''ವೈದ್ಯೆಯಾದ ನನಗೆ ಜೀವದ ಬೆಲೆ ಗೊತ್ತು, ಯಾರಿಗೂ ಇನ್ನೊಬ್ಬರ ಪ್ರಾಣ ತೆಗೆಯೋ ಹಕ್ಕಿಲ್ಲ''

Update: 2022-06-18 18:10 GMT
Photo: Deccan Chronicle 

ಹೈದರಾಬಾದ್: 'ಜೈಶ್ರೀರಾಮ್‌ ಘೋಷಣೆ ಕೂಗಿ ದನದ ಹೆಸರಿನಲ್ಲಿ ಕೊಲ್ಲುವುದು ಹಾಗೂ ಕಾಶ್ಮೀರದಲ್ಲಿ ನಡೆಯುವ ಹತ್ಯೆಗಳಿಗೂ ವ್ಯತ್ಯಾಸವಿಲ್ಲ' ಎಂದು ಹೇಳಿಕೆ ನೀಡಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಬಹುಭಾಷಾ ನಟಿ ಸಾಯಿ ಪಲ್ಲವಿ, ಚರ್ಚೆಗೆ ಕಾರಣವಾಗಿದ್ದ ತನ್ನ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

ತನ್ನ ಇನ್ಸ್ಟಗ್ರಾಮ್‌ ಖಾತೆ ಮೂಲಕ ಲೈವ್‌ ಬಂದ ಸಾಯಿ ಪಲ್ಲವಿ,  ವೈದ್ಯಕೀಯ ಪದವಿ ಪಡೆದಿರುವ ತನಗೆ ಜೀವದ ಬೆಲೆ ಗೊತ್ತು. ಯಾರ ಪ್ರಾಣ ತೆಗೆಯುವ ಕ್ಕು ಯಾರಿಗೂ ಇಲ್ಲ ಎಂದು ಹೇಳಿ ತಮ್ಮ ಹಿಂದಿನ ನಿಲುವನ್ನೇ ಪ್ರತಿಪಾದಿಸಿದ್ದಾರೆ. 

“ಇತ್ತೀಚೆಗೆ ನಾನು ನೀಡಿದ್ದ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಲೈವ್ ಬಂದಿದ್ದೇನೆ. ಇದೇ ಮೊದಲ ಬಾರಿಗೆ ಮಾತಾಡೋ ಮುನ್ನ ಎರಡು ಸಲ ಯೋಚನೆ ಮಾಡಿದ್ದೇನೆ. ಏಕೆಂದರೆ, ನಾನು ಆಡಿದ್ದ ಮಾತುಗಳನ್ನು ಎಲ್ಲರೂ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ಈ ಕುರಿತು ತಡವಾಗಿ ಸ್ಪಷ್ಟನೆ ನೀಡುತ್ತಿರೋದಕ್ಕೆ ಕ್ಷಮಿಸಿ. “

“ನೀವು ಲೆಫ್ಟ್ ಅಥವಾ ರೈಟ್ ವಿಂಗ್ ಬೆಂಬಲಿಗರಾ..? ಎಂಬ ಪ್ರಶ್ನೆಯೊಂದು ನನಗೆ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಕೇಳಲಾಯ್ತು. ನಾನು ಯಾವ ಪಂಥಕ್ಕೂ ಸೇರಿಲ್ಲ, ನ್ಯೂಟ್ರಲ್ ಎಂದೆ. ನಾವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಕಿತ್ತಾಡೋ ಮುನ್ನ ಮನುಷ್ಯರಾಗಬೇಕು ಎಂದು ಹೇಳಿದೆ.  ಯಾವುದೇ ಬೆಲೆ ತೆತ್ತಾದರೂ ಶೋಷಿತರನ್ನು ರಕ್ಷಿಸಬೇಕು ಎಂದು ಕೊಳ್ಳುತ್ತೇನೆ “ 

“ಬಳಿಕ ಇದರ ಕುರಿತು ವಿವರಣೆ ನೀಡಲು ಮುಂದಾದಾಗ ಎರಡು ಘಟನೆಗಳನ್ನು ಬಗ್ಗೆ ಮಾತಾಡಿದೆ. ಅವು ಕಾಶ್ಮೀರ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುತ್ತಿದ್ದರು ಎಂಬ ಕಾರಣಕ್ಕೆ ಮಾಡಿದ್ದ ಕೊಲೆ ಕುರಿತಾದ ಘಟನೆಗಳು. ಈ ಎರಡು ಘಟನೆಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದವು. ಲಾಕ್‌ಡೌನ್‌ ಸಮಯದಲ್ಲಿ ಗುಂಪೊಂದು ಜೈ ಶ್ರೀರಾಮ್ ಎಂದು ಕೂಗಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಂದ ವಿಡಿಯೋ ನೋಡಿ ಬಹಳ ಡಿಸ್ಟರ್ಬ್ ಆಗಿದ್ದೆ. “

“ನಾನು ದಿ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಿ ಡೈರೆಕ್ಟರ್ ಜತೆ ಮಾತಾಡಿದೆ. ಸಿನೆಮಾ ನನ್ನನ್ನು ಡಿಸ್ಟರ್ಬ್‌ ಮಾಡಿದೆ ಎಂದು ಹೇಳಿದ್ದೆ. ಹೀಗೆ ನಡೆಯೋ ಹಿಂಸಾಚಾರಕ್ಕೆ ಮುಂದಿನ ಪೀಳಿಗೆಯೂ ಬೆಲೆ ತೆರಬೇಕಾಗುತ್ತದೆ ಎಂದು ಅನಿಸಿತ್ತು. ಹಿಂಸೆ ಯಾವ ರೂಪದಲ್ಲಿ ಇದ್ದರೂ ತಪ್ಪೇ. ಧರ್ಮದ ಹೆಸರಿನಲ್ಲಿ ನಡೆಯೋ ಹಿಂಸೆಯೂ ಅಕ್ಷಮ್ಯ ಅಪರಾಧ. ನಾನು ಹೇಳಲು ಹೊರಟಿದ್ದು ಇದೇ, ನನ್ನ ಉದ್ದೇಶವೂ ಇದುವೇ ಆಗಿತ್ತು.”

“ನನ್ನ ಹೇಳಿಕೆಯನ್ನು ಹಲವರು ಟೀಕಿಸಿದ್ದಾರೆ, ತುಂಬಾ ಮಂದಿ ಗುಂಪು ಹತ್ಯೆಗಳನ್ನು ಸಮರ್ಥೀಸಿದ್ದಾರೆ. ಹಾಗೇ ಮಾಡೋದು ತಪ್ಪು. ನಾನೊಬ್ಬ ವೈದ್ಯಕೀಯ ಪದವಿ ಪಡೆದವಳಾಗಿ ನನಗೆ ಜೀವದ ಬೆಲೆ ಗೊತ್ತು, ಎಲ್ಲಾ ಜೀವಗಳು ಸಮಾನ. ಯಾರಿಗೂ ಇನ್ನೊಬ್ಬರ ಪ್ರಾಣ ತೆಗೆಯೋ ಹಕ್ಕಿಲ್ಲ. ನಾನು ನನ್ನ ಶಾಲಾ ದಿನಗಳನ್ನು ನೆನಪಿಸಿದರೆ, ನಾವು ಮಕ್ಕಳು ಜಾತಿ, ಸಂಸ್ಕೃತಿ ಹಿನ್ನೆಲೆಯಲ್ಲಿ ಯಾರನ್ನೂ ಬೇಧಬಾವ ಮಾಡುತ್ತಿರಲಿಲ್ಲ. ಮುಂದೆ ಹುಟ್ಟುವ ಮಕ್ಕಳು ಈ ಧರ್ಮದಲ್ಲಿ ನಡೆಯುತ್ತಿರೋ ಹಿಂಸಾಚಾರಕ್ಕೆ ಬಲಿಯಾಗೋ ದಿನಗಳ ಬಾರದಿರಲಿ, ಯಾವ ಮಗುವೂ ಅವನ/ಅವಳ ಗುರುತಿಗೆ ಹೆದರುವ ದಿನಗಳು ಬಾರದಿರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಇಷ್ಟಪಡುತ್ತೇನೆ. ನಾನು ಏನು ತಪ್ಪು ಮಾಡಿದ್ದೇನೆ ಎಂದು ನೋಡುತ್ತಿದ್ದಾಗ, ನಿಮ್ಮ ಅಭೂತಪೂರ್ವ ಬೆಂಬಲಗಳು ನಾನು ಒಂಟಿಯಲ್ಲ ಎಂಬ ಭಾವನೆ ನೀಡಿದೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು” ಎಂದು ಸಾಯಿ ಪಲ್ಲವಿ ಲೈವ್‌ನಲ್ಲಿ ಹೇಳಿದ್ದಾರೆ. ಈ ಸ್ಪಷ್ಟನೆಗೆ ಹಲವಾರು ಮೆಚ್ಚುಗೆಗಳು ಹರಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News