'ನೌಟಂಕಿ' ಕಂಪೆನಿಗೆ 'ತಮಾಶಾ ಕಂಪೆನಿಯ' ಗ್ಯಾರಂಟಿ ಮೇಲೆ 141 ಕೋಟಿ ಸಾಲ ಕೊಟ್ಟ ಬ್ಯಾಂಕುಗಳು !

Update: 2022-06-20 13:16 GMT

ಮಡಿಕೇರಿ: 'ನೌಟಂಕಿ' ಕಂಪೆನಿಗೆ 'ತಮಾಶಾ ಕಂಪೆನಿಯ' ಗ್ಯಾರಂಟಿ ಮೇಲೆ ಬ್ಯಾಂಕ್ ಗಳು 141 ಕೋಟಿ ರೂ ಸಾಲ ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚಾ ವಿಷಯವಾಗಿದೆ. IDBI, HDFC, Bank of Baroda ಬ್ಯಾಂಕುಗಳು ಸೇರಿ ಕೊಟ್ಟಿರುವ ಸಾಲ ಸುಸ್ತಿಯಾಗಿದ್ದು, ಸಾಲಗಾರರ ಆಸ್ತಿ ಹರಾಜು ಹಾಕುವ ಬಗ್ಗೆ ಐಡಿಬಿಐ ಬ್ಯಾಂಕ್‌ ಜಾಹಿರಾತು ನೀಡಿದೆ. ಈ ಜಾಹಿರಾತುವಿನಲ್ಲಿರುವ ʼಸಾಲಗಾರʼ ಹಾಗೂ ʼಜಾಮೀನುದಾರʼ ಕಂಪೆನಿಗಳ ಹೆಸರು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸಾಲಗಾರ ಕಂಪನಿಯಾಗಿರುವ ʼಗ್ರೇಟ್ ಇಂಡಿಯನ್ ನೌಟಂಕಿ ಕಂಪನಿ ಪ್ರೈ. ಲಿಮಿಟೆಡ್ʼ ಕಂಪೆನಿಯು, ʼಗ್ರೇಟ್ ಇಂಡಿಯನ್ ತಮಾಷಾ ಕಂಪನಿ ಪ್ರೈ. ಲಿಮಿಟೆಡ್ʼ ಕಂಪೆನಿಗೆ ಸೇರಿದ ಮಡಿಕೇರಿಯಲ್ಲಿರುವ ಆಸ್ತಿ ಖರೀದಿಗೆ ಸಾಲ ಪಡೆದಿದೆ, ತಮಾಷೆಯೆಂದರೆ ಈ ಸಾಲದ ಜಾಮೀನುದಾರರಲ್ಲಿ ʼಗ್ರೇಟ್ ಇಂಡಿಯನ್ ತಮಾಷಾ ಕಂಪನಿ ಪ್ರೈ. ಲಿಮಿಟೆಡ್ʼ  ಸೇರಿದೆ. 

ಇದೀಗ, ಈ ಸಾಲವು ಸುಸ್ತಿಯಾಗಿದ್ದು, ಹರಾಜಿನ ಮಟ್ಟಕ್ಕೆ ತಲುಪಿರುವುದು ಈ ವ್ಯವಹಾರದ ಬಗ್ಗೆ ಸಾಕಷ್ಟು ಚರ್ಚೆ ಏಳುವಂತೆ ಮಾಡಿದೆ. ಸಾಮಾನ್ಯ ಜನರು ಬ್ಯಾಂಕಿನಿಂದ ಸಾಲ ಪಡೆಯುವುದೇ ಸಾಹಸವಾಗಿರುವ ಈ ಕಾಲದಲ್ಲಿ, ʼನೌಟಂಕಿ ( ಕಪಟ ) ʼ ಕಂಪೆನಿಗಳಿಗೆಲ್ಲಾ ಬ್ಯಾಂಕುಗಳು ಇಷ್ಟು ದೊಡ್ಡದ ಸಾಲ ನೀಡಬಹುದೆ ಎಂದು ನೆಟ್ಟಿಗರು ಪ್ರಶ್ನಿಸಿಕೊಳ್ಳುತ್ತಿದ್ದಾರೆ. 

ಈ ಕುರಿತು ಹಿರಿಯ ಲೇಖಕ ತಮಲ್‌ ಬಂದ್ಯೋಪಾಧ್ಯಾಯ (@TamalBandyo) ಟ್ವೀಟ್‌  ಮಾಡಿದ್ದು, ʼಗ್ರೇಟ್ ಇಂಡಿಯನ್ ನೌಟಾಂಕಿ ಕಂಪನಿಗೆ ಗ್ರೇಟ್ ಇಂಡಿಯನ್ ತಮಾಶಾ ಕಂಪನಿಯಿಂದ ಆಸ್ತಿಯನ್ನು ಖರೀದಿಸಲು 3 ಬ್ಯಾಂಕ್‌ಗಳು ಸಾಲ ನೀಡಿವೆ. ತಮಾಶಾ ಕಂಪೆನಿ ಜಾಮೀನುದಾರ ಕೂಡಾ ಹೌದು. ಈಗ ಅದು #NPA (ಕಾರ್ಯನಿರ್ವಹಿಸದ ಆಸ್ತಿ). ಈ ಹೆಸರುಗಳು ಯಾವುದೇ ಸಂದೇಹ ಮೂಡಿಸಲಿಲ್ಲವೇ?ʼ ಎಂದು ಪ್ರಶ್ನಿಸಿದ್ದಾರೆ. 

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಜೆ.ಪಿ ರಂಜನ್‌ ಎಂಬವರು ʼಇದು ಭಾರತದ ಮಹಾನ್‌ ಬ್ಯಾಂಕ್‌ ದರೋಡೆʼ ಎಂದು ಕಮೆಂಟ್‌ ಹಾಕಿದ್ದಾರೆ. 

ಇದನ್ನು ಮರುಟ್ವೀಟಿಸಿರುವ ಶ್ಯಾಮಲ್‌ ಮುಂಶಿ ಎಂಬವರು, ʼ ಈ ರಾಮರಾಜ್ಯದಲ್ಲಿ ಏನು ಬೇಕಾದರೂ ಸಾಧ್ಯ!ʼ ಎಂದು ಬರೆದಿದ್ದಾರೆ. 

ಕನ್ನಡದ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರ್‌ ಕೂಡಾ ಈ ಬಗ್ಗೆ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದು, “ಈ ಸಾಲ ಕೊಟ್ಟ ಬ್ಯಾಂಕುಗಳ ಮ್ಯಾನೇಜರ್‌ಗಳಿಗೆ ಕಂಪನಿಗಳ ಹೆಸರು ನೋಡಿ, ಸ್ವಲ್ಪ ಜಾಗ್ರತೆ ಮಾಡಿ ಪರಿಶೀಲಿಸಿಕೊಂಡು ಸಾಲ ಕೊಡಬೇಕು ಅಂತ ಅನ್ನಿಸಲಿಲ್ಲವೇ? ಕಂಪನಿಗಳು ಹೆಸರಿಗೆ ತಕ್ಕಂತೆ ನಡೆದುಕೊಂಡಿವೆ” ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News