ಗಾಂಧಿ ಸಂವೇದನೆಗೆ ಮಿಡಿದ ಕತೆಗಳು

Update: 2022-06-18 05:48 GMT

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿರುವ ಮೂರು ಕೃತಿಗಳಾದ ವಿವಿಧ ಲೇಖಕರು ಬರೆದ ‘ಮತ್ತೊಂದು ರಾತ್ರಿ’(ಅನು: ನಲ್ಲತಂಬಿ, ಅಭಿರುಚಿ ಪ್ರಕಾಶನ), ಪಾವಣ್ಣನ್‌ರ ‘ಬಾಪೂ ಹೆಜ್ಜೆಗಳಲ್ಲಿ’ (ಅನು: ನಲ್ಲತಂಬಿ, ಪಲ್ಲವ ಪ್ರಕಾಶನ) ಮತ್ತು ಜಾನಕಿರಾಮನ್‌ರ ‘ಗುಡಿಗಂಟೆ-ಇತರ ಕತೆಗಳು’ (ಅನು: ನಲ್ಲತಂಬಿ, ಲಡಾಯಿ ಪ್ರಕಾಶನ) ಪುಸ್ತಕಗಳಲ್ಲಿ ಗಾಂಧಿ ಸುತ್ತ ಹೆಣೆದ ಕತೆಗಳ ಕುರಿತು ಜಿ.ಪಿ.ಬಸವರಾಜು ಅವರು ಬರೆದ ಪರಿಚಯಾತ್ಮಕ ಬರಹ ಇಲ್ಲಿದೆ.

ಜಗತ್ತಿನಾದ್ಯಂತ ಹಿಂಸೆಯೇ ಬೆತ್ತಲೆ ಕುಣಿಯುತ್ತಿರುವಾಗ ಗಾಂಧಿ ಎನ್ನುವ ನೆನಪು ಮಹಾವ್ಯಂಗ್ಯದಂತೆ ಕಾಣಿಸಬಹುದು. ಆದರೆ ಹಿಂಸೆಯಿಂದ ನೋಯುವ, ಬೇಯುವವರಿಗೆ, ಹಿಂಸೆಯಿಂದ ಹೊರದಾರಿಯೇ ಇಲ್ಲವೇ ಎಂದು ಪರಿತಪಿಸುವವರಿಗೆ ಗಾಂಧಿಯ ನೆನಪು ದೊಡ್ಡ ಸಮಾಧಾನ; ಬಿರುಬೇಸಿಗೆಯಲ್ಲಿನ ತಣ್ಣನೆಯ ನೀರು. ಗಾಂಧಿ ಎಂದರೆ ಏನು? ಗಾಂಧಿ ಸಾಮಾನ್ಯರು ಯಾರೂ ಏರಲಾರದ ಮಹಾನ್ ಪರ್ವತವೇ? ಎಲ್ಲರ ಮೇಲೆ ಬೀಸುವ ತಣ್ಣನೆಯ ಗಾಳಿಯೇ? ಅದೊಂದು ಸರಳತೆಯೇ, ನಿಷ್ಠುರ ವ್ರತವೇ, ಕದಲಿಸಲಾಗದ ನಂಬಿಕೆಯೇ? ದೂರದ ನಕ್ಷತ್ರವೇ, ಕಗ್ಗತ್ತಲೆಯಲ್ಲಿನ ಒಂದು ಬೆಳಕಿನ ದೊಂದಿಯೇ?

ತಮಿಳಿನಿಂದ ಕನ್ನಡಕ್ಕೆ ಇದೀಗ ಅನುವಾದಗೊಂಡಿರುವ ಕತೆಗಳ ಸಂಕಲನ- ‘ಮತ್ತೊಂದು ರಾತ್ರಿ.. ಮಹಾತ್ಮನ ನೆನಪಿನ ಕತೆಗಳು’-ಓದುವಾಗ ಈ ಎಲ್ಲ ಅನಿಸಿಕೆಗಳೂ ಸುಳಿದುಹೋಗುತ್ತವೆ.

ಗಾಂಧಿಯನ್ನು ಹೊರಗೆಲ್ಲಿಯೂ ಹುಡುಕಬೇಕಾಗಿಲ್ಲ. ತಮ್ಮಳಗೆ ನೋಡಿಕೊಳ್ಳುವ ಎಲ್ಲರಿಗೂ ಗಾಂಧಿ ಕಾಣಬಹುದು. ಗಾಂಧಿಯ ಜೊತೆ ಮಾತನಾಡಲು ಭಾಷೆಯೇ ಬೇಡ, ಅದು ಹೃದಯಸಂವಾದ. ಸುಳ್ಳಿಗೆ ಎದುರಾಗಿ ನಿಂತ ಸತ್ಯ ಗಾಂಧಿ, ಸಾಮಾನ್ಯರ ಬದುಕಿನಲ್ಲಿ, ನಂಬಿಕೆಯಲ್ಲಿ, ನಿತ್ಯದ ಕಾಯಕದಲ್ಲಿ ಗಾಂಧಿ ಇದ್ದಾರೆ- ಎಂಬ ಅರಿವೂ ಈ ಕತೆಗಳ ಒಡಲಲ್ಲಿದೆ.

ಚರಿತ್ರೆ, ವರ್ತಮಾನ, ಕಲ್ಪನೆ, ರಾಜಕೀಯ, ಅಧ್ಯಾತ್ಮ, ಆಧುನಿಕ, ಪುರಾತನ ಹೀಗೆ ಎಲ್ಲವನ್ನೂ ಬೆರೆಸಿ, ಕಲೆಗಾರಿಕೆಯ ಕೌಶಲಗಳಲ್ಲಿ ಕಥೆಯನ್ನು ಅರಳಿಸಿರುವ ಕತೆಗಳು ಇಲ್ಲಿ ಗಮನ ಸೆಳೆಯುತ್ತವೆ.

ಗಾಂಧಿ ತೀರಿಹೋಗಿ 75 ವರ್ಷಗಳು ಆಗುತ್ತ ಬಂದಿದ್ದರೂ ಗಾಂಧಿ ಈಗಲೂ ಎಷ್ಟೊಂದು ಸಂವೇದನಾಶೀಲರನ್ನು ಕಾಡುತ್ತಿದ್ದಾರೆ ಎಂಬ ಸತ್ಯವನ್ನೂ ಈ ಸಂಕಲನ ತೋರಿಸುತ್ತದೆ. ಇಲ್ಲಿನ ಕತೆಗಾರರು ಗಾಂಧಿ ಸತ್ತನಂತರ ಹುಟ್ಟಿದವರು; ಗಾಂಧಿಯ ಮುಂದಿನ ತಲೆಮಾರಿನವರು. ತೀರಾ ಕುತೂಹಲಕರ ರೀತಿಯಲ್ಲಿ ಸೃಜನಾತ್ಮಕವಾಗಿ ಗಾಂಧಿಯನ್ನು ಗ್ರಹಿಸಲು ನೋಡಿದವರು.

ಇಲ್ಲಿ ಗಾಂಧಿಯನ್ನು ಎರಡುಮಜಲುಗಳಲ್ಲಿ ಗ್ರಹಿಸಲು ಯತ್ನಿಸಲಾಗಿದೆ. ಮೊದಲನೆಯ ಮಜಲು-ಸ್ವಾತಂತ್ರ್ಯಪೂರ್ವದ್ದು. ಗಾಂಧಿ ಪ್ರಭಾವಕ್ಕೆ ಸಿಕ್ಕವರು, ಗಾಂಧಿ ತತ್ವಗಳಲ್ಲಿ ನಂಬಿಕೆ ಇಟ್ಟವರು, ಗಾಂಧಿ ಮಾತಿಗೆ ಮಣಿದು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಮತ್ತು ಗಾಂಧಿ ತತ್ವಗಳ ಆಧಾರದಲ್ಲಿಯೇ ಬದುಕಲು ಹವಣಿಸಿದವರು-ಇದೆಲ್ಲವನ್ನು ಕಟ್ಟಿಕೊಡುವ ಪ್ರಯತ್ನವೇ ಗಾಂಧಿಯನ್ನು ಮತ್ತು ಆಗಿನ ಭಾರತವನ್ನು ಕಾಣುವ ಪ್ರಯತ್ನ. ಮುಂದಿನ ಮಜಲು-ಸ್ವಾತಂತ್ರ್ಯ ಸಿಕ್ಕ ಮಜಲು. ಭಾರತದ ಬಿಡುಗಡೆಯೇ ವಿಭಜನೆಗೂ ಕಾರಣವಾಗಿ ಅದು ಕೋಮು ದ್ವೇಷ ಉರಿದ ಕಾಲ; ಅತ್ಯಾಚಾರ, ಕೊಲೆ, ರಕ್ತಹರಿಸುವ ನೂರಾರು ಕೃತ್ಯಗಳು- ಹೀಗೆ ಹಿಂಸೆ ಮೆರೆದ ಕಾಲಘಟ್ಟ. ಈ ಕಾಲಘಟ್ಟದಲ್ಲಿ ಗಾಂಧಿಯನ್ನು ಹುಡುಕುವುದೆಂದರೆ ಇವೆಲ್ಲವನ್ನು ಹಾದುಹೋಗುವುದು ಅನಿವಾರ್ಯ.

ಕತೆಗಾರ ಒಬ್ಬ ಸೂಕ್ಷ್ಮ್ಮಸಂವೇದನೆಯ ಕಲಾವಿದನೂ ಆಗಿರುವ ಕಾರಣ ಬದುಕು, ತತ್ವ, ವಿಚಾರಗಳನ್ನು ಕಟ್ಟಿಕೊಡುವಾಗ ತಂತ್ರಕೌಶಲ, ಕಲಾವಂತಿಕೆ, ಭಾಷೆಯ ಬಳಕೆ ಎಲ್ಲದನ್ನೂ ಸಮರ್ಥವಾಗಿ ಬಳಸಬೇಕಾಗುತ್ತದೆ. ಈ ಸಂಕಲನದ ಕತೆಗಾರರು ಇಂತಹ ಪ್ರಬುದ್ಧತೆಯನ್ನು ತೋರಿಸಿರುವುದು ಗಮನಾರ್ಹವಾಗಿದೆ.

ಪಾಂಡವರ ಸ್ವರ್ಗಾರೋಹಣವನ್ನು ಗಾಂಧಿಯ ಸ್ವರ್ಗಾರೋಹಣವಾಗಿ ಬಳಸಿಕೊಂಡಿರುವ ಸುನಿಲ್ ಕೃಷ್ಣನ್, ‘‘ಸ್ವರ್ಗದಲ್ಲಿ ನನಗೆ ಮಾಡಲು ಏನೂ ಕೆಲಸವಿಲ್ಲ, ನನ್ನ ಕೆಲಸವೇನಿದ್ದರೂ ನರಕದಲ್ಲಿ ಹಿಂಸೆ ಅನುಭವಿಸುವವರ ಜೊತೆಯಲ್ಲಿ, ಅಲ್ಲಿಯೇ ನನ್ನ ಕೆಲಸ’’- ಎಂದು ಸ್ವರ್ಗವನ್ನು ನಿರಾಕರಿಸುವ ಗಾಂಧಿಯನ್ನು, ಅವರ ಬದುಕಿನ ಘನ ಉದ್ದೇಶವನ್ನು ಹಿಡಿಯಲು ನೋಡುತ್ತಾರೆ.

ಸಿ. ಸರವಣ ಕಾರ್ತಿಕೇಯನ್ ಅವರು ತಮ್ಮ ‘ನಾಲ್ಕನೆಯ ಗುಂಡು’ ಕತೆಯಲ್ಲಿ ಗಾಂಧೀಜಿಯನ್ನು ಕೊಲೆಮಾಡಿದ ಗೋಡ್ಸೆಯ ಹಿಂದೆ ಇರಬಹುದಾದ ಗುಪ್ತ ಕೊಲೆಗಾರರನ್ನು, ಕೊಲೆಯ ಸಂಚನ್ನು ಮತ್ತು ಗಾಂಧಿಯನ್ನು ಒಪ್ಪದ ಮನೋಧರ್ಮವನ್ನು, ರಾಜಕೀಯ ತಂತ್ರಗಾರಿಕೆಯನ್ನು ಗುರುತಿಸುತ್ತಾರೆ. ಹಾಗೆಯೇ ಸ್ವತಂತ್ರಭಾರತದ ಆಡಳಿತಯಂತ್ರ, ಪೊಲೀಸ್ ವ್ಯವಸ್ಥೆ ಎಲ್ಲದರ ಮೇಲೆ ಈ ಕತೆ ಬೆಳಕು ಚೆಲ್ಲುತ್ತದೆ. 125 ವರ್ಷಗಳ ಕಾಲ ಬದುಕಲು ಬಯಸಿದ್ದ ಗಾಂಧಿ ಬದುಕಿನ ಎಲ್ಲ ದುಷ್ಟಮುಖಗಳನ್ನು ನೋಡಿ ಬೇಸತ್ತು, ಕತ್ತಲಲ್ಲಿ ಬದುಕುವ ಇಚ್ಛೆ ನನಗಿಲ್ಲ ಎಂದು ಹೇಳಿ ಮರಣಕ್ಕೆ ಸಿದ್ಧವಾದ ಸ್ಥಿತಿಯನ್ನು ಈ ಕತೆ ಸೂಕ್ಷ್ಮವಾಗಿ ಕಾಣಿಸುತ್ತದೆ.

 ತಾಯಿಯ ಮೂಲಕ ಗಾಂಧೀಜಿಯನ್ನು ನೋಡುವ, ಗಾಂಧಿಯ ಅನುಯಾಯಿಯ ಮೂಲಕ ಗಾಂಧಿ ಪ್ರಭಾವವನ್ನು ವಿಶ್ಲೇಷಿಸುವ (ಎಸ್.ರಾಮಕೃಷ್ಣನ್) ಕತೆಗಳು, ಅಧ್ಯಾತ್ಮ ತಮಗೆ ತಿಳಿಯದೆಂದು ಹೇಳುವ ಗಾಂಧಿ, ಅಲೆಮಾರಿ ಬೈರಾಗಿಗಳ ಜೀವನ ವಿಧಾನವನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಆದರೂ ಬೈರಾಗಿಯೊಬ್ಬ ಹೇಳುವ ಮಾತುಗಳನ್ನು ಶ್ರದ್ಧೆಯಿಂದ ಕೇಳಿ, ಅದರಲ್ಲಿರುವ ಉತ್ತಮಾಂಶಗಳನ್ನು ತೆಗೆದುಕೊಂಡು, ಜೇಡಿ ಮಣ್ಣು ಮತ್ತು ತಣ್ಣೀರಿನ ಚಿಕಿತ್ಸೆಗೆ ಮುಂದಾಗುತ್ತಾರೆ. (ನೀರೂ ಬೆಂಕಿಯೂ). ಮನಸ್ಸನ್ನು ಪೂರ್ಣವಾಗಿ ತೊಡಗಿಸದೆ ಕೆಲಸಮಾಡಿದರೆ, ದೇಹ ಮತ್ತು ಮನಸ್ಸುಗಳ ಸಮತೋಲ ಹೇಗೆ ತಪ್ಪುತ್ತದೆ. ಬೆರಳು-ಚರಕಗಳಲ್ಲಿ ಹೊಂದಾಣಿಕೆಯಿಲ್ಲದೆ ದಾರ ಹೇಗೆ ಮೇಲಿಂದ ಮೇಲೆ ತುಂಡಾಗುತ್ತದೆ ಎಂಬುದನ್ನು ತೋರಿಸುವ ‘ನುಣುಪಾದ ದಾರ’ ಕತೆ (ಈ ಎರಡೂ ಕತೆಗಳು ಬಿ. ಜಯಮೋಹನ್ ಅವರವು) ಎಷ್ಟು ನವಿರಾಗಿದೆ. ಚರಿತ್ರೆಯಲ್ಲಿ ಮರೆಯಾಗಿ ಹೋಗಿರುವ ಅಯ್ಯನ್ ಕಾಳಿ ಮತ್ತು ಅವನ ತಂಡ ಗಾಂಧಿಗೆ ಮುಖಾಮುಖಿಯಾಗುವುದು, ಗಾಂಧಿ ತಾವು ನಂಬಿದ ಅಹಿಂಸೆ-ಧರ್ಮಗಳೇ ಹೋರಾಟದ ಮಾರ್ಗಗಳು, ನ್ಯಾಯ-ನೀತಿ ಹೋರಾಟದ ಅಸ್ತ್ರಗಳು ಎಂದು ಅಯ್ಯನ್ ಕಾಳಿಗೆ ಮನವರಿಕೆ ಮಾಡಿಕೊಡುವುದು ಎದೆಮಿಡಿಯುವಂತಿದೆ. ಅಯ್ಯನ್ ಕಾಳಿ ಹೆಚ್ಚು ಮಾತಾಡದಿದ್ದರೂ ಗಾಂಧಿಯನ್ನು ಅರ್ಥಮಾಡಿಕೊಂಡಂತೆ ತನ್ನ ಕೋಲನ್ನು ಅಲ್ಲಿಯೇ ಬಿಟ್ಟು ಖಾಲಿಕೈಯಲ್ಲಿ ಹೊರಟುಹೋಗುವುದು, ಅವನ ತಂಡದಲ್ಲಿನ ಅನೇಕರು ಇದೇ ರೀತಿ ತಮ್ಮ ಕೋಲುಗಳನ್ನು ಬಿಟ್ಟುಹೋಗುವುದು ಬಹಳ ಸೂಕ್ಷ್ಮ ಕಲೆಗಾರಿಕೆಯಾಗಿದೆ.

 ಗಾಂಧೀಜಿಯ ಬದುಕಿನ ಕೊನೆಯ ದಿನವನ್ನು ಟಾಲ್‌ಸ್ಟಾಯ್ ಅವರ ಕೊನೆಯ ಪಯಣದೊಂದಿಗೆ ಸಮೀಕರಿಸುತ್ತ, ಭ್ರಾಮಕ ಪ್ರಪಂಚವನ್ನು ಸೃಷ್ಟಿಸುವ ದೇವಿ ಭಾರತಿ ಅವರ ಕಥೆ- ‘ಮತ್ತೊಂದು ರಾತ್ರಿ’. ಭ್ರಾಮಕ ಜಗತ್ತನ್ನು ಕಟ್ಟುತ್ತಲೇ ಕಠೋರ ವಾಸ್ತವಗಳನ್ನು, ನಕಲಿ ಗಾಂಧಿಗಳನ್ನು, ಕೊಳಕು, ಮೋಸದ ಅಸ್ತವ್ಯಸ್ತ ಭಾರತವನ್ನು, ಅದು ಹಲವು ತಿಕ್ಕಾಟಗಳಲ್ಲಿ ನಲುಗುವ ಪರಿಯನ್ನು ತೋರಿಸುತ್ತದೆ. ಹಾಗೆಯೇ ಈ ಕತೆ ಗಾಂಧಿ ತಂದುಕೊಟ್ಟ ಸ್ವಾತಂತ್ರ್ಯಕ್ಕೆ ಮತ್ತು ಗಾಂಧಿ ತತ್ವಕ್ಕೆ ಒದಗಿದ ದುರ್ಗತಿಯನ್ನೂ ಅತ್ಯಂತ ಸೂಕ್ಷ್ಮವಾಗಿ, ಕಲಾತ್ಮಕವಾಗಿ ಹೇಳುತ್ತದೆ.

ಜಯಮೋಹನ್ ಮತ್ತು ದೇವಿ ಭಾರತಿ ಅವರ ಕತೆಗಳು ಯಾವುದೇ ಭಾಷೆಯ ಘನತೆಯನ್ನು, ಸೃಜನಶೀಲ ಸಾಮರ್ಥ್ಯವನ್ನು ಎತ್ತಿ ಹಿಡಿಯುವ ಕತೆಗಳು; ಮತ್ತೆ ಮತ್ತೆ ಓದಬೇಕಾದ, ಎಳೆಎಳೆಯನ್ನು ಬಿಡಿಸಿ ನೊಡಬೇಕಾದ ಕತೆಗಳು.

  ತಮಿಳು ಕನ್ನಡಕ್ಕೆ ಹತ್ತಿರದ ಭಾಷೆ; ಕೈ ಚಾಚಿದರೆ ಎಟುಕುವ ಭಾಷೆ. ತಮಿಳು ಸಂಸ್ಕೃತಿ ಎಂಬುದು ಕೂಡಾ ಕನ್ನಡ ಸಂಸ್ಕೃತಿಯಲ್ಲಿ ಬೆರೆತ ಸಂಸ್ಕೃತಿಯೇ. ಹೀಗಾಗಿಯೇ ಕೆ. ನಲ್ಲತಂಬಿ ಅವರು ಈ ಕತೆಗಳು ಕನ್ನಡ ಸಂವೇದನೆಯನ್ನು ಹಿಗ್ಗಿಸಬಲ್ಲ ಕತೆಗಳಾಗಿ ಮಾರ್ಪಡಿಸಲು ಸಾಧ್ಯವಾಗಿದೆ. ಎಲ್ಲಿಯೂ ತೊಡಕಿಲ್ಲದಂತೆ ಈ ಕತೆಗಳನ್ನು ತಮ್ಮಿಳಕ್ಕೆ ತೆಗೆದುಕೊಳ್ಳುವ ಅವಕಾಶ ಕನ್ನಡಿಗರಿಗೆ ಸಾಧ್ಯವಾಗಿದೆ. ‘ತಮಿಳು ವಳರ್ಚಿ ಕಳಗಂ’ ಎಂಬ ಸಂಸ್ಥೆ ತಮಿಳು ಸಾಹಿತ್ಯವನ್ನು ಕನ್ನಡ, ತೆಲುಗು ಮತ್ತು ಮಲಯಾಳಂಗೆ ಕೊಂಡೊಯ್ಯಲು ಮಾಡಿರುವ ಈ ಸಾಹಸ ಗೌರವಕ್ಕೆ ಪಾತ್ರವಾಗುತ್ತದೆ. ದಕ್ಷಿಣ ಭಾರತೀಯ ಬಾಂಧವ್ಯವನ್ನೂ ಇಂತಹ ಕೃತಿಗಳು ಬಲಗೊಳಿಸುತ್ತವೆ. ಇಂತಹ ಕೆಲಸ ಕನ್ನಡದಲ್ಲೂ ಆಗಬೇಕು.

Writer - ಜಿ.ಪಿ. ಬಸವರಾಜು

contributor

Editor - ಜಿ.ಪಿ. ಬಸವರಾಜು

contributor

Similar News