"ಧ್ವಂಸ ಕಾರ್ಯಾಚರಣೆ ಕಾನೂನುಬದ್ಧವಾಗಿರಬೇಕೆ ಹೊರತು ಪ್ರತೀಕಾರಾತ್ಮಕವಾಗಿರಬಾರದು"

Update: 2022-06-16 08:35 GMT

ಹೊಸದಿಲ್ಲಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆನ್ನಲಾದ  ಆರೋಪಿಗಳ ಮನೆಗಳನ್ನು  ಧ್ವಂಸಗೊಳಿಸಿರುವ ಕುರಿತು ಸುಪ್ರೀಂ ಕೋರ್ಟ್ ಗುರುವಾರ  ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು,"ಧ್ವಂಸ ಕಾರ್ಯಾಚರಣೆಯು ಕಾನೂನು ಬದ್ಧವಾಗಿರಬೇಕೇ ಹೊರತು ಪ್ರತೀಕಾರಾತ್ಮಕವಾಗಿರಬಾರದು" ಎಂದು ಹೇಳಿದೆ.

ಆದಾಗ್ಯೂ, ಸುಪ್ರಿಂ ಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ  ಕಟ್ಟಡವನ್ನು ನೆಲಸಮ ಮಾಡುವುದನ್ನು ನಿಲ್ಲಿಸುವಂತೆ ಆದೇಶಿಸಲಿಲ್ಲ.

"ನಾವು ಕಟ್ಟಡ ಧ್ವಂಸ ಪ್ರಕ್ರಿಯೆಯನ್ನು  ತಡೆಹಿಡಿಯಲು ಸಾಧ್ಯವಿಲ್ಲ. ನಾವು ಕಾನೂನಿನ ಪ್ರಕಾರ ಹೋಗಿ ಎಂದು ಹೇಳಬಹುದಷ್ಟೇ" ಎಂದು ನ್ಯಾಯಾಲಯ ಹೇಳಿದೆ.

ಜಮಿಯತ್ ಉಲಮಾ-ಇ-ಹಿಂದ್ ಎಂಬ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಮನೆಗಳ "ಅಕ್ರಮ" ಧ್ವಂಸಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದೆ.

ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಬೇರೆ ಯಾವುದೇ ಕಟ್ಟಡ ಧ್ವಂಸಗೊಳಿಸದಂತೆ ನೋಡಿಕೊಳ್ಳಲು ನ್ಯಾಯಾಲಯವು ಉತ್ತರ ಸರಕಾರಕ್ಕೆ  ಸೂಚಿಸಬೇಕೆಂದು  ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ನೆಲಸಮಗಳು "ಆಘಾತಕಾರಿ ಹಾಗೂ  ಭಯಾನಕ" ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.  ಮನೆಗಳನ್ನು ನೆಲಸಮಗೊಳಿಸಿದ ನಂತರ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಆರೋಪಿಸಿದರು.

ಕಾನೂನನ್ನು ಅನುಸರಿಸಲಾಗಿದೆ ಎಂದು ಉತ್ತರಪ್ರದೇಶ ಸರಕಾರ  ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News