'ಅಗ್ನಿಪಥ್' ಯೋಜನೆ ವಿರೋಧಿಸಿ ಇಂದು ಭಾರತ್ ಬಂದ್, ಹಲವು ರಾಜ್ಯಗಳಲ್ಲಿ ಮುನ್ನೆಚ್ಚರಿಕೆ

Update: 2022-06-20 04:48 GMT
Photo: PTI

ಹೊಸದಿಲ್ಲಿ:  'ಅಗ್ನಿಪಥ್' ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಶಸ್ತ್ರ ಪಡೆಗಳ ಆಕಾಂಕ್ಷಿಗಳು ಸೋಮವಾರ ಭಾರತ್ ಬಂದ್‌ಗೆ ಕರೆ ನೀಡಿದ್ದು, ಹಲವು ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 'ಅಗ್ನಿಪಥ್' ಯೋಜನೆಯನ್ನು ಹಿಂತೆಗೆದುಕೊಳ್ಳುವ ವಿಚಾರವನ್ನು ಸರಕಾರ ತಳ್ಳಿಹಾಕಿದೆ.

ಪಂಜಾಬ್ ಸರಕಾರವು ಸೂಚನೆಯನ್ನು ಹೊರಡಿಸಿದ್ದು, ಕೇಂದ್ರ ಸರಕಾರಿ ಕಚೇರಿಗಳು, ಸೇನಾ ನೇಮಕಾತಿ ಕೇಂದ್ರಗಳು ಹಾಗೂ ಬಿಜೆಪಿ ಮತ್ತು ಹಿಂದೂ ನಾಯಕರಿಗೆ ಸಂಬಂಧಿಸಿದ ಕಚೇರಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಹೊಸ ಯೋಜನೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳನ್ನು ಕಂಡ ಬಿಹಾರದಲ್ಲಿ 350 ರೈಲುಗಳನ್ನು ರದ್ದುಗೊಳಿಸಲಾಗಿದೆ. ಬಿಹಾರ ಸರಕಾರವು ಪಕ್ಷದ ಕಚೇರಿಗಳಿಗೆ ಭದ್ರತೆಯನ್ನು ಹೆಚ್ಚಿಸಿದೆ. ಸದ್ಯಕ್ಕೆ, 20 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಹಿಂಸಾಚಾರ ಅಥವಾ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸುವ ಯಾರನ್ನಾದರೂ ಬಂಧಿಸಲು ತನ್ನ ಸಂಪೂರ್ಣ ಪಡೆ ಇಂದು ಕರ್ತವ್ಯದಲ್ಲಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಬಂದ್ ಕರೆ ನಡುವೆ ಸೋಮವಾರ ಶಾಲೆಗಳನ್ನು ಮುಚ್ಚಲಾಗಿದೆ. 9 ಮತ್ತು 11 ನೇ ತರಗತಿಗಳ ನಡೆಯುತ್ತಿರುವ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ ಎಂದು ಅಧಿಕಾರಿಗಳ ಹೇಳಿಕೆಯನ್ನು  ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ದಿಲ್ಲಿ ಬಳಿಯ ಗೌತಮ್ ಬುದ್ಧ ನಗರದಲ್ಲಿ ಭಾರೀ ಜನ ಸಂದಣಿಯನ್ನು  ನಿಷೇಧಿಸುವ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಜನರಿಗೆ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News