ಅರುಣಾಚಲ ಪ್ರದೇಶ: ಕಣ್ಮರೆಯಾಗಿ ಎರಡು ವಾರ ಕಳೆದರೂ ಪತ್ತೆಯಾಗದ ಸೈನಿಕರು

Update: 2022-06-13 02:01 GMT
ಸಾಂದರ್ಭಿಕ ಚಿತ್ರ

ಇಟಾನಗರ: ಅರುಣಾಚಲ ಪ್ರದೇಶದ ಅಂಜವ್ ಜಿಲ್ಲೆಯ ಗಡಿಯಲ್ಲಿ ಮುಂಚೂಣಿಯಲ್ಲಿ ನಿಯೋಜಿತರಾಗಿದ್ದ ಇಬ್ಬರು ಭಾರತೀಯ ಸೈನಿಕರ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆದಿದ್ದು, ಕಣ್ಮರೆಯಾಗಿ ಎರಡು ವಾರ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು hindustantimes.com ವರದಿ ಮಾಡಿದೆ.

ನಾಯಕ್ ಪ್ರಕಾಶ್ ಸಿಂಗ್ ರಾಣಾ (34) ಮತ್ತು ಲ್ಯಾನ್ಸ್ ನಾಯಕ್ ಹರೇಂದರ್ ಸಿಂಗ್ (28) ಅವರು ಮೇ 28ರಂದು ತಮ್ಮ ನಿಯೋಜನೆ ಪ್ರದೇಶದಲ್ಲಿ ವೇಗವಾಗಿ ಹರಿಯುವ ನದಿಗೆ ಆಕಸ್ಮಿಕವಾಗಿ ಬಿದ್ದಿರಬೇಕು ಎಂದು ಅಂದಾಜಿಸಿರುವುದಾಗಿ ಭಾರತೀಯ ಸೇನೆ ಪ್ರಕಟಿಸಿದೆ.

"ತಕ್ಷಣ ಮತ್ತು ತೀವ್ರ ಶೋಧ, ಪರಿಹಾರ ಕಾರ್ಯಾಚರಣೆ ಹೊರತಾಗಿಯೂ ಸಿಬ್ಬಂದಿಯನ್ನು ಪತ್ತೆ ಮಾಡುವ ಪ್ರಯತ್ನದಲ್ಲಿ ಯಾವುದೇ ಯಶಸ್ಸು ಸಿಕ್ಕಿಲ್ಲ" ಎಂದು ಸ್ಪಷ್ಟಪಡಿಸಿದೆ. ಎರಡು ವಾರಗಳಿಂದ ಶೋಧ ಕಾರ್ಯ ಮುಂದುವರಿದಿದ್ದು, ಘಟನೆ ಬಗ್ಗೆ ತನಿಖೆ ನಡೆಸಲು ಸೇನೆ ವಿಚಾರಣಾ ನ್ಯಾಯಾಲಯವನ್ನು ನೇಮಿಸಿದೆ.

ಕಣ್ಮರೆಯಾದ ಇಬ್ಬರೂ ಸೈನಿಕರು ಉತ್ತರಾಖಂಡದವರಾಗಿದ್ದು, ಕುಟುಂಬದ ಜತೆ ಸಂಪರ್ಕದಲ್ಲಿದ್ದು, ಮಾಹಿತಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. 7ನೇ ಗರ್ವಾಲ್ ರೈಫಲ್ಸ್ ನ ಜವಾನ ಪ್ರಕಾಶ್ ಸಿಂಗ್ ರಾಣಾ ಅವರ ಪತ್ನಿ ಆತಂಕಿತರಾಗಿದ್ದಾರೆ. ಪತಿಯ ಸುಳಿವು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.

ಕೊನೆಯ ಬಾರಿ ಮೇ 28ರಂದು ಎಸ್‍ಎಂಎಸ್ ಸಂದೇಶ ಮೂಲಕ ಪತಿ ಜತೆ ಸಂಪರ್ಕ ಹೊಂದಿದ್ದರು. "ಮೇ 28ರಂದು ತಾವು ಚೆನ್ನಾಗಿರುವುದಾಗಿ ಸಂದೇಶ ಕಳುಹಿಸಿದ್ದರು. ಮರುದಿನ ಸೇನೆಯ ಅಧಿಕಾರಿಗಳಿಂದ ಈ ಆಘಾತಕಾರಿ ಸುದ್ದಿ ಬಂದಿದೆ" ಎಂದು ಮಮತಾ (30) ಹೇಳಿದ್ದಾರೆ. ದಂಪತಿಗೆ ಅನೂಜ್ (1) ಹಾಗೂ ಅನಾಮಿಕ (7) ಎಂಬ ಇಬ್ಬರು ಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News