ಮರುಪರಿಷ್ಕರಣೆಯ ತಂತ್ರಗಾರಿಕೆಗೆ ಮೋಸಹೋಗದಿರೋಣ

Update: 2022-06-15 07:20 GMT

ಸರಕಾರವು ಆಕ್ಷೇಪಣೆಗಳಿದ್ದರೆ ತಿದ್ದುತ್ತೇವೆ ಎನ್ನುತ್ತಿದೆ. ಇದರ ಅರ್ಥವೆಂದರೆ ಈಗಾಗಲೇ ಪ್ರಕಟವಾಗಿದೆ ಎನ್ನಲಾಗುವ ಪಠ್ಯಪುಸ್ತಕಗಳು ಹಾಗೇ ಇರುತ್ತವೆ. ಯಾವುದನ್ನು ಮರುಪರಿಷ್ಕರಣೆ ಮಾಡಲಾಗುತ್ತದೆಯೋ ಆ ಪುಟಗಳನ್ನು ಕೇವಲ ಶಿಕ್ಷಕರಿಗೆ ಒದಗಿಸಲಾಗುತ್ತದೆ. ಅಂದರೆ ಚಕ್ರತೀರ್ಥ ಸಮಿತಿಯ ಪಠ್ಯಗಳು ಇದ್ದ ಹಾಗೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಇವರ ಕೈಯಲ್ಲಿ ಅಧಿಕೃತವಾಗಿ ಇರುತ್ತವೆ.

ಕರ್ನಾಟಕದ ಶಾಲಾ ಪಠ್ಯಪುಸ್ತಕಗಳ ಎಡವಟ್ಟುಗಳು ಪ್ರಸಿದ್ಧ ಕತೆಯ ಪ್ಯಾಂಡೋರಾಳ ಪೆಟ್ಟಿಗೆಯಿಂದ ಹೊರಬರುವ ಕಷ್ಟಗಳ ಹಾಗಿವೆ. ನಾನು ಚಿಕ್ಕಂದಿನಲ್ಲಿ ಹಾಳು ಹಂಪೆಯನ್ನು ನೋಡಿದಾಗ ಈ ಪ್ರಮಾಣದಲ್ಲಿ ಹಾಳುಗೆಡವಲು ಅದೆಷ್ಟು ಶ್ರಮವಹಿಸಿರಬೇಕು ಎಂದು ಆಶ್ಚರ್ಯಪಟ್ಟಿದ್ದೆ. ಪ್ರಾಯಶಃ ಯುದ್ಧದಲ್ಲಿ ಗೆಲ್ಲಲು ಇಷ್ಟು ಶ್ರಮಪಟ್ಟಿರಲಾರರು ಎನ್ನಿಸಿತ್ತು. ಪಠ್ಯಪುಸ್ತಕಗಳಲ್ಲಿರುವ ಅವಾಂತರಗಳನ್ನು ನೋಡಿದರೆ ಇದೇ ಪ್ರಕಾರದ ಶ್ರಮದಿಂದ ಕರ್ನಾಟಕ ಸಂಸ್ಕೃತಿಯ ಆರೋಗ್ಯ ಹಾಗೂ ಶ್ರೇಷ್ಠತೆಯ ಒಂದೊಂದೇ ಅಂಶಗಳನ್ನು ಅಗೆದು ತೆಗೆದು, ಸೂಕ್ಷ್ಮದರ್ಶಕದಲ್ಲಿ ಹುಡುಕಿ ತೆಗೆದು ವಿರೂಪಗೊಳಿಸಲಾಗಿದೆ ಅಥವಾ ಅಳಿಸಿಹಾಕಲಾಗಿದೆ. ಇದು ಅತ್ಯಂತ ವ್ಯವಸ್ಥಿತವಾಗಿ ಶ್ರಮ ಹಾಗೂ ಸೈದ್ಧಾಂತಿಕ ಬದ್ಧತೆಯಿಂದ ಮಾಡಿರುವ ನೀಚ ಕೆಲಸವಾಗಿದೆ. ಕರ್ನಾಟಕ ಸಂಸ್ಕೃತಿಯ ಜೀವಂತ ಧಾರೆಗಳಾಗಿರುವ ಸಂತರು, ಭಕ್ತಕವಿಗಳು, ಗುರುಗಳು, ಅನುಭಾವಿಗಳು, ಮಹಿಳೆಯರು, ದಲಿತನಾಯಕರು ಇವರ ಯಾವ ಸಾಂಸ್ಕೃತಿಕ ನೆನಪು ಮಕ್ಕಳಿಗೆ ಉಳಿಯಬಾರದು ಎನ್ನುವ ಹಠದಿಂದ ಇದನ್ನು ಮಾಡಲಾಗಿದೆ. ಹಾಗೆಯೇ ಇಲ್ಲಿ ಒಂದು ಕಾಲದಲ್ಲಿ ಜ್ಞಾನ ಹಾಗೂ ಅನುಭಾವದ ತಾಣಗಳಾಗಿದ್ದ ಮಠಗಳು, ಜನಪರ ಸಮಾಜ ಸುಧಾರಕರಾದ ದಾಸರು, ಸ್ತ್ರೀ ಶಕ್ತಿಯ ಸಾಂಸ್ಕೃತಿಕ ಸಂಕೇತಗಳಾಗಿದ್ದ ಮಹಿಳೆಯರು ಇವರನ್ನು ಪಠ್ಯಗಳಿಂದ ತೆಗೆಯಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರರು ಸಂವಿಧಾನದ ಶಿಲ್ಪಿಗಳಲ್ಲ ಎಂದು ಸಾಧಿಸುವ ಪ್ರಯತ್ನ ಹೊಸದಲ್ಲ. ಅದನ್ನು ಒಂದು ಸಂಘಟನೆ ವರ್ಷಗಳಿಂದ ಮಾಡುತ್ತ ಬಂದಿದೆ. ಅದರ ಭಾಗವಾಗಿ ಸಂವಿಧಾನ ಶಿಲ್ಪಿಯೆನ್ನುವ ಪದಗಳನ್ನು ತೆಗೆಯಲಾಗಿದೆ. ವೀರಶೈವ- ಲಿಂಗಾಯತ ವಿವಾದವು ಮತ್ತೆ ಭುಗಿಲೇಳಬೇಕೆನ್ನುವ ಉದ್ದೇಶದಿಂದ ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವಲ್ಲವೆನ್ನುವ ವಾದವನ್ನು ಒಪ್ಪದವರ ಪರವಾಗಿ ಬಸವಣ್ಣನನ್ನು ಪರಿಚಯಿಸಲಾಗಿದೆ. ಇದನ್ನು ಬರಗೂರು ಸಮಿತಿ ಸೇರಿಸಿದ್ದು ಎನ್ನುವುದು ನಿಜವಾದರೆ ಸಂಕರ-ಶಂಕರ ಪದಗಳನ್ನು ಇಷ್ಟು ವಿವರವಾಗಿ ಚರ್ಚಿಸುವ ಪರಿಷ್ಕರಣ ಸಮಿತಿಯು ಈ ಪರಿಚಯವನ್ನು ಏಕೆ ಗಮನಿಸಲಿಲ್ಲ?

ವಾಲ್ಮೀಕಿಯ ಬಗ್ಗೆ ಬ್ರಾಹ್ಮಣ ಪರವಾಗಿ ತಿದ್ದಲು ಹೊರಟ ಪ್ರಸಿದ್ಧ ಆಚಾರ್ಯರೊಬ್ಬರು ಕೋರ್ಟಿನಲ್ಲಿ ಛೀಮಾರಿ ಹಾಕಿಸಿಕೊಂಡ ಮೇಲೆ ಕೂಡ ಅವನು ಕಳ್ಳರಾಗಿರುವ ಬೇಡರ ಜೊತೆಗೆ ದಾರಿಗಳ್ಳನಾಗಿದ್ದ ಎಂದು ಈ ಸಮಿತಿ ಬರೆದು ಇನ್ನೊಂದು ಜನಾಂಗವನ್ನು ಅವಮಾನಿಸಿದೆ. ಸುರಪುರದ ನಾಯಕರನ್ನು ಜಾತಿ ಕಾರಣಕ್ಕಾಗಿ ಕೈ ಬಿಡಲಾಗಿದೆ. ಇರಲಿ.

ಈಗ ಪ್ರಶ್ನೆಯೆಂದರೆ ಈ ಎಡವಟ್ಟುಗಳಿಂದಾಗಿ ಪಕ್ಷಗಳಲ್ಲಿ ತಿರುಚಲಾದ ಅಥವಾ ಕೈ ಬಿಡಲಾದ ಸಂಗತಿಗಳನ್ನು ಒಂದೆಡೆ ಪಟ್ಟಿ ಮಾಡಿದರೆ ಅದು ಕರ್ನಾಟಕ ಸಂಸ್ಕೃತಿಯ ನಿಜ ಚರಿತ್ರೆಯಾಗುತ್ತದೆ. ಇಂತಹ ಪಠ್ಯಗಳನ್ನು ಶಾಲೆಗಳಲ್ಲಿ ಬೋಧಿಸಿದರೆ ಮುಂಬರುವ ಶತಮಾನಗಳು ಕ್ಷಮಿಸದಂತಹ ಕಳಂಕವನ್ನು ಹೊರಬೇಕಾಗುತ್ತದೆ. ಸಹಸ್ರಾರು ವರ್ಷಗಳ ಶ್ರೀಮಂತ ಸಂಸ್ಕೃತಿಯೊಂದು ತನ್ನನ್ನು ಪಠ್ಯಗಳ ಮೂಲಕ ಅಧಿಕೃತವಾಗಿ ವಿರೂಪಗೊಳಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಂತಾಗುತ್ತದೆ. ಸರಕಾರವು ಆಕ್ಷೇಪಣೆಗಳಿದ್ದರೆ ತಿದ್ದುತ್ತೇವೆ ಎನ್ನುತ್ತಿದೆ. ಇದರ ಅರ್ಥವೆಂದರೆ ಈಗಾಗಲೇ ಪ್ರಕಟವಾಗಿದೆ ಎನ್ನಲಾಗುವ ಪಠ್ಯಪುಸ್ತಕಗಳು ಹಾಗೇ ಇರುತ್ತವೆ. ಯಾವುದನ್ನು ಮರುಪರಿಷ್ಕರಣೆ ಮಾಡಲಾಗುತ್ತದೆಯೋ ಆ ಪುಟಗಳನ್ನು ಕೇವಲ ಶಿಕ್ಷಕರಿಗೆ ಒದಗಿಸಲಾಗುತ್ತದೆ. ಅಂದರೆ ಚಕ್ರತೀರ್ಥ ಸಮಿತಿಯ ಪಠ್ಯಗಳು ಇದ್ದ ಹಾಗೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಇವರ ಕೈಯಲ್ಲಿ ಅಧಿಕೃತವಾಗಿ ಇರುತ್ತವೆ. ಅವು ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದಲ್ಲಿ ಎಲ್ಲರಿಗೂ ಲಭ್ಯವಾಗಿರುತ್ತವೆ. ಮರುಪರಿಷ್ಕರಣೆಯ ಬಿಡಿ ಮುದ್ರಿತ ಹಾಳೆಗಳ ಗತಿ ಏನಾಗುತ್ತದೆಯೆಂದು ಊಹಿಸಬಹುದು. ಹೀಗಾಗಿ ಬಸವೇಶ್ವರರನ್ನು ಕುರಿತು ವಿದ್ಯಾರ್ಥಿಗಳು ಚಕ್ರತೀರ್ಥ ಪಠ್ಯದ ಪರಿಚಯವನ್ನು ಓದುತ್ತಾರೆ. ಪರಿಷ್ಕರಣೆ ಆಯಿತು ಎಂದು ಸಮಾಧಾನ ಪಡುವ ಲಿಂಗಾಯತ ಸಮುದಾಯವು ಇಡೀ ಸಮಾಜದಲ್ಲಿ ನಗೆಪಾಟಲಿಗೆ ಈಡಾಗುತ್ತದೆ. ಪ್ರಾಯಶಃ ಹೀಗಾಗಲಿ ಎನ್ನುವುದೇ ಸರಕಾರದ ಉದ್ದೇಶವಾಗಿರಬಹುದು. ಮುಖ್ಯವಾಗಿ ಹೆಡಗೆವಾರ್ ಅವರ ಬರಹ ಕರ್ನಾಟಕ ಸರಕಾರದ ಅಧಿಕೃತ ಪಠ್ಯದಲ್ಲಿ ಬದಲಾವಣೆ ಇಲ್ಲದೆ ಉಳಿದುಕೊಂಡಿದೆ ಎಂದು ಬೊಮ್ಮಾಯಿಯವರು ಮತ್ತು ಬಲಪಂಥೀಯ ಸಂಘಟನೆಗಳು ಸಂಭ್ರಮಿಸುತ್ತವೆ. ಈ ಕಾರಣಕ್ಕಾಗಿಯೇ ಯಾವುದೇ ಸಂದರ್ಭದಲ್ಲಿ ಪಠ್ಯಪುಸ್ತಕಗಳನ್ನು ವಾಪಸ್ ತೆಗೆದುಕೊಳ್ಳುವುದಿಲ್ಲವೆನ್ನುವ ಹಠವನ್ನು ಸರಕಾರವು ಬಿಡುತ್ತಿಲ್ಲ. ಕರ್ನಾಟಕದ ಬಹುಮುಖಿ ಧಾರ್ಮಿಕ, ಸಾಮಾಜಿಕ, ಅನುಭಾವಿ ಸಾಂಸ್ಕೃತಿಕ ನೆನಪುಗಳ ಮೇಲೆ ಜೆಸಿಬಿ ಓಡಿಸಿರುವ ಈ ಪಠ್ಯಗಳು ಕರ್ನಾಟಕ ಸಂಸ್ಕೃತಿಯ ಚರಿತ್ರೆಯಲ್ಲಿ ಕಂಡಿರುವ ಅತ್ಯಂತ ಅವಮಾನಕರವಾದ ಕಳಂಕಗಳು. ಇವುಗಳನ್ನು ತಕ್ಷಣವೇ ವಾಪಸ್ ಪಡೆಯಲೇಬೇಕೆಂದು ಆಗ್ರಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಮರುಪರಿಷ್ಕರಣೆಯ ತಂತ್ರಗಾರಿಕೆಗೆ ಮೋಸಹೋಗಬಾರದು. ಈ ವರ್ಷ ಹಳೆಯ ಪಠ್ಯಗಳೇ ಮುಂದುವರಿಯಲಿ. ಪಠ್ಯಗಳ ಪರಿಷ್ಕರಣೆ ಹಾಗೂ ರಚನೆಗಾಗಿ ಯಾವುದೇ ಪಕ್ಷದ ನಂಟೇ ಇಲ್ಲದ ಕೇವಲ ಶಿಕ್ಷಣ ತಜ್ಞರ ಶಿಕ್ಷಕರ ಸಮಿತಿಯ ರಚನೆಯಾಗಲಿ ಎಂದು ಆಗ್ರಹಿಸಬೇಕು.

Writer - ರಾಜೇಂದ್ರ ಚೆನ್ನಿ

contributor

Editor - ರಾಜೇಂದ್ರ ಚೆನ್ನಿ

contributor

Similar News