ಸರಕಾರದಿಂದ ಕೋವಿಡ್ ಅನುದಾನದ 25 ಲಕ್ಷ ರೂ. ದುರ್ಬಳಕೆ?

Update: 2022-06-16 03:54 GMT

ಬೆಂಗಳೂರು:  ಶಿವಮೊಗ್ಗದಲ್ಲಿ ಕೆಲ ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ  ಬಜರಂಗದಳ ಕಾರ್ಯಕರ್ತ  ಶಿವಮೊಗ್ಗದ ಹರ್ಷ ಎಂಬಾತನ ಕುಟುಂಬ ಸದಸ್ಯರಿಗೆ ಕೋವಿಡ್-19

ರಡಿ ಲಭ್ಯವಿದ್ದ ಅನುದಾನದಲ್ಲಿಯೇ ತುರ್ತಾಗಿ 25 ಲಕ್ಷ ರೂ. ಮೊತ್ತದ ಪರಿಹಾರವನ್ನು ವಿತರಿಸಲು ರಾಜ್ಯ ಸರಕಾರ  ನಿರ್ದೇಶಿಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

ಕಡು ಬಡವರಿಗೆ, ಅನಾರೋಗ್ಯಪೀಡಿತ ಬಿಪಿಎಲ್ ಪಡಿತರ ಚೀಟಿದಾರರಿಗೆ, ವಿಕಲ ಚೇತನರಿಗೆ, ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುತ್ತಿದ್ದ ರಾಜ್ಯ ಸರಕಾರವು  ಇದೇ ಮೊದಲ ಬಾರಿಗೆ ಕ್ರಿಮಿನಲ್ ಆರೋಪಗಳ ಹಿನ್ನೆಲೆ ಹೊಂದಿದ್ದ ಹರ್ಷ ಎಂಬಾತನ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿಯ ವಿವೇಚನ ಅಧಿಕಾರವು ದುರ್ಬಳಕೆ ಆಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದ ಬೆನ್ನಲ್ಲೇ ಕೋವಿಡ್-೧೯ರ ಅಡಿ ಲಭ್ಯವಿದ್ದ ಅನುದಾನವನ್ನು ಬಳಸಿಕೊಂಡು ತುರ್ತಾಗಿ 25 ಲಕ್ಷ ರೂ. ನೀಡಲಾಗಿತ್ತು
ಎಂಬ ಮಾಹಿತಿಯು ಮುನ್ನೆಲೆಗೆ ಬಂದಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಹರ್ಷ ಕುಟುಂಬ ಸದಸ್ಯರಿಗೆ  ಮಂಜೂರಾಗಿತ್ತಾದರೂ ಈ ಹಣವು ಜಿಲ್ಲಾಧಿಕಾರಿಯ ಮುಖ್ಯಮಂತ್ರಿ ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಆಗಿರಲಿಲ್ಲ ಎಂಬ ಸಂಗತಿ ತಿಳಿದು ಬಂದಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ''the-file.in''ಗೆ ಖಚಿತಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ 2022ರ ಮಾರ್ಚ್ 10ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು ಎಂದು ಗೊತ್ತಾಗಿದೆ.

ಹರ್ಷನ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿ ಖಾತೆ (ಸಂಖ್ಯೆ; 38587794605)ಯಿಂದ 25 ಲಕ್ಷ ರೂ. ಪರಿಹಾರ ವಿತರಿಸಿ ಸ್ವೀಕೃತಿ ಪಡೆದು ಮುಖ್ಯಮಂತ್ರಿಯ ಪರಿಹಾರ ನಿಧಿ ಶಾಖೆಗೆ ಒದಗಿಸಬೇಕು ಎಂದು ಮುಖ್ಯಮಂತ್ರಿಯ ಜಂಟಿ ಕಾರ್ಯದರ್ಶಿ ಸೂಚಿಸಿದ್ದರು. ಆದರೆ, ಈ ಪರಿಹಾರದ ಮೊತ್ತವು ಶಿವಮೊಗ್ಗ ಜಿಲ್ಲಾಧಿಕಾರಿಯ, ಮುಖ್ಯಮಂತ್ರಿಯ ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಆಗಿರಲಿಲ್ಲ ಎಂಬುದು ತಿಳಿದು ಬಂದಿದೆ.

‘ಮೃತರ ಕುಟುಂಬಕ್ಕೆ ತುರ್ತಾಗಿ ಪರಿಹಾರಧನ ವಿತರಣೆ ಮಾಡಬೇಕಾಗಿರುವುದರಿಂದ ಕೋವಿಡ್-೧೯ ರಡಿ ತಹಶೀಲ್ದಾರ್ ಶಿವಮೊಗ್ಗ ಇವರಲ್ಲಿ ಲಭ್ಯವಿರುವ ಅನುದಾನದಲ್ಲಿ ಮೃತ ಹರ್ಷ ಕುಟುಂಬ ವಾರಸುದಾರರಿಗೆ 25 ಲಕ್ಷ ರೂ. ಪರಿಹಾರ ವಿತರಿಸಬೇಕು. ಈ ಪರಿಹಾರ ಮೊತ್ತವು ಜಿಲ್ಲಾಧಿಕಾರಿಯ ಮುಖ್ಯಮಂತ್ರಿಯ ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಆದ ಕೂಡಲೇ ಈ ಮೊತ್ತವನ್ನು ಮರು ಹಂಚಿಕೆ ಮಾಡಬೇಕು’ ಎಂದು ನಿರ್ದೇಶನ ನೀಡಲಾಗಿತ್ತು ಎಂಬುದು ಗೊತ್ತಾಗಿದೆ.

ಈ ಪ್ರಕ್ರಿಯೆ ಆದ ನಂತರ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ೨೫ ಲಕ್ಷ ರೂ. ಅನುದಾನವು ಜಿಲ್ಲಾಧಿಕಾರಿಯ ಉಳಿತಾಯ ಖಾತೆಗೆ ಜಮಾ ಆಗಿದ್ದರಿಂದ 25 ಲಕ್ಷ ರೂ.ಗಳನ್ನು ಶಿವಮೊಗ್ಗ ತಹಶೀಲ್ದಾರ್ ಅವರಿಗೆ ಬಿಡುಗಡೆ ಮಾಡಲು ಅನುಮೋದಿಸಲಾಗಿತ್ತು ಎಂಬುದು ತಿಳಿದುಬಂದಿದೆ.

ಕೆಲ ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಬಿಚ್ಚುಗತ್ತಿ ಮಾರಮ್ಮ ದೇಗುಲದಲ್ಲಿ ನೀಡಿದ್ದ ಪ್ರಸಾದ ಸೇವನೆಯಿಂದ ಸಾವೀಗೀಡಾಗಿದ್ದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂ. ಮತ್ತು ಮಂಡ್ಯ ಜಿಲ್ಲೆಯಲ್ಲಿನ ನಾಲೆಯೊಂದಕ್ಕೆ  ಬಸ್ ಉರುಳಿದ್ದರಿಂದಾಗಿ ಮೃತಪಟ್ಟಿದ್ದವರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂ.ನಂತೆ ಪರಿಹಾರದ ಮೊತ್ತವನ್ನು ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ಭರಿಸಲಾಗಿತ್ತು. ಈ ಅವಧಿಯಲ್ಲಿ
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.

ಸಾರ್ವಜನಿಕರು, ಸಂಘ ಸಂಸ್ಥೆಗಳು, ನಿಗಮ, ಮಂಡಳಿಗಳು, ಕಾರ್ಪೋರೇಷನ್‌ಗಳು  ಮುಖ್ಯಮಂತ್ರಿಯ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿವೆ. ಈ ಹಣವನ್ನು ಸನ್ನಿವೇಶ, ಕುಟುಂಬದ ತೀವ್ರತೆ, ದುಡಿಯುವ ವ್ಯಕ್ತಿ ಮೃತಪಟ್ಟಲ್ಲಿ, ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದಲೇ ಭರಿಸಲಾಗುತ್ತಿದೆ. ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗೆ ಕನಿಷ್ಠ 10ರಿಂದ 25 ಲಕ್ಷ ರೂ.ವರೆಗೂ ಪರಿಹಾರವನ್ನು ಇದೇ ನಿಧಿಯಿಂದಲೇ ನೀಡಲಾಗುತ್ತಿದೆ.

ಮುಖ್ಯಮಂತ್ರಿಯ ಪರಿಹಾರ ನಿಧಿಯಲ್ಲಿರುವ ಮೊತ್ತವನ್ನು ಬಾಧಿತರಿಗೆ ಮಂಜೂರು ಮಾಡುವ ಅಧಿಕಾರ ಮುಖ್ಯಮಂತ್ರಿಯ ವಿವೇಚನೆಗೆ ಬಿಡಲಾಗಿದ್ದರೂ ಹಿಂದಿನ ಯಾವ ಮುಖ್ಯಮಂತ್ರಿಗಳೂ, ಹತ್ಯೆಗೀಡಾಗಿರುವ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಿರಲಿಲ್ಲ. ಆದರೆ ರಾಜ್ಯ ಬಿಜೆಪಿ ಸರಕಾರವು ಮುಖ್ಯಮಂತ್ರಿಯ ವಿವೇಚನಾ ಅಧಿಕಾರ ಬಳಸಿಕೊಂಡು 25 ಲಕ್ಷ ರೂ. ಮೊತ್ತದ ಚೆಕ್ ನೀಡುವ  ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News