಧಿಕ ದಾರಿದ್ರ್ಯಕ್ಕೆ ಮುನ್ನುಡಿ ಹಾಡುತ್ತಿದ್ದೇವೆ ಎನಿಸುವುದಿಲ್ಲವೇ? ಇದು ಸ್ವತಂತ್ರ ಭಾರತದ ಏಳು ದಶಕಗಳ ಸಾಂವಿಧಾನಿಕ ಹೆಜ್ಜೆಗಳ ಫಲಾನುಭವಿಗಳು ಯೋಚಿಸಬೇಕಾದ ವಿಚಾರ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News