ವರದಿಯ ಪೀಠಿಕೆಯಲ್ಲಿ ಆಶಯಗಳನ್ನು ಉಲ್ಲಂಘಿಸಿದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ

Update: 2022-06-14 02:49 GMT

ಬೆಂಗಳೂರು: ಸಮಾಜವಿಜ್ಞಾನ ಪಠ್ಯಪುಸ್ತಕಗಳಲ್ಲಿ ಯಾವುದೇ ಜಾತಿ, ಧರ್ಮ, ಪಂಥ, ಸಮುದಾಯಗಳಿಗೆ ಅಥವಾ ವ್ಯಕ್ತಿಗಳಿಗೆ ಅಪಮಾನವಾಗುವ ಆಕ್ಷೇಪಾರ್ಹ ಅಂಶಗಳಿರದಂತೆ ಎಚ್ಚರಿಕೆ ವಹಿಸಬೇಕು. ಪಠ್ಯಗಳಲ್ಲಿ ಕೊಡುವ ಮಾಹಿತಿಗಳಲ್ಲಿ ಸುಳ್ಳು, ಉತ್ಪ್ರೇಕ್ಷೆಗಳಿರಬಾರದು ಎಂದು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ತನ್ನ ವರದಿಯ ಪೀಠಿಕೆಯಲ್ಲಿ ಆಶಯ ವ್ಯಕ್ತಪಡಿಸಿದೆಯಾದರೂ ಪಠ್ಯಪುಸ್ತಕಗಳಲ್ಲಿ ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಹಲವು ದಾರ್ಶನಿಕರಿಗೆ ಅವಮಾನವಾಗುವಂತೆ ಪರಿಷ್ಕರಿಸಿ ನೈಜ ಸಂಗತಿಗಳನ್ನು ಮರೆಮಾಚಿ, ಸುಳ್ಳುಗಳಿಂದ ಕೂಡಿರುವ ಅಂಶಗಳನ್ನು ಇದೇ ಸಮಿತಿಯು ತುರುಕಿರುವುದು ಪೀಠಿಕೆಯಲ್ಲಿನ ಆಶಯಗಳನ್ನು ಉಲ್ಲಂಘಿಸಿದಂತಾಗಿದೆ.

ಪಠ್ಯಪುಸ್ತಕಗಳ ಪರಿಷ್ಕರಣೆ-2022ರ ವರದಿಯಲ್ಲಿ ಮುಖ್ಯವಾಗಿ ಸಮಾಜವಿಜ್ಞಾನ ಪಠ್ಯಪುಸ್ತಕಗಳಲ್ಲಿ ಏನಿರಬೇಕು ಮತ್ತು ಏನಿರಬಾರದು ಎಂಬ ಅಂಶಗಳ ಪಟ್ಟಿಯನ್ನು ನೀಡಿ ಬೆನ್ನು ತಟ್ಟಿಕೊಂಡಿರುವ ಸಮಿತಿಯು ಅದರಂತೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸದಿರುವುದು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇದೆ. 2014ರಲ್ಲಿ ರಚಿತವಾಗಿದ್ದ ಮೂಲ ಪಠ್ಯಪುಸ್ತಕದ ಆಶಯ ಮತ್ತು ಸ್ವರೂಪಕ್ಕೆ ಎಲ್ಲಿಯೂ ಧಕ್ಕೆಯುಂಟು ಮಾಡಿಲ್ಲ ಎಂದು ವರದಿಯಲ್ಲಿ ಹೇಳುತ್ತಲೇ ತದ್ವಿರುದ್ಧವಾದ ಸಂಗತಿಗಳನ್ನೇ ತುರುಕಿ ಪರಿಷ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ವರದಿಯ ಪ್ರತಿಯನ್ನು ''the-file.in'' ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

‘ಇಂದಿನ ಮಕ್ಕಳೇ ಮುಂದಿನ ಜನಾಂಗವೆಂಬ ಮಾತಿದೆ. ಶಾಲೆಗಳಲ್ಲಿ ಓದುವ ಇಂದಿನ ಮಕ್ಕಳಿಗೆ ನಾವೂ ಎಂಥ ಪಠ್ಯಗಳನ್ನು ಬೋಧಿಸುತ್ತೇವೆಂಬುದರ ಮೇಲ ಸಮಾಜದ ಭವಿಷ್ಯ ನಿಂತಿದೆ. ವಿದ್ಯಾರ್ಥಿಗಳು ಓದುವ ಪಠ್ಯಗಳು ಆರೋಗ್ಯಕರ ಚಿಂತನೆಗಳನ್ನು ಒಳಗೊಂಡಿರಬೇಕು. ಸಮಾಜದ ವಿವಿಧ ವರ್ಗ, ಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ತಾತ್ಸಾರಗಳನ್ನು ಹರಡುವಂತಿರಬಾರದು. ಅವರಲ್ಲಿ ರಾಷ್ಟ್ರೀಯತೆಯನ್ನೂ ದೇಶಪ್ರೇಮವನ್ನೂ ಉದ್ದೀಪಿಸುವಂತಿರಬೇಕು,’ ಎಂದು ಪೀಠಿಕೆಯಲ್ಲಿ ಸಮಿತಿಯು ಹೇಳಿದೆ.

ಆದರೆ ಬಸವಣ್ಣ, ಅಂಬೇಡ್ಕರ್, ಕುವೆಂಪು, ಸಿದ್ಧ್ದಗಂಗಾ, ಆದಿಚುಂಚನಗಿರಿ ಮಠ, ಶಂಕರಾಚಾರ್ಯ, ಪ್ರಾದೇಶಿಕ ಅಸ್ಮಿತೆ, ಕರ್ನಾಟಕದ ಬಾವುಟದ ವಿಚಾರದಲ್ಲಿ ಸಮಿತಿಯು ಪರಿಷ್ಕರಿಸಿರುವ ಅಂಶಗಳು ಆರೋಗ್ಯಕರ ಚಿಂತನೆಗಳನ್ನು ಒಳಗೊಂಡಿಲ್ಲ. ಬದಲಿಗೆ ದಾರ್ಶನಿಕರನ್ನು ಏಕವಚನದಲ್ಲಿ ಸಂಬೋಧಿಸುತ್ತಲೇ ಅಗೌರವ ತೋರಿದೆ. ಅದೇ ರೀತಿ ಯಾವ ಸಿದ್ಧಾಂತಗಳಿಗೂ ಜಾಗ ಕೊಡಕೂಡದು ಎಂದು ವರದಿಯ ಪೀಠಿಕೆಯಲ್ಲಿ ಹೇಳಿರುವ ಸಮಿತಿಯು ಮರುಪರಿಷ್ಕರಿಸಿರುವ ಪಠ್ಯಗಳಲ್ಲಿಯೂ ತನ್ನದೇ ಸಿದ್ಧಾಂತವನ್ನು ಹೇರಿದೆ.

‘ಮುಖ್ಯವಾಗಿ ಸಮಾಜವಿಜ್ಞಾನ ಪಠ್ಯಪುಸ್ತಕಗಳಲ್ಲಿ ಯಾವುದೇ ಜಾತಿ, ಧರ್ಮ, ಪಂಥ, ಸಮುದಾಯಗಳಿಗೆ ಅಥವಾ ವ್ಯಕ್ತಿಗಳಿಗೆ ಅಪಮಾನವಾಗುವ ಆಕ್ಷೇಪಾರ್ಹ ಅಂಶಗಳಿರದಂತೆ ಎಚ್ಚರಿಕೆ ವಹಿಸಬೇಕು. ವಿಷಯಗಳನ್ನು ಕ್ರಮಬದ್ಧವಾಗಿ, ಕಾಲಪಟ್ಟಿಗನುಗುಣವಾಗಿ ಕೊಡಬೇಕು. ಅನಗತ್ಯ ವಿಷಯಗಳು ತುಂಬಿತುಳುಕಾಡುವ ಮಾಹಿತಿ ಕೋಶವಾಗಿಸದೇ ಜ್ಞಾನಕೋಶಗಳನ್ನಾಗಿ ಮಾಡಬೇಕು. ಸ್ವಹಿತಾಸಕ್ತಿಯ ಯಾವ ಸಿದ್ಧಾಂತಗಳಿಗೂ ಜಾಗ ಕೊಡಕೂಡದು. ಅರ್ಧಸತ್ಯ, ಉತ್ಪ್ರೇಕ್ಷೆ, ನಿರ್ಣಯ ಮುಂತಾದವನ್ನು ಕೈಬಿಟ್ಟು ಅಧಿಕೃತ ಆಧಾರಗಳಿರುವ ಸಂಗತಿಗಳನ್ನು ಮುಂದಿಡಬೇಕು. ಐತಿಹಾಸಿಕ ಉಪೇಕ್ಷಿತ ಸಂಗತಿಗಳನ್ನು ಅವುಗಳ ಪ್ರಾಮುಖ್ಯಕ್ಕನುಗುಣವಾಗಿ ಪಠ್ಯಗಳಲ್ಲಿ ತರಬೇಕು. ಎಲ್ಲ ಬಗೆಯ ತಪ್ಪುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಗ್ಗಿಸಬೇಕು’ ಎಂದು ಸಮಿತಿಯು ಪೀಠಿಕೆಯಲ್ಲಿ ತನ್ನ ಆಶಯವನ್ನು ವ್ಯಕ್ತಪಡಿಸಿದೆ.

ಆದರೆ ಮರುಪರಿಷ್ಕರಿಸಿರುವ ಪಠ್ಯಗಳಲ್ಲಿ ವರದಿಯ ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಜಗಜ್ಜಾಹೀರಾಗಿದೆ. ಅಲ್ಲದೆ ‘ಸಮಾಜವಿಜ್ಞಾನ ಪಠ್ಯವು ನಮ್ಮ ವಿದ್ಯಾರ್ಥಿಗಳನ್ನು ದೇಶದ ಬಗ್ಗೆ ಪ್ರೀತಿ, ಅಭಿಮಾನಗಳುಳ್ಳ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಬೇಕೇ ಹೊರತು, ದೇಶದ ಬಗ್ಗೆ, ದೇಶದೊಳಗಿನ ಹಲವು ಜಾತಿ, ಸಮುದಾಯ, ಭಾಷೆ, ಪಂಥಗಳ ಬಗ್ಗೆ ತಾತ್ಸಾರಭಾವವನ್ನು ತಾಳುವಂತ ಜನಾಂಗವನ್ನು ಸೃಷ್ಟಿಸಬಾರದು ಎಂಬುದು ಪರಿಷ್ಕರಣೆಯ ಪ್ರತಿಹಂತದಲ್ಲಿಯೂ ಸಮಿತಿ ವಹಿಸಿದ್ದ ಎಚ್ಚರಿಕೆಯಾಗಿತ್ತು,’ ಎಂಬ ಸಾಲುಗಳನ್ನು ಉದ್ಧರಿಸಿದೆ.

2014ರಲ್ಲಿ ಪರಿಷ್ಕರಣೆಗೆ ಒಳಗಾದ ಪಠ್ಯಪುಸ್ತಕಗಳಲ್ಲಿ ಭಾಷೆಯ ಈ ಬಗೆಯ ಕಲಿಕೆಗೆ ಹಿನ್ನಡೆಯಾಗಿ ಕೇವಲ ಸಿದ್ಧಾಂತ ಪ್ರಚಾರವೇ ಮುನ್ನೆಲೆಗೆ ಬಂದಿದ್ದನ್ನು ಗಮನಿಸಿದೆ. ಆ ಪಠ್ಯಗಳ ಮರುಪರಿಷ್ಕರಣೆಯ ಹೊತ್ತಿನಲ್ಲಿ ಕೆಲವು ನಿಯಮಗಳನ್ನು ಅಳವಡಿಸಿಕೊಂಡಿತು ಎಂದು ಹೇಳಿರುವ ಸಮಿತಿಯು ತನ್ನದೇ ಆರೆಸ್ಸೆಸ್ ಸಿದ್ಧಾಂತಕ್ಕೆ ಪೂರಕವಾದ ಅಂಶಗಳನ್ನೇ ಮುಖ್ಯವಾಗಿ ರಾಷ್ಟ್ರೀಯತವಾದವನ್ನೇ ಪಠ್ಯದಲ್ಲಿ ತುರುಕಿರುವುದು ಕೂಡ ಬಹಿರಂಗವಾಗಿದೆ.

 ರೋಹಿತ್ ಚಕ್ರತೀರ್ಥ ಸಮಿತಿ ಪ್ರಕಾರ ಸಮಾಜ ವಿಜ್ಞಾನ ಪಠ್ಯಗಳಲ್ಲಿ ವೈದಿಕ ಕಾಲದ ಬಗ್ಗೆ ತಪ್ಪು ಮಾಹಿತಿಗಳಿದ್ದವು. ನಿರ್ದಿಷ್ಟ ಸಮುದಾಯಗಳ ಅವಹೇಳನ ಮಾಡಲಾಗಿತ್ತು. ಭಾರತದ ಬಗ್ಗೆ ಕೀಳು ಅಭಿಪ್ರಾಯಗಳು ಬರುವಂತೆ ಪಠ್ಯಗಳ ರಚನೆಯಾಗಿತ್ತು. ಮಾತೃಭೂಮಿ, ಭಾರತೀಯ ಎಂಬಂಥ ಪದಗಳ ಬದಲಾವಣೆಯಾಗಿತ್ತು. ಕಾಲಾನುಕ್ರಮಣಿಕೆಯಲ್ಲಿ ಪಠ್ಯಗಳು ಇರಲಿಲ್ಲ. ನೂರಾರು ಕಾಗುಣಿತ ತಪ್ಪುಗಳಿದ್ದವು.

  ಆಕ್ಷೇಪಾರ್ಹ ಭಾಗಗಳಿಗೆ ಸೂಕ್ತ ಪರಿಷ್ಕರಣೆ ಮಾಡಿದೆ ಎಂದು ವರದಿಯಲ್ಲಿ ಹೇಳಿರುವ ಈ ಸಮಿತಿಯು ಭಾರತದ ಸಂಸ್ಕೃತಿ, ಪರಂಪರೆಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿದೆ. ಖಚಿತ ಮತ್ತು ಅಧಿಕೃತ ಇತಿಹಾಸ ಅಂಶಗಳನ್ನು ಸೇರ್ಪಡೆಗೊಳಿಸಿದೆ. ಸಂದಿಗ್ಧತೆ, ಅಸ್ಪಷ್ಟತೆಗಳ ನಿವಾರಣೆ, ಇತಿಹಾಸ ಪಠ್ಯದ ಕಾಲಾನುಕ್ರಮ ಜೋಡಣೆ ಮತ್ತು ಅನಗತ್ಯ ಪುನರಾವರ್ತಿತ ಭಾಗಗಳ ವಿಲೋಪನ ಮಾಡಿದೆ ಎಂದು ಉಲ್ಲೇಖಿಸಿದೆ.

ಅತ್ಯುತ್ತಮ ಪಠ್ಯಪುಸ್ತಕ ಎಂಬುದು ಒಂದು ಆದರ್ಶ ಸ್ಥಿತಿ. ಅದರತ್ತ ನಡೆಯುವುದು ಎಲ್ಲರ ಆಶಯವೇ ಹೊರತು ನೂರಕ್ಕೆ ನೂರು ಅತ್ಯುತ್ತಮವಾದ ಪಠ್ಯಪುಸ್ತಕಗಳನ್ನು ರಚಿಸುವುದು ಸಾಧ್ಯವಿಲ್ಲ. ಆ ವಿನಯದಿಂದಲೇ ಸಮಿತಿಯು ಈ ಪುನರ್ ಪರಿಶೀಲನೆ ಕಾರ್ಯವನ್ನು ಮುಗಿಸಿದೆ. ಇದು ಕೇವಲ ಮರುಪರಿಷ್ಕರಣೆಯೇ ಹೊರತು ಸಮಗ್ರ ಪುನಾರಚನೆಯಲ್ಲ. ಈಗಾಗಲೇ 2014ರಲ್ಲಿ ರಚಿತವಾಗಿದ್ದ ಮೂಲ ಪಠ್ಯಪುಸ್ತಕದ ಆಶಯ ಮತ್ತು ಸ್ವರೂಪಕ್ಕೆ ಎಲ್ಲಿಯೂ ಧಕ್ಕೆಯುಂಟು ಮಾಡಿಲ್ಲ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಅದನ್ನು ಅನುಸರಿಸಿ ಬಂದ ರಾಜ್ಯ ಪಠ್ಯಕ್ರಮ ಚೌಕಟ್ಟುಗಳನ್ನು ಮುಂದಿಟ್ಟುಕೊಂಡೇ ಇಡಿ ಪಠ್ಯಕ್ರಮದ ಮರು ಪರಿಷ್ಕರಣೆ ಕಾರ್ಯ ನಡೆದಿದೆ. ಜೊತೆಗೆ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಾಗಿದೆ, ಎಂದು ವರದಿಯಲ್ಲಿ ಪ್ರಸ್ತಾಪಿಸಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News