‘ಅಗ್ನಿಪಥ್’ನಲ್ಲಿ ರಿಯಾಯಿತಿ ಮಾಡಿದ್ದು ಪೂರ್ವಯೋಜಿತವಾಗಿತ್ತು, ಪ್ರತಿಭಟನೆಗಳಿಗೆ ಮಣಿದೇನಲ್ಲ: ಕೇಂದ್ರ ಸರಕಾರ

Update: 2022-06-19 18:47 GMT
PHOTO PTI

ಹೊಸದಿಲ್ಲಿ,ಜೂ.19: ‘ಅಗ್ನಿಪಥ್’ ಯೋಜನೆಯಲ್ಲಿ ಸರಕಾರವು ಪ್ರಕಟಿಸಿರುವ ರಿಯಾಯಿತಿಗಳಿಗೆ ಪ್ರತಿಭಟನೆಗಳು ಮತ್ತು ಬೆಂಕಿ ಹಚ್ಚುವಿಕೆ ಕಾರಣವಲ್ಲ,ಸರಕಾರವು ಅದಾಗಲೇ ಈ ರಿಯಾಯಿತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿತ್ತು ಎಂದು ರವಿವಾರ ಇಲ್ಲಿ ಸಶಸ್ತ್ರ ಪಡೆಗಳ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಲೆ.ಜ.ಅನಿಲ್ ಪುರಿ ಅವರು,ಸಶಸ್ತ್ರ ಪಡೆಗಳು ಶಿಸ್ತಿಗೆ ಹೆಸರಾಗಿವೆ ಮತ್ತು ಶಿಸ್ತುಬದ್ಧ ಅಭ್ಯರ್ಥಿಗಳು ಮಾತ್ರ ಸೇನೆಗೆ ಸೇರ್ಪಡೆಗೊಳ್ಳುವುದರಿಂದ ‘ಅಗ್ನಿಪಥ್’ಯೋಜಕರು ಪ್ರತಿಭಟನೆಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.

‌1999ರ ಕಾರ್ಗಿಲ್ ಯುದ್ಧದ ಕುರಿತು ವರದಿಯೊಂದನ್ನು ಉಲ್ಲೇಖಿಸಿದ ಅವರು,ಹೆಚ್ಚಿನ ಯೋಧರು 30ಕ್ಕೂ ಹೆಚ್ಚಿನ ವಯೋಮಾನದವರಾಗಿದ್ದರು ಮತ್ತು ವಯಸ್ಸಿನ ಅಂಶವು ಕಳವಳದ ವಿಷಯವಾಗಿತ್ತು ಎಂದು ತಿಳಿಸಿದರು.

ಕೋವಿಡ್ ಸಾಂಕ್ರಾಮಿಕ ಮತ್ತು ಸುದೀರ್ಘ ಲಾಕ್ಡೌನ್ ಅಂತಿಮವಾಗಿ ‘ಅಗ್ನಿಪಥ್’ ಯೋಜನೆಯನ್ನು ಹೊರತರಲು ಯೋಜಕರಿಗೆ ಅವಕಾಶ ನೀಡಿವೆ. ಯೋಜನೆಯನ್ನು ಅನುಷ್ಠಾನಿಸಲು ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ ಎಂದ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಲೆ.ಜ.ಪುರಿ,‘ನಮ್ಮ ಪಡೆಗಳನ್ನು ಯುವಶಕ್ತಿಯನ್ನಾಗಿಸುವುದು ಹೇಗೆ ಎನ್ನುವ ಕುರಿತು ನಾವು ಸುದೀರ್ಘ ಚರ್ಚೆಯನ್ನು ನಡೆಸಿದ್ದೇವೆ. ನಾವು ವಿದೇಶಿ ಪಡೆಗಳನ್ನೂ ಅಧ್ಯಯನ ಮಾಡಿದ್ದೇವೆ. ನಮಗೆ ಯುವಜನರು ಬೇಕು.ಅವರು ಅಪಾಯಗಳಿಗೆ ಹೆದರುವುದಿಲ್ಲ. ಅವರಲ್ಲಿ ಉತ್ಸಾಹವಿದೆ. ಅವರು ‘ಜೋಷ್ ಮತ್ತು ಹೋಷ್’ ಎರಡನ್ನೂ ಸಮಾನವಾಗಿ ಹೊಂದಿದ್ದಾರೆ ’ಎಂದರು.
 
ಆಗಸ್ಟ್ ಪೂರ್ವಾರ್ಧದಲ್ಲಿ ಸೇನಾ ಭರ್ತಿ ರ್ಯಾಲಿಗಳು ಆರಂಭವಾಗಲಿವೆ ಮತ್ತು ‘ಅಗ್ನಿವೀರ’ರ ಮೊದಲ ತಂಡವು ಡಿಸೆಂಬರ್ ಮೊದಲ ವಾರದಲ್ಲಿ ಮತ್ತು ಎರಡನೇ ತಂಡವು ಫೆಬ್ರವರಿಯಲ್ಲಿ ಹೊರಬರಲಿವೆ. ಸೇನೆಯು 83 ನೇಮಕಾತಿ ರ್ಯಾಲಿಗಳನ್ನು ನಡೆಸಲಿದೆ ಮತ್ತು ದೇಶದ ಪ್ರತಿಯೊಂದೂ ಗ್ರಾಮವನ್ನೂ ತಲುಪಲಿದೆ ಎಂದು ಲೆ.ಜ.ಸಿ.ಬನ್ಸಿ ಬೋಪಣ್ಣ ತಿಳಿಸಿದರು.

ನೌಕಾಪಡೆಗಾಗಿ ‘ಅಗ್ನಿವೀರ’ರ ಮೊದಲ ತಂಡವು ತರಬೇತಿಗಾಗಿ ನ.21ರಂದು ಒಡಿಶಾದಲ್ಲಿಯ ಐಎನ್ಎಸ್ ಚಿಲ್ಕಾವನ್ನು ತಲುಪಲಿದೆ.

ವಾಯುಪಡೆಯು ಈ ವರ್ಷದ ಡಿಸೆಂಬರ್ನಲ್ಲಿ ‘ಅಗ್ನಿವೀರ’ರ ಮೊದಲ ತಂಡವನ್ನು ಪಡೆಯಲಿದೆ ಮತ್ತು ಅದೇ ತಿಂಗಳು ತರಬೇತಿ ಆರಂಭವಾಗಲಿದೆ. ಪೊಲೀಸ್ ಪ್ರಕರಣವನ್ನು ಎದುರಿಸುತ್ತಿರುವ ಯಾವುದೇ ಅಭ್ಯರ್ಥಿ ‘ಅಗ್ನಿಪಥ್ ’ ಸೇರಲು ಅರ್ಜಿಯನ್ನು ಸಲ್ಲಿಸುವಂತಿಲ್ಲ ಎಂದು ಹೇಳಿದ ಲೆ.ಜ.ಪುರಿ,‘ಅಗ್ನಿಪಥ್ ’ಯೋಜನೆಯನ್ನು ಹಿಂದೆಗೆದುಕೊಳ್ಳವುದಿಲ್ಲ. ಅದನ್ನೇಕೆ ಹಿಂದೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.

ಈ ನಡುವೆ ಕೆಲವು ರಾಜ್ಯಗಳಲ್ಲಿ ‘ಅಗ್ನಿಪಥ್’ ಪ್ರತಿಭಟನೆಗಳು ಮುಂದುವರಿದಿದ್ದು,ಉತ್ತರ ಪ್ರದೇಶ,ತೆಲಂಗಾಣ ಮತ್ತು ಬಿಹಾರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿವೆ. ಪ್ರತಿಭಟನೆಗಳ ನಡುವೆಯೇ ಕೇಂದ್ರವು ರಕ್ಷಣಾ ಸಚಿವಾಲಯದ ಹುದ್ದೆಗಳಲ್ಲಿ,16 ರಕ್ಷಣಾ ಪಿಎಸ್ಯುಗಳಲ್ಲಿ,ಕೇಂದ್ರೀಯ ಸಶಸ್ತ್ರ ಮೀಸಲು ಪಡೆಗಳಲ್ಲಿ ಮತ್ತು ಅಸ್ಸಾ ರೈಫಲ್ಸ್ನಲ್ಲಿ ‘ಅಗ್ನಿವೀರ’ರಿಗೆ ಮೀಸಲಾತಿ ಸೇರಿದಂತೆ ಹಲವಾರು ರಿಯಾಯಿತಿಗಳನ್ನು ಪ್ರಕಟಿಸಿದೆ.

ಕರ್ತವ್ಯದಲ್ಲಿ ಮೃತಪಟ್ಟ ಅಗ್ನಿವೀರರಿಗೆ ಒಂದು ಕೋಟಿ ರೂ. ವಿಮೆ ಸೌಲಭ್ಯ

‘ಅಗ್ನಿವೀರ’ರು ಕರ್ತವ್ಯದ ಸಂದರ್ಭದಲ್ಲಿ ಮೃತಪಟ್ಟರೆ ಒಂದು ಕೋ.ರೂ.ಗಳ ವಿಮೆ ಪರಿಹಾರವನ್ನು ಪಡೆಯಲಿದ್ದಾರೆ ಎಂದು ಲೆ.ಜ.ಪುರಿ ತಿಳಿಸಿದರು. ‘ಅಗ್ನಿಪಥ್’ ಯೋಜನೆಯಡಿ ಯೋಧರ ನೇಮಕಾತಿ ಸಂಖ್ಯೆ ಭವಿಷ್ಯದಲ್ಲಿ ಒಂದ ಲಕ್ಷವನ್ನು ದಾಟಲಿದೆ ಎಂದು ಹೇಳಿದ ಅವರು,ಸರಕಾರವು ಯೋಜನೆಯ ವಿಶ್ಲೇಷಣೆಗಾಗಿ 46,000 ಸೇನಾಕಾಂಕ್ಷಿಗಳ ನೇಮಕಾತಿಯೊಂದಿಗೆ ಆರಂಭಿಸಲಿದೆ ಎಂದರು.

‘ಮುಂದಿನ 4-5 ವರ್ಷಗಳಲ್ಲಿ 50,000--60,000 ಯೋಧರನ್ನು ನಾವು ಭರ್ತಿ ಮಾಡಿಕೊಳ್ಳುತ್ತೇವೆ ಮತ್ತು ಇದು ಬಳಿಕ 90,000-100,000ಕ್ಕೆ ಹೆಚ್ಚಲಿದೆ. ಸದ್ಯೋಭವಿಷ್ಯದಲ್ಲಿ ಈ ಸಂಖ್ಯೆ ಒಂದೂಕಾಲು ಲಕ್ಷವನ್ನು ತಲುಪಲಿದೆ’ ಎಂದು ಅವರು ತಿಳಿಸಿದರು.

ಪ್ರತಿ ವರ್ಷ ಸಶಸ್ತ್ರ ಪಡೆಗಳಿಂದ ಸುಮಾರು 17,600 ಜನರು ನಿವೃತ್ತರಾಗುತ್ತಾರೆ ಎಂದ ಅವರು,ನಿವೃತ್ತಿಯ ಬಳಿಕ ಮುಂದೇನು ಮಾಡುತ್ತೀರಿ ಎಂದು ಅವರನ್ನು ಯಾರೂ ಕೇಳುವುದಿಲ್ಲ ಎಂದರು. ಸಿಯಾಚಿನ್ನಂತಹ ಮತ್ತು ಇತರ ಪ್ರದೇಶಗಳಲ್ಲಿ ’ಅಗ್ನಿವೀರ’ರು ಹಾಲಿ ಸೇವೆಯಲ್ಲಿರುವ ಕಾಯಂ ಯೋಧರಿಗೆ ಅನ್ವಯವಾಗುವ ಭತ್ಯೆಗಳನ್ನು ಪಡೆಯುತ್ತಾರೆ. ಸೇವಾ ಷರತ್ತುಗಳಲ್ಲಿ ಅವರ ವಿರುದ್ಧ ಯಾವುದೇ ತಾರತಮ್ಯವಿರುವುದಿಲ್ಲ ಎಂದು ಲೆ.ಜ.ಪುರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News