ಸಬ್ಸಿಡಿ ರದ್ದತಿ ಮಾಡಿದರೆ ಭಾರತೀಯ ಮೀನುಗಾರರಿಗೆ ಸಂಕಷ್ಟ: ವರದಿ

Update: 2022-06-13 18:33 GMT

ಜಿನೆವಾ, ಜೂ.13: ಭಾರತದ ಮೀನುಗಾರರಿಗೆ ಸರಕಾರ ಒದಗಿಸುತ್ತಿದ್ದ ಸಬ್ಸಿಡಿಯು ಸಮುದಾಯಕ್ಕೆ ಮೀನುಗಾರಿಕೆ ವೃತ್ತಿ ನಡೆಸಲು ಹಾಗೂ ತಮ್ಮ ಕುಟುಂಬವನ್ನು ಸಲಹಲು ನೆರವಾಗುತ್ತಿತ್ತು. ಆದರೆ ಈಗ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಟಿಒ) ಒಪ್ಪಂದದ ಪ್ರಕಾರ ಸಬ್ಸಿಡಿ ನಿರ್ಬಂಧಿಸುವ ಕ್ರಮದಿಂದ ಕೋಟ್ಯಾಂತರ ಮೀನುಗಾರರ ಮೇಲೆ ಪರಿಣಾಮ ಉಂಟಾಗಲಿದ್ದು ಅವರ ಕುಟುಂಬ ಬಡತನದ ದವಡೆಗೆ ಸಿಲುಕುವ ಅಪಾಯವಿದೆ ಎಂದು ಮೂಲಗಳು ಹೇಳಿವೆ.

 ಜಿನೆವಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಸ್ತಾವಿತ ಮೀನುಗಾರಿಕೆ ಸಬ್ಸಿಡಿ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಸಬ್ಸಿಡಿಯನ್ನು ನಿವಾರಿಸಲು ಡಬ್ಯ್ಲುಟಿಒ ಸಂಘಟನೆಯ ಅಭಿವೃದ್ಧಿ ಹೊಂದಿದ ದೇಶಗಳು ಒತ್ತಡ ಹೇರುತ್ತಿವೆ ಎಂದು ವರದಿಯಾಗಿದೆ. ಚೀನಾ, ಯುರೋಪಿಯನ್ ಯೂನಿಯನ್(ಇಯು), ಅಮೆರಿಕಗಳಿಗೆ ಹೋಲಿಸಿದರೆ ಭಾರತವು ಮೀನುಗಾರರಿಗೆ ಕಡಿಮೆ ಸಬ್ಸಿಡಿ ನೀಡುತ್ತಿದೆ. ಚೀನಾ ವಾರ್ಷಿಕ 7.3 ಬಿಲಿಯನ್ ಡಾಲರ್, ಯುರೋಪಿಯನ್ ಯೂನಿಯನ್ 3.8 ಬಿಲಿಯನ್ ಡಾಲರ್ ಮತ್ತು ಅಮೆರಿಕ 3.4 ಬಿಲಿಯನ್ ಡಾಲರ್ ಸಬ್ಸಿಡಿ ನೀಡುತ್ತಿದ್ದರೆ ಭಾರತವು ಸಣ್ಣ ಮೀನುಗಾರರಿಗೆ 2018ರಲ್ಲಿ ಕೇವಲ 277 ಮಿಲಿಯನ್ ಡಾಲರ್ ಮೊತ್ತದ ಸಬ್ಸಿಡಿ ನೀಡಿದೆ.

  ಸೆಂಟ್ರಲ್ ಮರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್(ಸಿಎಂಎಫ್‌ಆರ್‌ಐ)ನ 2016ರ ಜನಗಣತಿ ಪ್ರಕಾರ ದೇಶದಲ್ಲಿ ಒಟ್ಟು ಸಮುದ್ರ ಮೀನುಗಾರರ ಸಂಖ್ಯೆ 3.77 ಮಿಲಿಯನ್(0.90 ಮಿಲಿಯನ್ ಮೀನುಗಾರರ ಕುಟುಂಬ) ಆಗಿದೆ. ಇದರಲ್ಲಿ ಸುಮಾರು 67.3%ದಷ್ಟು ಕುಟುಂಬಗಳು ಬಿಪಿಎಲ್ ವರ್ಗಕ್ಕೆ ಸೇರಿವೆ. ಸುಮಾರು 2 ಲಕ್ಷ ಮೀನುಗಾರಿಕೆ ವೃತ್ತಿಗಳಿದ್ದು ಕೇವಲ 59,000 ಮಾತ್ರ ಯಾಂತ್ರೀಕೃತವಾಗಿದೆ. ಅಂದಾಜು ಮೀನುಗಾರಿಕಾ ಸಾಮರ್ಥ್ಯ ಸುಮಾರು 4.4 ಮಿಲಿಯನ್ ಟನ್ ಆಗಿದ್ದರೆ 2019ರಲ್ಲಿ ಕೇವಲ 3.8 ಮಿಲಿಯನ್ ಟನ್ ಸಮುದ್ರ ಉತ್ಪನ್ನಗಳನ್ನು ಸೆರೆಹಿಡಿಯಲಾಗಿದೆ. ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಮೀನುಗಾರಿಕೆ ಕುಟುಂಬಗಳು ತುಲನಾತ್ಮಕವಾಗಿ ಸಣ್ಣಪ್ರಮಾಣದ ಬಂಡವಾಳ ಮತ್ತು ಸಣ್ಣ ಪ್ರಮಾಣದ ಮೀನುಗಾರಿಕೆ ಬೋಟ್‌ಗಳನ್ನು ಹೊಂದಿರುತ್ತವೆ ಮತ್ತು ಸಮುದ್ರದ ದಡದ ಸಮೀಪದಲ್ಲಿಯೇ ಮೀನುಗಾರಿಕೆ ನಡೆಸುತ್ತವೆ. ಅಲ್ಲದೆ ಭಾರತದಲ್ಲಿ ಸಮುದ್ರ ಮೀನುಗಾರಿಕೆ ಸಣ್ಣಪ್ರಮಾಣದಲ್ಲಿ ನಡೆಯುತ್ತಿದ್ದರೂ ಕೋಟ್ಯಾಂತರ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿದೆ. ಭಾರತದಲ್ಲಿ ಮೀನುಗಾರಿಕೆಯನ್ನು ಕೈಗಾರಿಕೆಯಂತೆ ನಡೆಸಲಾಗುತ್ತಿಲ್ಲ. ಆದರೆ ಅಭಿವೃದ್ಧಿ ಹೊಂದಿದ ದೇಶಗಳು ಬೃಹತ್ ಹಡಗುಗಳ ಮೂಲಕ ಆರ್ಥಿಕ ವಲಯವನ್ನೂ ಮೀರಿ ಆಳಸಮುದ್ರ ಮೀನುಗಾರಿಕೆಯನ್ನು ಕೈಗಾರಿಕೆಯಂತೆ ನಡೆಸುತ್ತಿದ್ದಾರೆ. ಇದು ಮೀನುಗಳ ಸಂತತಿಗೆ ಅಪಾಯಕಾರಿಯಾಗಿದೆ ಎಂದು ಮೂಲಗಳು ಹೇಳಿವೆ.

ಭಾರತದ ಸಮುದ್ರ ಮೀನುಗಾರರ ಜನಸಂಖ್ಯೆ 112 ದೇಶಗಳ ಜನಸಂಖ್ಯೆಗಿಂತ ಅಧಿಕವಾಗಿದೆ. ಮೀನುಗಾರ ಸಮುದಾಯದ ಹಿತಾಸಕ್ತಿಯ ರಕ್ಷಣೆಗೆ ಆಗ್ರಹಿಸಲು ಭಾರತದ ವಿವಿಧ ರಾಜ್ಯಗಳ 34 ಮೀನುಗಾರರ ತಂಡ ಜಿನೆವಾ ತಲುಪಿದೆ. ವಾಣಿಜ್ಯ ಮೀನುಗಾರಿಕೆಗೆ ಮಾತ್ರ ಸಬ್ಸಿಡಿ ರದ್ದುಗೊಳಿಸಬೇಕು, ಜೀವನಾಧಾರ ಮೀನುಗಾರಿಕೆಗೆ ಮುಂದುವರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳ ಒತ್ತಡಕ್ಕೆ ಮಣಿದು ಯಾವುದೇ ಒಪ್ಪಂದಕ್ಕೆ ಸಹಿ ಹಾಕಲಾಗದು ಎಂದು ಭಾರತದ ನಿಯೋಗದ ನೇತೃತ್ವ ವಹಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

 ಜೀವನಾಧಾರ ಮೀನುಗಾರಿಕೆ:

ಭಾರತೀಯ ಮೀನುಗಾರರು ಸಾಂಪ್ರಾಯಿಕ ಮತ್ತು ಸುಸ್ಥಿರ ಮೀನುಗಾರಿಕೆ ಪ್ರಕ್ರಿಯೆಯನ್ನು ಸಾವಿರಾರು ವರ್ಷಗಳಿಂದ ಮುನ್ನಡೆಸುತ್ತಾ ಬಂದಿದ್ದಾರೆ ಮತ್ತು ಇದು ಕೇವಲ ಜೀವನಾಧಾರ ಮೀನುಗಾರಿಕೆಯಾಗಿದೆ. ಭಾರತೀಯ ಮೀನುಗಾರಿಕಾ ಸಂಪನ್ಮೂಲಗಳನ್ನು ಮೀನುಗಾರರು ತಮ್ಮ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳಿಂದ ಉತ್ತಮವಾಗಿ ಸಂರಕ್ಷಿಸಿದ್ದಾರೆ. 61 ದಿನಗಳ ಅವಧಿಗೆ ಮೀನುಗಾರಿಕೆ ರಜಾದಿನಗಳ ಘೋಷಣೆ ಮತ್ತು ಸಂಬಂಧಪಟ್ಟ ರಾಜ್ಯಗಳಿಂದ ಮೀನುಗಾರಿಕೆ ನಿಯಂತ್ರಣ ಕಾಯಿದೆಯ ಅನುಷ್ಟಾನದ ಮೂಲಕ ಸಮರ್ಥನೀಯ ಮೀನುಗಾರಿಕೆಯನ್ನು ಸರಕಾರ ಬೆಂಬಲಿಸುತ್ತದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News