ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಳ

Update: 2022-06-20 01:51 GMT

ಹೊಸದಿಲ್ಲಿ : ದೇಶದಲ್ಲಿ ರವಿವಾರ ಕೊನೆಗೊಂಡ ಒಂದು ವಾರದ ಅವಧಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಾಲ್ಕು ತಿಂಗಳಲ್ಲೇ ಗರಿಷ್ಠ ಅಂದರೆ ಶೇಕಡ 62ರಷ್ಟು ಏರಿಕೆ ಕಂಡಿದೆ. ಒಂದು ವಾರದಲ್ಲಿ ದೇಶಾದ್ಯಂತ ಸುಮಾರು 80 ಸಾವಿರ ಪ್ರಕರಣಗಳು ವರದಿಯಾಗಿವೆ.

ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕಡಿಮೆ ಇದ್ದರೂ, ಕಳೆದ ವಾರ ಒಟ್ಟು 93 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು ಹಿಂದಿನ ಎರಡು ವಾರಗಳಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆಗಿಂತ ಅಧಿಕ. ಕಳೆದ ಎರಡು ವಾರಗಳಲ್ಲಿ ಕ್ರಮವಾಗಿ 45 ಮತ್ತು 41 ಮಂದಿ ಸೊಂಕಿಗೆ ಬಲಿಯಾಗಿದ್ದರು.

ದೇಶದಲ್ಲಿ ಜೂನ್ 13 ರಿಂದ 19ರ ವರೆಗೆ ಒಟ್ಟು 79,250 ಪ್ರಕರಣಗಳು ವರದಿಯಾಗಿದ್ದು, ಹಿಂದಿನ ವಾರ 48,769 ಪ್ರಕರಣಗಳು ದಾಖಲಾಗಿದ್ದವು. ಇದು ಫೆಬ್ರುವರಿ 21-27ರ ಅವಧಿಯಲ್ಲಿ ದಾಖಲಾದ 86 ಸಾವಿರ ಪ್ರಕರಣಗಳ ಬಳಿಕ ವರದಿಯಾದ ಗರಿಷ್ಠ ಸಂಖ್ಯೆಯಾಗಿದೆ. ಕಳೆದ ನಾಲ್ಕು ವಾರಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಎರಡು ವಾರಗಳಿಂದ ಏರಿಕೆ ಪ್ರಮಾಣ ವೇಗ ಪಡೆದಿದೆ.

ದೇಶದಲ್ಲಿ ಒಮೈಕ್ರಾನ್ ಉಪ ಪ್ರಬೇಧಗಳಾದ ಬಿಎ-2 ಮತ್ತು ಬಿಎ2.38 ಹಾಗೂ ಬಿಎ.4 ಮತ್ತು ಬಿಎ5 ಸೋಂಕುಗಳು ಕಾಣಿಸಿಕೊಂಡಿರುವುದು ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಲು ಕಾರಣ ಎಂದು ಇಂಡಿಯನ್ ಸಾರ್ಸ್-ಕೋವ್-2 ಜೆನೋಮಿಕ್ಸ್ ಕನ್‍ಸ್ಟೊರಿಯಂ ಹೇಳಿದೆ.

ಬಹುತೇಕ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕರಣಗಳು ಒಂದು ವಾರದ ಅವಧಿಯಲ್ಲಿ ಏರಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 25172 ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ವಾರ ದಾಖಲಾದ 17380 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 45ರಷ್ಟು ಅಧಿಕ. ಕೇರಳದಲ್ಲೂ ಶೇಕಡ 42ರಷ್ಟು ಏರಿಕೆ ಕಂಡುಬಂದಿದ್ದು, ಒಟ್ಟು 20500 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News