ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಕುರಿತು ಶರದ್ ಪವಾರ್ ಹೇಳಿದ್ದೇನು?

Update: 2022-06-14 05:06 GMT
Photo:PTI

ಮುಂಬೈ/ಹೊಸದಿಲ್ಲಿ: ರಾಷ್ಟ್ರಪತಿ ಹುದ್ದೆಗೆ ಜುಲೈ 18 ರಂದು ನಡೆಯಲಿರುವ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಹೊರಹೊಮ್ಮುವ ಲಕ್ಷಣಗಳ ಮಧ್ಯೆ ಶರದ್ ಪವಾರ್ ಅವರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಪ್ರಸ್ತಾಪವನ್ನು ತಿರಸ್ಕರಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ನಿನ್ನೆ ಸಂಜೆ ಮುಂಬೈನಲ್ಲಿ ನಡೆದ ತಮ್ಮ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಭೆಯಲ್ಲಿ ಶರದ್ ಪವಾರ್ ಅವರು "ನಾನು ರಾಷ್ಟ್ರಪತಿ ಹುದ್ದೆಯ ರೇಸ್‌ನಲ್ಲಿ ಇಲ್ಲ, ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ" ಎಂದು ಹೇಳಿದ್ದಾರೆಂದು  ವರದಿಯಾಗಿದೆ.

81 ವರ್ಷದ ಮಾಜಿ ಕೇಂದ್ರ ಸಚಿವರಾದ ಪವಾರ್   ತಮ್ಮ ಔಪಚಾರಿಕ ನಿರಾಕರಣೆಯನ್ನು ಕಾಂಗ್ರೆಸ್‌ಗೆ ತಿಳಿಸಿಲ್ಲ. ರಾಷ್ಟ್ರಪತಿ  ಹುದ್ದೆಗೆ ಸ್ಪರ್ಧಿಸುವಂತೆ  ಕಳೆದ ವಾರ ಕಾಂಗ್ರೆಸ್ ಸಲಹೆ ನೀಡಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಪವಾರ್ ಪಕ್ಷದ ಮಿತ್ರಪಕ್ಷಗಳಾದ ಕಾಂಗ್ರೆಸ್ ಹಾಗೂ  ಶಿವಸೇನೆ ಪವಾರ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಒಮ್ಮತದ ಅಭ್ಯರ್ಥಿಯನ್ನಾಗಿ ಬಯಸುತ್ತವೆ ಎಂದು ವರದಿಯಾಗಿದೆ.

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಗುರುವಾರ ಪವಾರ್ ಅವರನ್ನು ಅವರ ಮುಂಬೈ ಮನೆಯಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಸಂದೇಶದೊಂದಿಗೆ ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.

ರವಿವಾರ ಎನ್‌ಸಿಪಿ ನಾಯಕ  ಪವಾರ್,  ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಅವರಿಂದ   ಕರೆ ಸ್ವೀಕರಿಸಿದರು.

ವಿಪಕ್ಷಗಳು ತನ್ನ ಅಭ್ಯರ್ಥಿ ಗೆಲ್ಲುವಷ್ಟು ಸಂಖ್ಯೆಯನ್ನು ಹೊಂದಿಸಬಹುದು ಎಂಬ ಕುರಿತು ಪವಾರ್ ಗೆ ವಿಶ್ವಾಸವಿಲ್ಲ. ಸೋಲುವ ಯುದ್ದದಲ್ಲಿ ಸ್ಪರ್ಧಿಸಲು ಪವಾರ್ ಹಿಂಜರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳು ದೊಡ್ಡ ಹಿನ್ನಡೆಯನ್ನು ಕಂಡಿದ್ದವು. ಬಿಜೆಪಿಯು ಶಿವಸೇನೆಯ ಸಂಜಯ್ ಪವಾರ್ ಅವರನ್ನು ಸೋಲಿಸುವ  ಮೂಲಕ  ಮೇಲುಗೈ ಸಾಧಿಸಿತ್ತು. ಶಿವಸೇನೆಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದ ಹಲವು ಸ್ವತಂತ್ರ ಶಾಸಕರ ಮೂಲಕವೇ   ಬಿಜೆಪಿ ತನ್ನ ಅಭ್ಯರ್ಥಿಯನ್ನು ಚುನಾಯಿಸುವಲ್ಲಿ ಯಶಸ್ವಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News