ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಝುಬೈರ್‌ ವಿರುದ್ಧದ ಎಫ್‍ಐಆರ್ ರದ್ದುಗೊಳಿಸಲು ನಿರಾಕರಿಸಿದ ಅಲಹಾಬಾದ್ ಹೈಕೋರ್ಟ್

Update: 2022-06-13 11:41 GMT
ಮುಹಮ್ಮದ್ ಝುಬೈರ್‌ (Photo: Twitter)

ಅಲಹಾಬಾದ್: ಯತಿ ನರಸಿಂಗಾನಂದ ಸರಸ್ವತಿ, ಬಜರಂಗ್ ಮುನಿ ಹಾಗೂ ಆನಂದ್ ಸ್ವರೂಪ್ ಅವರನ್ನು ದ್ವೇಷ ಹರಡುವವರು ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದಾರೆಂಬ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಪ್ರಶ್ನಿಸಿ ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ಝುಬೈರ್‌ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಈ ತಿಂಗಳು ಐಪಿಸಿ ಸೆಕ್ಷನ್ 295ಎ ಹಾಗೂ ಐಟಿ ಕಾಯಿದೆಯ ಸೆಕ್ಷನ್ 67 ಅನ್ವಯ ಪ್ರಕರಣ ದಾಖಲಿಸಿದ್ದರು.

ತನ್ನ ಟ್ವೀಟ್‍ನಲ್ಲಿ ಯಾರನ್ನೂ ಅವಮಾನಿಸಿಲ್ಲ ಅಥವಾ ಯಾವುದೇ ವರ್ಗದ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡಿಲ್ಲ ಎಂದು ಝುಬೈರ್‌ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ದುರುದ್ದೇಶದಿಂದ ತನಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದರು.

ಆದರೆ ಅವರ ವಾದವನ್ನು ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಅಜಯ್ ಕುಮಾರ್ ಶ್ರೀವಾಸ್ತವ ಅವರ ಪೀಠ ನಿರಾಕರಿಸಿದೆ ಹಾಗೂ ಪ್ರಕರಣ ಇನ್ನಷ್ಟೇ ಆರಂಭಿಕ ಹಂತದಲ್ಲಿದೆ ಹಾಗೂ ತನಿಖೆ ಇನ್ನಷ್ಟೇ ಮುಂದುವರಿಯಬೇಕಿದೆ ಎಂದು ಹೇಳಿದೆ.

ಝುಬೈರ್‌ ವಿರುದ್ಧ ದೂರನ್ನು ರಾಷ್ಟ್ರೀಯ ಹಿಂದು ಶೇರ್ ಸೇನಾದ ಸೀತಾಪುರ ಘಟಕದ ಅಧ್ಯಕ್ಷರಾದ ಭಗವಾನ್ ಶರಣ್ ದಾಖಲಿಸಿದ್ದರು ಹಾಗೂ ಝುಬೈರ್‌ ಅವರ ಟ್ವೀಟ್ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News