ಅಗ್ನಿಪಥ್‌ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ: 12 ರೈಲುಗಳಿಗೆ ಬೆಂಕಿ, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ

Update: 2022-06-17 13:08 GMT
Photo: Twitter

ಹೊಸದಿಲ್ಲಿ: ಹೊಸ ಸೇನಾ ನೇಮಕಾತಿ ನೀತಿ ಅಗ್ನಿಪಥ್‌ ವಿರುದ್ಧ ಹಲವು ರಾಜ್ಯಗಳಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಪ್ರತಿಭಟನೆ ತೀವ್ರ ಹಿಂಸಾಚಾರ ಸ್ವರೂಪ ಪಡೆದುಕೊಂಡಿದೆ. ಉದ್ರಿಕ್ತ ಯುವಕರು ರೈಲುಗಳಿಗೆ ಬೆಂಕಿ ಹಚ್ಚಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ ಕನಿಷ್ಠ ಒಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಅದಾಗ್ಯೂ ಕೇಂದ್ರ ಸರ್ಕಾರವು ಯೋಜನೆಯನ್ನು ಸಮರ್ಥಿಸಿಕೊಂಡಿದ್ದು, ಇದನ್ನು "ಪರಿವರ್ತನೆ" ಎಂದು ಕರೆದಿದೆ.

 ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಇಂದು ಬೆಳಗ್ಗೆ ರೈಲ್ವೇ ನಿಲ್ದಾಣಕ್ಕೆ ನುಗ್ಗಿದ ಜನಸಮೂಹವು ರೈಲು ಕೋಚ್‌ಗೆ ಬೆಂಕಿ ಹಚ್ಚಿದೆ.ಅಲ್ಲದೆ, ರೈಲ್ವೆ ನಿಲ್ದಾಣದ ಆಸ್ತಿಯನ್ನು ಹಾನಿಗೊಳಿಸಲಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ್ದಾರೆಂದು ವರದಿಯಾಗಿದೆ. ರಾಜ್ಯದ ವಾರಣಾಸಿ, ಫಿರೋಜಾಬಾದ್ ಮತ್ತು ಅಮೇಠಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಸರ್ಕಾರಿ ಬಸ್‌ಗಳು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ. ಅಲಿಗಢದಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಕಾರಿಗೆ ಬೆಂಕಿ ಹಚ್ಚಲಾಗಿದೆ.

ಕನಿಷ್ಠ 12 ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು 150 ಕ್ಕೂ ಹೆಚ್ಚು ಇತರ ರೈಲುಗಳ ಮೇಲೆ ಪ್ರತಿಭಟನೆಯ ಕೆಟ್ಟ ಪರಿಣಾಮ ಬೀರಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ 110 ರೈಲುಗಳನ್ನು ರದ್ದುಗೊಳಿಸಲಾಗಿದ್ದರೆ, 47 ರೈಲುಗಳು ತಮ್ಮ ಗಮ್ಯಸ್ಥಾನಗಳಿಗೆ ತಲುಪಲಿಲ್ಲ ಎಂದು ರೈಲ್ವೇ ಮೂಲಗಳು ತಿಳಿಸಿದೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಮತ್ತು ರೈಲ್ವೇಯ ಆಸ್ತಿಗೆ ಹಾನಿ ಮಾಡದಂತೆ ಯುವಕರಲ್ಲಿ ನಾನು ಮನವಿ ಮಾಡುತ್ತೇನೆ, ರೈಲ್ವೇ ದೇಶದ ಆಸ್ತಿ ಎಂದಿದ್ದಾರೆ.

ತೆಲಂಗಾಣದ ಸಿಕಂದರಾಬಾದ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ndtv ವರದಿ ಮಾಡಿದೆ. ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶದಂತಹ ಹಲವಾರು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಸೇನಾ ನೇಮಕಾತಿ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿದೆ.

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾದಲ್ಲಿ ಉಪಮುಖ್ಯಮಂತ್ರಿ ರೇಣು ದೇವಿ ಅವರ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.  "ಇಂತಹ ಹಿಂಸಾಚಾರವು ಸಮಾಜಕ್ಕೆ ತುಂಬಾ ಅಪಾಯಕಾರಿ. ಇದು ಸಮಾಜಕ್ಕೆ ನಷ್ಟವಾಗಿದೆ ಎಂಬುದನ್ನು ಪ್ರತಿಭಟನಾಕಾರರು ನೆನಪಿಟ್ಟುಕೊಳ್ಳಬೇಕು" ಎಂದು ಪ್ರಸ್ತುತ ಪಾಟ್ನಾದಲ್ಲಿರುವ ರೇಣು ದೇವಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News