2,000 ಕೋಟಿ ರೂ. ಮೌಲ್ಯದ ಆಸ್ತಿ ಉಳಿಸಲು ಕಾಂಗ್ರೆಸ್ ಪ್ರತಿಭಟನೆ: ಸ್ಮೃತಿ ಇರಾನಿ

Update: 2022-06-13 15:16 GMT
Photo:PTI

ಹೊಸದಿಲ್ಲಿ,ಜೂ.13 ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋಮವಾರ ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ವಿಚಾರಣೆಗೊಳಗಾದ ರಾಹುಲ್ ಗಾಂಧಿಯವರನ್ನು ಬೆಂಬಲಿಸಿ ಕಾಂಗ್ರೆಸ್ ನಡೆಸಿದ ಬೃಹತ್ ಪ್ರತಿಭಟನೆಗಳ ಕುರಿತು ವ್ಯಂಗ್ಯವಾಡಿದ ಕೇಂದ್ರ ಸಚಿವೆ ಸ್ಮತಿ ಇರಾನಿಯವರು,ಕಾಂಗ್ರೆಸ್ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪ್ರತಿಭಟಿಸುತ್ತಿಲ್ಲ,ರಾಹುಲ್ ಗಾಂಧಿಯವರ 2,000 ಕೋ.ರೂ.ಮೌಲ್ಯದ ಆಸ್ತಿಗಳ ರಕ್ಷಣೆಗಾಗಿ ಪ್ರತಿಭಟಿಸುತ್ತಿದೆ ಎಂದು ಕುಟುಕಿದರು.

ಪ್ರತಿಭಟನೆಗಳು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಪ್ರಯತ್ನಗಳಾಗಿವೆ ಮತ್ತು ಹಿಂದೆಂದೂ ರಾಜಕೀಯ ಕುಟುಂಬವೊಂದು ತನ್ನ ಅಕ್ರಮ ಗಳಿಕೆಯ ಸಂಪತ್ತನ್ನು ರಕ್ಷಿಸಿಕೊಳ್ಳಲು ತನಿಖಾ ಸಂಸ್ಥೆಗಳನ್ನು ಒತ್ತೆಯಾಗಿ ಇರಿಸಿಕೊಂಡಿರಲಿಲ್ಲ ಎಂದು ಹೇಳಿದ ಇರಾನಿ,ತಮ್ಮ ಭ್ರಷ್ಟಾಚಾರವು ಬಯಲಾಗುತ್ತಿರುವುದರಿಂದ ತನಿಖಾ ಸಂಸ್ಥೆಗಳ ಮೇಲೆ ಬಹಿರಂಗವಾಗಿ ಒತ್ತಡ ಹೇರಲು ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದಾರೆ. ಕಾನೂನಿಗಿಂತ ಯಾರೂ ಮೇಲಲ್ಲ,ರಾಹುಲ್ ಗಾಂಧಿ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಒತ್ತಿ ನುಡಿದರು.

 ಮಾಧ್ಯಮಗಳಿಗೆ ಈ.ಡಿ.ಪ್ರಕರಣವನ್ನು ವಿವರಿಸಿದ ಅವರು,ವೃತ್ತಪತ್ರಿಕೆಯೊಂದನ್ನು ಪ್ರಕಟಿಸುವ ಉದ್ದೇಶದಿಂದ 1930ರಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿ.(ಎಜಿಎಲ್) ಕಂಪನಿಯನ್ನು ಸ್ಥಾಪಿಸಲಾಗಿತ್ತು ಮತ್ತು 5,000 ಸ್ವಾತಂತ್ರ ಹೋರಾಟಗಾರರು ಕಂಪನಿಯಲ್ಲಿ ಶೇರುಗಳನ್ನು ಹೊಂದಿದ್ದರು. ಆದರೆ ಅದೀಗ ಗಾಂಧಿ ಕುಟುಂಬದ ನಿಯಂತ್ರಣದಲ್ಲಿದೆ ಎಂದರು.

 ಕಂಪನಿಯ ಒಡೆತನವನ್ನು ಒಂದು ಕುಟುಂಬಕ್ಕೆ ವರ್ಗಾಯಿಸಲಾಗಿದೆ. ಅದೀಗ ವೃತ್ತಪತ್ರಿಕೆಯನ್ನು ಪ್ರಕಟಿಸುತ್ತಿಲ್ಲ,ಅದು ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದ ಇರಾನಿ,ಕಂಪನಿಯು 2008ರಲ್ಲಿ 90 ಕೋ.ರೂ.ಗಳ ನಷ್ಟವನ್ನು ಅನುಭವಿಸಿತ್ತು ಮತ್ತು ಆಸ್ತಿ ವ್ಯವಹಾರವನ್ನು ನಡೆಸಲು ನಿರ್ಧರಿಸಿತ್ತು. 2010ರಲ್ಲಿ ಐದು ಲ.ರೂ.ಗಳ ಆರಂಭಿಕ ಬಂಡವಾಳದಲ್ಲಿ ಯಂಗ್ ಇಂಡಿಯಾ ಎಂಬ ಇನ್ನೊಂದು ಕಂಪನಿಯನ್ನು ಸ್ಥಾಪಿಸಿ ರಾಹುಲ್ ಗಾಂಧಿಯವರನ್ನು ಅದರ ನಿದೇಶಕರನ್ನಾಗಿ ಮಾಡಲಾಗಿತ್ತು. ಕಂಪನಿಯಲ್ಲಿ ರಾಹುಲ್ ಒಬ್ಬರೇ ಶೇ.75ರಷ್ಟು ಪಾಲನ್ನು ಹೊಂದಿದ್ದು,ಸೋನಿಯಾ ಗಾಂಧಿ ಹಾಗೂ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫೆರ್ನಾಂಡಿಸ್‌ರಂತಹ ಕಾಂಗ್ರೆಸ್ ನಾಯಕರು ಉಳಿದ ಪಾಲನ್ನು ಹೊಂದಿದ್ದರು. ಬಳಿಕ ಎಜೆಎಲ್‌ನ ಒಂಭತ್ತು ಕೋಟಿ (ಶೇ.99)ಶೇರುಗಳನ್ನು ಯಂಗ್ ಇಂಡಿಯಾಕ್ಕೆ ವರ್ಗಾಯಿಸಲಾಗಿತ್ತು. ಕಾಂಗ್ರೆಸ್ ಆಗ ಎಜೆಎಲ್‌ಗೆ ಮರಳಿಸುವ ಅಗತ್ಯವಿಲ್ಲದ 90 ಲ.ರೂ.ಗಳ ಸಾಲವನ್ನು ನೀಡಿತ್ತು ಎಂದರು.

ದತ್ತಿಕಾರ್ಯಗಳಿಗಾಗಿ ಸ್ಥಾಪನೆ ಪರವಾನಿಗೆಯನ್ನು ಪಡೆದುಕೊಂಡಿದ್ದ ಯಂಗ್ ಇಂಡಿಯಾ ಅಂತಹ ಯಾವುದೇ ಕಾರ್ಯವನ್ನು ಮಾಡಿಲ್ಲ,ಅದು ಗಾಂಧಿ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ ಇರಾನಿ,ಕೋಲ್ಕತಾದ ಹವಾಲಾ ವ್ಯಾಪಾರಿಯೊಂದಿಗೆ ನಂಟು ಹೊಂದಿರುವ ಡಾಟೆಕ್ಸ್ ಮರ್ಕಂಡೈಸ್ ಪ್ರೈ.ಲಿ.ಜೊತೆ ರಾಹುಲ್ ಗಾಂಧಿ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News