ಅತಿ ಭದ್ರತೆ ಇರುವ ಪ್ರದೇಶಕ್ಕೆ ಕಸ, ಬಾಟಲ್‌ ಹೇಗೆ ಬಂತು?: ʼಕಸ ಹೆಕ್ಕಿದʼ ಪ್ರಧಾನಿಗೆ ನೆಟ್ಟಿಗರ ಪ್ರಶ್ನೆ

Update: 2022-06-19 17:36 GMT

ಹೊಸದಿಲ್ಲಿ: ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಅಡಿಯಲ್ಲಿ ನಿರ್ಮಿಸಿ ಹೊಸದಾಗಿ ಪ್ರಾರಂಭಿಸಲಾದ ಐಟಿಪಿಒ ಸುರಂಗದಲ್ಲಿ ಕಸ ಹೆಕ್ಕುವ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವ್ಯಂಗ್ಯಕ್ಕೆ ಈಡಾಗಿದೆ. ಪ್ರಧಾನಿ ಭೇಟಿಯಾಗುವ ಪರಿಸರವನ್ನು ಮೊದಲೇ ಸ್ವಚ್ಛವಾಗಿರಿಸುವುದಿಲ್ಲವೇ ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. 

“3000 ಎಸ್‌ಪಿಜಿ ಸಿಬ್ಬಂದಿಗಳು ಪ್ರತಿದಿನ ಸುಮಾರು 20 ಮಿಲಿಯನ್ ರೂಪಾಯಿಗಳ ಬಜೆಟ್ ಅನ್ನು ಆತ್ಮೀಯ ನಾಯಕನ (ಪ್ರಧಾನಿ ಮೋದಿಯ) ಭದ್ರತೆಗಾಗಿ ಖರ್ಚು ಮಾಡುತ್ತಾರೆ. ಆದರೂ, ಅವರು (ಮೋದಿಯ) ಯೋಜಿತ ಭೇಟಿಯ ಮೊದಲು ಸ್ವಚ್ಛಗೊಳಿಸಲು ವಿಫಲರಾಗುತ್ತಾರೆಯೇ?” ಎಂದು ಅಶೋಕ್‌ ಸ್ವೈನ್‌ ಪ್ರಶ್ನಿಸಿದ್ದಾರೆ. 

“ಪ್ರಧಾನಿಯವರ ಕಾರ್ಯಕ್ರಮ ಇದ್ದ ಅತಿ ಭದ್ರತೆಯ ಸುರಂಗಕ್ಕೆ ಪಕ್ಷಿಗಳೂ ಹಾರುತ್ತಿರಲಿಲ್ಲ. ಹಾಗಿರುವಾಗ, ಕಸ, ನೀರಿನ ಬಾಟಲಿ ಎಲ್ಲಿಂದ ಬಂತು?” ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿವಿ ಪ್ರಶ್ನಿಸಿದ್ದಾರೆ. 

ಉದ್ಘಾಟನೆಗೂ ಮುನ್ನವೇ ಕಸ ಹೇಗೆ ಇರುತ್ತದೆ ಮತ್ತು SPG ಏನು ಮಾಡಿತು? ಅವರು ಪ್ರದೇಶವನ್ನು ಪರಿಶೀಲಿಸಿಲ್ಲವೇ, ಸ್ವಚ್ಛಗೊಳಿಸಲಿಲ್ಲವೇ? ಎಂಬ ಪ್ರಶ್ನೆಗಳನ್ನು ಎತ್ತಿರುವ ಟಿಆರ್‌ಎಸ್‌ ಪಕ್ಷದ ಯತೀಶ್‌ ರೆಡ್ಡಿ, ಪ್ರಧಾನಿಯವರ ಪ್ರಚಾರ ತಂಡವು (ಪಿಆರ್) ಮೊದಲೇ ಕಸಗಳನ್ನು ಸುರಿದು ನಂತರ ಹೆಕ್ಕುವಂತೆ ಮಾಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆ ಬೀಚ್‌ ಒಂದರಲ್ಲಿ ಕಸಗಳನ್ನು ಹೆಕ್ಕುತ್ತಿರುವ ಪ್ರಧಾನಿ ಮೋದಿ ಅವರ ಚಿತ್ರವು ಭಾರೀ ಸುದ್ದಿಯಾಗಿತ್ತು. ಇದೂ ಪ್ರಚಾರದ ಗಿಮಿಕ್‌ ಎಂದು ಹಲವರು ಆಕ್ಷೇಪ ಎತ್ತಿದ್ದರು. 

“ಬಹುತೇಕ ಎಲ್ಲವನ್ನೂ ಕಾರ್ಪೊರೇಟ್‌ಗಳಿಗೆ ಒಪ್ಪಿಸಿದ ನಂತರ, ಅವರು ಕಸವನ್ನು ಮಾತ್ರ ಎತ್ತಿಕೊಂಡು ಹೋಗುತ್ತಾರೆ. ಅಲ್ಲದೆ ಅವರು ಕಸವನ್ನು ಎತ್ತುವಲ್ಲಿ ಎಷ್ಟು ಅಸಮರ್ಥರಾಗಿದ್ದಾರೆಂದರೆ ಭಾರತವು ಪರಿಸರ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿದೆ.” ಎಂದು ಅಲೋಕ್‌ ವರ್ಮಾ ಎಂಬವರು ಟ್ವೀಟ್‌ ಮಾಡಿದ್ದಾರೆ.

ಕ್ಯಾಮರಾದ ಎದುರು ಹೇಗೆ ನಟಿಸಬೇಕೆಂದು ಕೆನಡಾದ ಕುಮಾರ್ (ಅಕ್ಷಯ್‌ ಕುಮಾರ್) ಇವರಿಂದ ಕಲಿಯಬೇಕು ಎಂದು ಅಡಾವಿಡ್‌ ಎಂಬವರು ಟ್ಟೀಟ್‌ ಮಾಡಿದ್ದಾರೆ. 

“ಪ್ರದೇಶವನ್ನು ಸರಿಯಾಗಿ ಸ್ವಚ್ಛಗೊಳಿಸದೆ ಮತ್ತೊಮ್ಮೆ SPG ನಮ್ಮ ಪ್ರಧಾನಿಗಳ ಜೀವಕ್ಕೆ ಅಪಾಯವನ್ನುಂಟುಮಾಡಿದೆ! ಪ್ರಧಾನ ಮಂತ್ರಿಯ ಭದ್ರತೆಯ ಮುಖ್ಯಸ್ಥರಾಗಿರುವವರನ್ನು ವಜಾಗೊಳಿಸಬೇಕು.” ಎಂದು ವ್ಯಂಗ್ಯವಾಗಿ ಲಾವಣ್ಯ ಬಲ್ಲಾಳ್ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News