ಈ ಐಎಎಸ್‌ ಅಧಿಕಾರಿಯ 10ನೇ ತರಗತಿಯ ಅಂಕಪಟ್ಟಿ ವೈರಲ್; ಕಾರಣವೇನು ಗೊತ್ತೇ?

Update: 2022-06-13 12:44 GMT
Photo: Twitter/@AwanishSharan

ಅಹಮದಾಬಾದ್: ತಮ್ಮ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು IAS ಅಧಿಕಾರಿಯೊಬ್ಬರು ತಮ್ಮ 10 ನೇ ತರಗತಿಯ ಅಂಕಪಟ್ಟಿಯನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಗುಜರಾತ್‌ನ ಭರೂಚ್‌ನ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ ಅವರು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಹಂಚಿಕೊಂಡಿದ್ದು, ಅವರು ಇಂಗ್ಲಿಷ್‌ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗಳನ್ನು ಪಡೆದಿದ್ದರು ಎಂದು ವರದಿಯಾಗಿದೆ. 

ಛತ್ತೀಸ್‌ಗಢ ಕೇಡರ್‌ನ 2009 ರ ಬ್ಯಾಚ್ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಅಂಕಪಟ್ಟಿಯೊಂದಿಗೆ ತುಷಾರ್‌ ಅವರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, "ತಮ್ಮ ಅಂಕಪಟ್ಟಿ ಹಂಚಿಕೊಂಡ ಭರೂಚ್ ಕಲೆಕ್ಟರ್ ತುಷಾರ್ ಸುಮೇರಾ ಅವರು, 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಕೇವಲ ಪಾಸ್‌ ಮಾರ್ಕ್‌ ಗಳಿಸಿ ಉತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ. ಅವರು ಇಂಗ್ಲಿಷ್ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕ ಮಾತ್ರ ಪಡೆದಿದ್ದಾರೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

2012 ರಲ್ಲಿ ಐಎಎಸ್ ಅಧಿಕಾರಿಯಾದ ತುಷಾರ್ ಸುಮೇರಾ ಅವರು ಆರ್ಟ್ಸ್ ಸ್ಟ್ರೀಮ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೊದಲು ಶಾಲಾ ಶಿಕ್ಷಕರಾಗಿಯೂ ಅವರು ಕೆಲಸ ಮಾಡಿದ್ದಾರೆ.

ಕಡಿಮೆ ಅಂಕ ಗಳಿಸಿದ ಮಕ್ಕಳು ಖಿನ್ನರಾಗಬೇಕಿಲ್ಲ, ಅವಕಾಶಗಳು ಇನ್ನೂ ಮುಗಿದಿಲ್ಲ ಎಂಬ ಸಂದೇಶ ನೀಡಲು ಐಎಎಸ್‌ ಅಧಿಕಾರಿ ತಮ್ಮ ಅಂಕಪಟ್ಟಿಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News