ಪ್ರವಾದಿ ನಿಂದನೆ: ಎಫ್‌ಐಆರ್‌ ಗೆ ಟೈಮ್ಸ್‌ ನೌ ನಿರೂಪಕಿ ನಾವಿಕಾ ಕುಮಾರ್‌ ಹೆಸರು ಸೇರ್ಪಡೆ

Update: 2022-06-13 16:46 GMT
 ನಾವಿಕಾ ಕುಮಾರ್‌ (Photo: Twitter/@navikakumar)

ಮುಂಬೈ, ಜೂ. 13: ‘ಟೈಮ್ಸ್ ನೌ’ ಸುದ್ದಿ ವಾಹಿನಿಯ ಪ್ರೈಮ್ ಟೈಮ್ ಕಾರ್ಯಕ್ರಮದ ಪ್ಯಾನಲಿಸ್ಟ್ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ ಮೂರು ವಾರಗಳ ಬಳಿಕ ಅದರ ನಿರೂಪಕಿ ನಾವಿಕಾ ಕುಮಾರ್ ಅವರನ್ನು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಲ್ಲಿ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು newslaundry.com ವರದಿ ಮಾಡಿದೆ.

ಮುಸ್ಲಿಂ ಧರ್ಮಗುರುವೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪರ್ಭಾನಿಯ ನಾನಲ್‌ಪೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕಾಗಿ ವಜಾಗೊಂಡಿರುವ ಬಿಜೆಪಿಯ ನಾಯಕಿ ನೂಪುರ್ ಶರ್ಮಾ ಅವರ ಹೆಸರನ್ನು ಕೂಡ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನೂಪುರ್ ಅವರ ಹೇಳಿಕೆಯನ್ನು ನಾವು ಬೆಂಬಲಿಸುವುದಿಲ್ಲ ಎಂದು ಪ್ರತಿಪಾದಿಸುವ ಮೂಲಕ ‘ಟೈಮ್ಸ್ ನೌ’ ಅಂತರ ಕಾಯ್ದುಕೊಂಡಿತ್ತು. ‘‘ನಾವು ಚರ್ಚೆಯ ಸಂದರ್ಭ ಸಂಯಮ ಕಾಯ್ದುಕೊಳ್ಳುವಂತೆ ಹಾಗೂ ಸಹ ಪ್ಯಾನಲಿಸ್ಟ್‌ಗಳ ವಿರುದ್ಧ ಅಸಂಸದೀಯ ಭಾಷೆ ಬಳಸದಂತೆ ಪಾಲ್ಗೊಳ್ಳುವವರಲ್ಲಿ ಆಗ್ರಹಿಸುತ್ತೇವೆ’’ ಎಂದು ವಾಹಿನಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಇಂತಹ "ಚರ್ಚೆಗಳನ್ನು" ನಡೆಸಿದ್ದಕ್ಕಾಗಿ ನಾವಿಕಾ ಹಲವು ಬಾರಿ ಟೀಕೆಗಳನ್ನು ಎದುರಿಸಿದ್ದಾರೆ. ನಾವಿಕಾ ನಡೆಸಿದ ಕಾರ್ಯಕ್ರಮದಲ್ಲಿ ನೂಪುರ್ ನೀಡಿರುವ ಹೇಳಿಕೆಗಳಿಂದ ಮುಸ್ಲಿಂ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಭಾರತದಾದ್ಯಂತ ಪ್ರತಿಭಟನೆಗಳು ನಡೆದಿವೆ. ಅಲ್ಲದೆ, ಕೆಲವು ಮಾಧ್ಯಮಗಳು ವಿಷಕಾರಿ ಧ್ವನಿಗಳಿಗೆ ನ್ಯಾಯಸಮ್ಮತತೆಯನ್ನು ನೀಡುವುದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡಿಸಿತ್ತು.

ನಾವಿಕಾ ಆಯೋಜಿಸಿದ ಕಾರ್ಯಕ್ರಮದ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವುದಾಗಿ ‘ಟೈಮ್ಸ್ ನೌ’ ಹೇಳುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ನಟಿ ಕಂಗನಾ ರಣಾವತ್ ಅವರನ್ನು ದಿಲ್ಲಿಯಲ್ಲಿ ನಡೆದ ‘ಟೈಮ್ಸ್ ನೌ’-2021 ಶೃಂಗದಲ್ಲಿ ನಾವಿಕಾ ಸಂದರ್ಶನ ನಡೆಸಿದ್ದರು. ಈ ಸಂದರ್ಶನದಲ್ಲಿ ಕಂಗನಾ ರಣಾವತ್ 1947ರಲ್ಲಿ ಭಾರತ ಪಡೆದಿರುವ ಸ್ವಾತಂತ್ರ ಭಿಕ್ಷೆ. ನಿಜವಾದ ಸ್ವಾತಂತ್ರ ದೊರಕಿರುವುದು ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಎಂದಿದ್ದರು.

ಕಂಗನಾ ರಣಾವತ್ ಅವರ ಈ ಹೇಳಿಕೆ ಬಗ್ಗೆ ಬಿಜೆಪಿ ನಾಯಕರೂ ಸೇರಿದಂತೆ ಹಲವರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅನಂತರ ‘ಟೈಮ್ಸ್ ನೌ’ ಕಂಗನಾ ಅವರ ಹೇಳಿಕೆ ಲಕ್ಷಾಂತರ ಸ್ವಾತಂತ್ರ ಹೋರಾಟಗಾರರಿಗೆ ಅವಮಾನ ಮಾಡಿದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News