109 ದಿನಗಳ ನಂತರ ದೇಶದಲ್ಲಿ 10 ಸಾವಿರ ತಲುಪಲಿರುವ ದೈನಿಕ ಕೋವಿಡ್ ಪ್ರಕರಣ

Update: 2022-06-16 01:44 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ದೇಶದಲ್ಲಿ 109 ದಿನಗಳಲ್ಲಿ ಇದೇ ಮೊದಲ ಬಾರಿಗೆ ದೈನಿಕ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ 10 ಸಾವಿರ ತಲುಪಲಿದೆ. ಫೆಬ್ರುವರಿ 26ರ ಬಳಿಕ ಇದುವರೆಗೆ ದೈನಿಕ ಪ್ರಕರಣ ಐದಂಕಿ ತಲುಪಿರಲಿಲ್ಲ. ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 4024 ಪ್ರಕರಣಗಳು ಬುಧವಾರ ದಾಖಲಾಗಿವೆ.

ಬುಧವಾರ ತಡರಾತ್ರಿ ವೇಳೆಗೆ 8641 ಹೊಸ ಪ್ರಕರಣಗಳು ವರದಿಯಾಗಿದ್ದು, ಕೆಲವು ರಾಜ್ಯಗಳ ಅಂಕಿ ಅಂಶ ಬರಬೇಕಿದೆ. ಈ ಪೈಕಿ ಕೇರಳ ಕೂಡಾ ಸೇರಿದ್ದು, ಇಲ್ಲಿ ಕಳೆದ ವಾರ ಪ್ರತಿ ದಿನ 1950ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಒಟ್ಟು ದೈನಿಕ ಪ್ರಕರಣಗಳು 10 ಸಾವಿರದ ಗಡಿ ದಾಟುವುದು ನಿಶ್ಚಿತ. ಮಂಗಳವಾರ ದೇಶದಲ್ಲಿ 8828 ಪ್ರಕರಣಗಳು ವರದಿಯಾಗಿದ್ದವು.

ಮಹಾರಾಷ್ಟ್ರದಲ್ಲಿ ಫೆಬ್ರವರಿ 12ರ ಬಳಿಕ ಇದೇ ಮೊದಲ ಬಾರಿಗೆ ಪ್ರಕರಣಗಳ ಸಂಖ್ಯೆ ನಾಲ್ಕು ಸಾವಿರದ ಗಡಿ ದಾಟಿದೆ. ಮುಂಬೈನಲ್ಲೇ 2293 ಪ್ರಕರಣಗಳು ವರದಿಯಾಗಿವೆ. ಇದು 143 ದಿನಗಳ ಗರಿಷ್ಠ ಸಂಖ್ಯೆಯಾಗಿದೆ. ರಾಜ್ಯದಲ್ಲಿ ಒಮೈಕ್ರಾನ್ ಬಿಎ.5 ಉಪಪ್ರಬೇಧದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಬಿಎ.4 ಮತ್ತು ಬಿಎ.5 ಸೋಂಕಿತರ ಒಟ್ಟು ಸಂಖ್ಯೆ 19ಕ್ಕೇರಿದೆ.

ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ 648 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ಫೆಬ್ರವರಿ 23ರ ಬಳಿಕ ವರದಿಯಾದ ಗರಿಷ್ಠ ಸಂಖ್ಯೆಯಾಗಿದೆ.

ತಮಿಳುನಾಡಿನ ಸಂಖ್ಯೆ ಶೇಕಡ 43ರಷ್ಟು ಏರಿಕೆಯಾಗಿ 476 ಆಗಿದೆ. ಇದು ಕೂಡಾ ಫೆಬ್ರುವರಿ 26ರ ಬಳಿಕ ಗರಿಷ್ಠ ಸಂಖ್ಯೆಯಾಗಿದೆ. ದೆಹಲಿಯಲ್ಲಿ ಬುಧವಾರ 1375 ಹೊಸ ಪ್ರಕರಣಗಳು ವರದಿಯಾಗಿದ್ದು, ಹರ್ಯಾಣದಲ್ಲಿ 596, ಉತ್ತರ ಪ್ರದೇಶದಲ್ಲಿ 318 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News